ADVERTISEMENT

ಅಜ್ಜ ನೆಟ್ಟ ಆಲದ ಮರ ಎಂದು...

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 17:58 IST
Last Updated 12 ಆಗಸ್ಟ್ 2019, 17:58 IST

ಕಾಂಗ್ರೆಸ್ ಪಕ್ಷ ಈಗ ಐಸಿಯುನಲ್ಲಿ ಇದೆ. ಇದಕ್ಕೆ ಮತ್ತೆ ಕಾಯಕಲ್ಪ ಸಿಕ್ಕಿ ಮೈಕೊಡವಿ ನಿಲ್ಲಬೇಕು ಎನ್ನುವುದೇ ಭಾರತೀಯರ ಆಶಯ. ಒಂದು ಪಕ್ಷದಲ್ಲಿ ಏಳುಬೀಳು ಸಾಮಾನ್ಯ.

ಒಂದು ಕಾಲದಲ್ಲಿ ಬರೀ ಇಬ್ಬರು ಸಂಸದರನ್ನು ಹೊಂದಿದ್ದ ಬಿಜೆಪಿ ಇಂದು 303ಕ್ಕೆ ಏರಿರುವುದು ಕಾರ್ಯಕರ್ತರ ಸತತ ಪ್ರಯತ್ನ ಮತ್ತು ನೇತಾರರ ಪಕ್ಷ ನಿಷ್ಠೆಯಿಂದ. ಇಂದು ಅಲ್ಲಿ ಒಂದು ಸ್ಥಾನವೂ ಮೊದಲೇ ನಿಶ್ಚಿತವಲ್ಲ. ಮುಂಚೂಣಿಯ ಅಗ್ರನಾಯಕ ನಿವೃತ್ತನಾದರೆ ಅಥವಾ ಕಾರಣಾಂತರದಿಂದ ಸ್ಥಾನ ತ್ಯಜಿಸಿದರೆ ಆ ಸ್ಥಾನ ತುಂಬಲು ಹಲವರು ಸರದಿಯಲ್ಲಿ ಇರುತ್ತಾರೆ.

ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಅವರಂತಹ ಪ್ರಮುಖ ನಾಯಕರು ಚುನಾವಣೆಗೆ ನಿಲ್ಲದೆ ಇದ್ದರೂ ಅವರ ಸ್ಥಾನವನ್ನು ಬೇರೆಯವರು ಅಷ್ಟೇ ಸಮರ್ಥವಾಗಿ ತುಂಬಿದ್ದಾರೆ. ಅಷ್ಟೇಕೆ, ವಾಜಪೇಯಿಯವರ ನಂತರ ಪ್ರಧಾನಿಯಾದ ನರೇಂದ್ರ ಮೋದಿ ಅವರೂ ಅದಕ್ಕೆ ಮುನ್ನ ರಾಷ್ಟ್ರಮಟ್ಟದಲ್ಲಿ ಮಿಂಚಿರಲಿಲ್ಲ. ಉತ್ತರಪ್ರದೇಶದ ಚುನಾವಣೆಯ ಅಭೂತಪೂರ್ವ ಯಶಸ್ಸಿನ ನಂತರವೇ ಅಮಿತ್ ಶಾ ಅವರ ಚಾಣಾಕ್ಷತನ ಬೆಳಕಿಗೆ ಬಂದದ್ದು. ಇಂತಹ ಸಮರ್ಥ ನಾಯಕರ ತಂಡ ಹೊಂದುವುದು ಬಹುಮುಖ್ಯ. ಆದರೆ ಕಾಂಗ್ರೆಸ್‌ನಲ್ಲಿ ಒಂದು ಕುಟುಂಬ ಬಿಟ್ಟು ಅನ್ಯನಾಯಕರು ಬೆಳೆಯಲು ಆಸ್ಪದವಿಲ್ಲ. ತಮ್ಮ ಸಾಮರ್ಥ್ಯದಿಂದ ಬೆಳೆದ ದೇವರಾಜ ಅರಸು, ವೀರೇಂದ್ರ ಪಾಟೀಲರನ್ನು ದೆಹಲಿ ಸಹಿಸಲಿಲ್ಲ.

ADVERTISEMENT

ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕಾದ ಸೋಲಿನಿಂದ ರಾಹುಲ್‌ ಗಾಂಧಿಯವರು ಧೃತಿಗೆಟ್ಟು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಕೆಲವು ತಿಂಗಳು ಕಳೆದರೂ ಆ ಸ್ಥಾನ ತುಂಬಲು ಸಾಧ್ಯವಾಗದಿರುವುದು ಆರೋಗ್ಯಕರ ಲಕ್ಷಣವಲ್ಲ. ಪಕ್ಷದ ಕೆಲವು ಹಿತಾಸಕ್ತಿಗಳು ತಮ್ಮದೇ ಕಾರಣಕ್ಕಾಗಿ ಕುಟುಂಬ ರಾಜಕಾರಣದಿಂದ ಹೊರಬರಲು ಸಿದ್ಧರಿಲ್ಲ. ಆಡಳಿತ ಪಕ್ಷವು ಅಸಮರ್ಥವಾಗಿ ಆಡಳಿತ ನಡೆಸಿದಾಗ ಮತ್ತೊಂದು ರಾಷ್ಟ್ರೀಯ ಪಕ್ಷ ಪರ್ಯಾಯವಾಗಿ ಇರಬೇಕು. ಈಗಲಾದರೂ ಕಾಂಗ್ರೆಸ್‌ನ ಪ್ರಬುದ್ಧ ನಾಯಕರು ಮೈ ಕೊಡವಿ ಹೊರಬಂದು ಪಕ್ಷಕ್ಕೆ ಹೊಸ ಚೈತನ್ಯ ತುಂಬಿ ಮತ್ತೆ ಅಧಿಕಾರ ಹಿಡಿಯುವ ಪ್ರಯತ್ನ ಮಾಡಬೇಕು. ಪ್ರಜಾಪ್ರಭುತ್ವದ ದೃಷ್ಟಿಯಿಂದ ಇದು ಅತಿ ಅಗತ್ಯ. ಅಜ್ಜ ನೆಟ್ಟ ಮರ ಎಂದು ಒಂದು ಕುಟುಂಬಕ್ಕೆ ಜೋತು ಬಿದ್ದರೆ, ಪಕ್ಷಕ್ಕೆ ಮಾತ್ರವಲ್ಲ ದೇಶಕ್ಕೇ ಮಾರಕ.

ಸತ್ಯಬೋಧ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.