ADVERTISEMENT

ಕಾಂಗ್ರೆಸ್‌ ನಾಯಕರ ಚಿಂತನೆ ಬದಲಾಗಲಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2022, 15:17 IST
Last Updated 11 ಏಪ್ರಿಲ್ 2022, 15:17 IST

‘ಕೈ’ ಚಳಕಕ್ಕಾಗಿ ಕಾದಿದೆ ಹಡಗು’ ಎಂಬ ಲೇಖನದಲ್ಲಿ (ಪ್ರ.ವಾ., ಏ. 8) ಅರುಣ್ ಸಿನ್ಹಾ ಅವರು ಕಾಂಗ್ರೆಸ್ಸಿಗೆ ಆಗಬೇಕಾದ ಸರ್ಜರಿಯ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ. ಕಾಂಗ್ರೆಸ್ಸಿನಲ್ಲಿ ನಾಯಕರ ಪಡೆ, ಹೋರಾಟಕ್ಕೆ ಬೇಕಾದ ಅಣ್ವಸ್ತ್ರಗಳು ಎಲ್ಲವೂ ಇವೆ. ಇವುಗಳನ್ನು ನಿಷ್ಕ್ರಿಯ ಗೊಳಿಸಲಾಗಿದೆ. ಬಿಜೆಪಿ ನಾಯಕರ ಮಾತಿನ ವರಸೆಗೆ ಪಟ್ಟು ಹಾಕುವ ಪಳಗಿದ ನಾಯಕರನ್ನು ಅಖಾಡಕ್ಕೆ ತಂದರೆ, ಕಾಂಗ್ರೆಸ್ ಬಗ್ಗೆ ಜನರಿಗೆ ನಂಬಿಕೆ ಉಂಟಾಗಿ, ಸಮಸ್ಯೆಗಳಿಗೆ ಪರಿಹಾರ ಸಿಗಬಹುದು.

ಕಾಂಗ್ರೆಸ್ಸಿನ ಹಿರಿಯ ಮುತ್ಸದ್ದಿಗಳ ನೆರವಿನಿಂದ ಬಿಜೆಪಿಯ ದುರಾಡಳಿತವನ್ನು ಬಯಲು ಮಾಡಬೇಕಾಗಿದೆ. ಕಾಂಗ್ರೆಸ್ಸಿನ ಸ್ಥಿತಿ ನೋಡಿ ಉಳಿದ ವಿರೋಧ ಪಕ್ಷಗಳೂ ಕಾಂಗ್ರೆಸ್‌ಮುಕ್ತ ವಿರೋಧಿ ಒಕ್ಕೂಟಕ್ಕೆ ಸಿದ್ಧವಾಗುತ್ತಿವೆ. ಜನಗಳಿಗೆ ಅವಶ್ಯಕ ವಸ್ತುಗಳ ಬೆಲೆ ಏರಿಕೆ ಮತ್ತು ಅನೇಕ ಸಮಸ್ಯೆಗಳಿಗೆ ಪರಿಹಾರ ಕೊಡಿಸುವ ಬದಲು, ಅನವಶ್ಯಕ, ಅಪ್ರಸ್ತುತ ವಿನಾಶಕಾರಿ ಚರ್ಚೆಗಳಲ್ಲಿ ಭಾಗವಹಿಸುವುದೇ ತಪ್ಪು. ಬಿಜಿಪಿಯ ಕುತಂತ್ರಗಳಿಗೆ ವಿರೋಧ ಪಕ್ಷಗಳು ಬಲಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಹಿರಿಯ ನಾಯಕರ ಸಲಹೆ ಪಡೆದು ಹೋರಾಟಕ್ಕೆ ಸನ್ನದ್ಧವಾಗಬೇಕಿದೆ. ಪ್ರಜಾಪ್ರಭುತ್ವದ ಉಳಿವಿಗೆ, ಪ್ರಭಾವಿ ವಿರೋಧ ಪಕ್ಷ ಅವಶ್ಯಕ. ಕಾಂಗ್ರೆಸ್ ಉಳಿಯಬೇಕಾದರೆ, ಈಗಿನ ನಾಯಕರ ಚಿಂತನೆ ಬದಲಾಗಬೇಕು.

ಕೆ.ಎನ್.ಭಗವಾನ್, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.