ADVERTISEMENT

ಅನ್ಯ ರಾಜ್ಯಗಳ ನಡೆ ಮಾದರಿಯಾಗಲಿ

​ಪ್ರಜಾವಾಣಿ ವಾರ್ತೆ
Published 14 ಮೇ 2021, 19:31 IST
Last Updated 14 ಮೇ 2021, 19:31 IST

ಕೋವಿಡ್ ಎರಡನೇ ಅಲೆಯಿಂದ ತಂದೆ-ತಾಯಿ ಅಥವಾ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ₹ 5 ಸಾವಿರ ಮಾಸಿಕ ಪಿಂಚಣಿ ಯೋಜನೆಯನ್ನು ಮಧ್ಯಪ್ರದೇಶ ಸರ್ಕಾರ ಘೋಷಿಸಿದೆ. ಇಂತಹ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಪಡಿತರವನ್ನೂ ಒದಗಿಸಲು ನಿರ್ಧರಿಸಿದೆ. ಇದು ಶ್ಲಾಘನೀಯ ಕೆಲಸ. ಆಂಧ್ರಪ್ರದೇಶದ ತಿರುಪತಿಯ ಆಸ್ಪತ್ರೆಯೊಂದರಲ್ಲಿ ಸಮರ್ಪಕವಾಗಿ ಆಮ್ಲಜನಕ ಸಿಗದೆ ಸಾವಿಗೀಡಾದ 11 ಕೋವಿಡ್ ರೋಗಿಗಳ ಕುಟುಂಬಕ್ಕೆ ತಲಾ ₹ 10 ಲಕ್ಷ ಪರಿಹಾರ ಘೋಷಿಸಿದ ಅಲ್ಲಿನ ಸರ್ಕಾರದ ಕಾರ್ಯವೈಖರಿ, ಸೂತಕದ ಮನೆಗಳಲ್ಲಿ ಬದುಕು ಕಟ್ಟಿಕೊಳ್ಳುವ ಭರವಸೆ ಮೂಡಿಸಿದೆ. ಆದರೆ, ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದ ಜೀವ ಕಳೆದುಕೊಂಡ ಕೋವಿಡ್‌ ರೋಗಿಗಳ ಕುಟುಂಬಗಳಿಗೆ ಎರಡು ವಾರ ಕಳೆದರೂ ನಮ್ಮ ಸರ್ಕಾರ ಪರಿಹಾರ ನೀಡದೇ ಇರುವುದು ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ.

ಸುಂದರ ಪ್ರಜಾಪ್ರಭುತ್ವವಿರುವ ದೇಶದಲ್ಲಿ ಹೇಗೆ ಕಾರ್ಯ ನಿರ್ವಹಿಸಬೇಕು, ತಮ್ಮ ಜವಾಬ್ದಾರಿ ಏನು, ಜನರನ್ನು ಹೇಗೆ ರಕ್ಷಿಸಬೇಕು ಎಂಬುದರ ಬಗ್ಗೆ ಅರಿವಿಲ್ಲದಂತೆ ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರಕ್ಕೆ ಕನಿಷ್ಠ ಜ್ಞಾನ ಅಥವಾ ನೈತಿಕತೆ ಇದೆಯೇ? ಹೈಕೋರ್ಟ್ ನೇಮಿಸಿದ್ದ ತನಿಖಾ ಸಮಿತಿ ಕೂಡ ಚಾಮರಾಜನಗರದ ದುರಂತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ಮೂಲ ಕಾರಣ ಎಂದು ಹೇಳಿದೆ. ಹೀಗಿದ್ದರೂ ತಪ್ಪಿತಸ್ಥರ ವಿರುದ್ಧ ಇನ್ನೂ ಕ್ರಮ ಕೈಗೊಳ್ಳದೇ ಇರುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ.

-ಅನಿಲ್ ಕುಮಾರ್, ನಂಜನಗೂಡು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.