ADVERTISEMENT

ವಾಚಕರ ವಾಣಿ: ಅನಾಥ ಮಕ್ಕಳಿಗಾಗಿನ ಯೋಜನೆ ವಿಸ್ತರಣೆಯಾಗಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 8 ಜೂನ್ 2021, 19:30 IST
Last Updated 8 ಜೂನ್ 2021, 19:30 IST

ಕೋವಿಡ್ ಸೋಂಕಿನ ವ್ಯಾಪಕತೆ ನಾವ್ಯಾರೂ ಊಹಿಸಿರದಿದ್ದ ದಾರುಣ ಸ್ಥಿತಿಗೆ ನಮ್ಮನ್ನು ದೂಡುತ್ತಿದೆ. ಅದರಲ್ಲೂ ಮಕ್ಕಳ ಬದುಕಂತೂ ಎಲ್ಲ ರೀತಿಯಲ್ಲೂ ಅತಂತ್ರವಾಗಿಹೋಗಿರುವುದು ವಿಷಾದನೀಯ. ಹೀಗಾಗಿ ವಿವಿಧ ಬಗೆಯ ಮಕ್ಕಳ ಸ್ಥಿತಿ ಮತ್ತು ಸಮಸ್ಯೆಗಳನ್ನು ಹಲವು ಮುಖಗಳಲ್ಲಿ ಅಭ್ಯಸಿಸಿ, ಮಗುವಿನ ಬದುಕಿಗೆ ಪೂರಕ ಬೆಂಬಲ ನೀಡುವುದು, ಯೋಜನೆ ರೂಪಿಸುವುದು ಪ್ರಮುಖ ಆದ್ಯತೆಯಾಗಬೇಕಿದೆ.

ಈ ಸಂದರ್ಭದಲ್ಲಿ ಅನೇಕ ಮಕ್ಕಳು ಕೋವಿಡ್‍ನಿಂದ ಪೋಷಕರನ್ನು ಕಳೆದುಕೊಂಡು ಅನಾಥರಾಗುತ್ತಿರುವ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಿರುವುದು ಅತ್ಯಂತ ಸಂಕಟದಾಯಕವಾಗಿದೆ. ಈ ಹೊತ್ತಿನಲ್ಲಿ, ಪೋಷಕರನ್ನು ಕಳೆದುಕೊಂಡ ಮಕ್ಕಳ ಪಾಲನೆ-ಪೋಷಣೆ ಹಾಗೂ ಉತ್ತಮ ಭವಿಷ್ಯ ನಿರ್ಮಾಣಕ್ಕಾಗಿ ಅಗತ್ಯ ನೆರವು ನೀಡಲು ರಾಜ್ಯ ಸರ್ಕಾರವು ‘ಬಾಲ ಸೇವಾ ಯೋಜನೆ’ ರೂಪಿಸಿದೆ. ಮಗುವಿನ ಪೋಷಣೆಯ ಜವಾಬ್ದಾರಿ ಹೊತ್ತ ಕುಟುಂಬಕ್ಕೆ ಮಕ್ಕಳ ವಿನಿಯೋಗಕ್ಕಾಗಿ ಮಾಸಿಕ ₹ 3,500 ಸಹಾಯಧನವನ್ನು ಯೋಜನೆಯಲ್ಲಿ ಘೋಷಿಸಲಾಗಿದೆ. 10 ವರ್ಷದ ಒಳಗಿನ ಮಕ್ಕಳ ಆರೈಕೆಗಾಗಿ ಯಾವುದೇ ಕುಟುಂಬ ಮುಂದೆ ಬರದಿದ್ದಲ್ಲಿ, ನೋಂದಾಯಿತ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಆರೈಕೆ ಮಾಡಲಾಗುವುದು, 10ನೇ ತರಗತಿ ಪೂರೈಸಿದ ಮಕ್ಕಳ ಉನ್ನತ ಶಿಕ್ಷಣ, ಕೌಶಲಾಭಿವೃದ್ಧಿ
ಗಾಗಿ ಲ್ಯಾಪ್‌ಟಾಪ್, ಟ್ಯಾಬ್ ಒದಗಿಸಲಾಗುವುದೆಂದು ತಿಳಿಸಲಾಗಿದೆ. ಜೊತೆಗೆ 21 ವರ್ಷ ತುಂಬಿದ ಹೆಣ್ಣುಮಕ್ಕಳ ಮದುವೆ, ಉನ್ನತ ಶಿಕ್ಷಣ, ಸ್ವಉದ್ಯೋಗ ಇತರ ಉದ್ದೇಶಗಳಿಗಾಗಿ ₹ 1 ಲಕ್ಷ ಸಹಾಯಧನ ಒದಗಿಸುವುದಾಗಿ ಹೇಳಿರುವುದು ಸ್ವಾಗತಾರ್ಹ.

ಆದರೆ ಇಂದಿನ ದುರ್ಭರ ಬದುಕಿನ ಸಂದರ್ಭದಲ್ಲಿ ಅನಾಥ ಮಕ್ಕಳ ಪೋಷಣೆಯ ಜವಾಬ್ದಾರಿ ಹೊರಲು ಮುಂದೆ ಬರುವ ಕುಟುಂಬಕ್ಕೆ ಸರ್ಕಾರದಿಂದ ಮತ್ತಷ್ಟು ಬೆಂಬಲವನ್ನು ನೀಡಬೇಕಿದೆ. ‘ಬಾಲ ಸೇವಾ ಯೋಜನೆ’ ಯನ್ನು ಇನ್ನಷ್ಟು ವಿಸ್ತರಿಸಿ, ಪ್ರತೀ ಮಗುವಿನ ಪ್ರತಿಯೊಂದು ಚಿಕಿತ್ಸಾ ವೆಚ್ಚವನ್ನು ಭರಿಸುವ ಮತ್ತು ಮಗು ಎಲ್ಲಿಯವರೆಗೆ ಓದಲು ಬಯಸುತ್ತದೋ ಅಲ್ಲಿಯವರೆಗೆ ಉಚಿತ ಶಿಕ್ಷಣವನ್ನು ನೀಡುವ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು. ಜೊತೆಗೆ ವಿದ್ಯಾಭ್ಯಾಸ ಪಡೆದ ಆಧಾರದಲ್ಲಿ ಪ್ರತೀ ಮಗುವಿಗೆ ಸರ್ಕಾರಿ ಕೆಲಸವನ್ನು ಖಾತರಿಗೊಳಿಸಬೇಕು ಮತ್ತು ಮುಖ್ಯವಾಗಿ ಸರ್ಕಾರವು ತಕ್ಷಣವೇ ಇಂತಹ ಅನಾಥ ಹೆಣ್ಣುಮಗುವಿನ ಹೆಸರಿನಲ್ಲಿ ₹ 5 ಲಕ್ಷ, ಗಂಡು ಮಗುವಿನ ಹೆಸರಿನಲ್ಲಿ ₹ 3 ಲಕ್ಷ ಬ್ಯಾಂಕ್ ಠೇವಣಿ ಇಟ್ಟು, ಅದರ ಬಡ್ಡಿಯನ್ನು ಮಗುವಿನ ಪೋಷಣೆಯ ಜವಾಬ್ದಾರಿ ತೆಗೆದುಕೊಂಡ ಕುಟುಂಬವು, ಮಗುವಿಗೆ 18 ವರ್ಷ ತುಂಬುವವರೆಗೆ ಬಳಸಿಕೊಳ್ಳಲು ಅನುವು ಮಾಡಿಕೊಡಬೇಕು. ಇದಾದರೆ ಪ್ರತೀ ಮಗುವಿಗೆ ಉತ್ತಮ ಭವಿಷ್ಯದ ಭರವಸೆ ನೀಡಿದಂತಾಗುತ್ತದೆ.

ADVERTISEMENT

-ರೂಪ ಹಾಸನ, ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.