ADVERTISEMENT

ವಾಚಕರ ವಾಣಿ: ಕೋವಿಡ್‌ ನಿಯಮ ಸಡಿಲಿಕೆ ಬೇಡ

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 17:17 IST
Last Updated 7 ಜನವರಿ 2021, 17:17 IST

ತಮಿಳುನಾಡಿನ ಚಲನಚಿತ್ರ ಪ್ರದರ್ಶಕರ ಸಂಘದ ಒತ್ತಾಯದ ಮೇರೆಗೆ ತಮಿಳುನಾಡು ಸರ್ಕಾರ ಅಲ್ಲಿನ ಚಿತ್ರಮಂದಿರಗಳಲ್ಲಿ ಶೇಕಡ ನೂರರಷ್ಟು ಆಸನಗಳ ಭರ್ತಿಗೆ ಅನುಮತಿ ನೀಡಿದೆ. ಅದನ್ನೇ ಮಾದರಿಯಾಗಿ ಇಟ್ಟುಕೊಂಡು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹ ಅದೇ ರೀತಿಯ ಬೇಡಿಕೆ ಸಲ್ಲಿಸಿದೆ. ತಮಿಳುನಾಡು ಸರ್ಕಾರದ ಅನುಮತಿಗೆ ಕೇಂದ್ರ ಗೃಹ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ.

ಕೋವಿಡ್ ಎರಡನೇ ಅಲೆ ಮತ್ತು ರೂಪಾಂತರಿ ಕೊರೊನಾ ದಾಳಿಯಿಟ್ಟಿರುವ ಈ ಸನ್ನಿವೇಶದಲ್ಲಿ ಇಂತಹ ನಡೆ ಸಾಧುವಲ್ಲ. ಕೇಂದ್ರ ಸರ್ಕಾರ ಅಂತರವನ್ನು ಕಾಪಾಡಿ ಎಂದು ಪದೇಪದೇ ಜನರನ್ನು ಎಚ್ಚರಿಸುತ್ತಲೇ ಇದೆ. ಚಿತ್ರಮಂದಿರಗಳಲ್ಲಿ ಅಂತರ ಕಾಯ್ದುಕೊಳ್ಳುವುದು ಅಸಾಧ್ಯ. ಚಲನಚಿತ್ರ ವೀಕ್ಷಿಸುವುದು ಜೀವನಕ್ಕೆ ಅತ್ಯಗತ್ಯವಾದ ಸಂಗತಿಯಲ್ಲ. ಹಾಗೂ ಮನರಂಜನೆಗೆ ಬೇಕಾದಲ್ಲಿ ನೂರಾರು ಟಿ.ವಿ. ವಾಹಿನಿಗಳಿವೆ. ಹೊಸ ಚಿತ್ರಕ್ಕೆ ಒ.ಟಿ.ಟಿ ವೇದಿಕೆಯೂ ಇದೆ. ಚಿತ್ರಮಂದಿರಗಳ ಮಾಲೀಕರಿಗೆ ಮತ್ತು ಅಲ್ಲಿನ ಕೆಲಸಗಾರರಿಗೆ ಆರ್ಥಿಕವಾಗಿ ಕೊಂಚ ಸಮಸ್ಯೆ ಆಗುವುದು ನಿಜವಾದರೂ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬಹುದು. ಚಿತ್ರಮಂದಿರಗಳಲ್ಲಿ ಶೇಕಡ ನೂರರಷ್ಟು ಆಸನಗಳ ಭರ್ತಿಗೆ ಅವಕಾಶ ನೀಡಿದರೆ ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಂತೆಯೇ ಸರಿ. ಈಗಾಗಲೇ ಮಾರುಕಟ್ಟೆ, ಬಸ್ ನಿಲ್ದಾಣ, ವಿಶೇಷ ದಿನಗಳಲ್ಲಿ ದೇವಾಲಯ, ಬಾರ್ ಮತ್ತು ರೆಸ್ಟೊರೆಂಟ್ ಮುಂತಾದೆಡೆಗಳಲ್ಲಿ ಅಂತರ ಪಾಲನೆಯಾಗದೆ ಆತಂಕ ಸೃಷ್ಟಿಯಾಗಿದೆ. ಸರ್ಕಾರ ಯಾರ ಒತ್ತಡಕ್ಕೂ ಮಣಿಯದೆ ಕೋವಿಡ್ ನಿಯಮಗಳ ಸಡಿಲಿಕೆ ಮಾಡದಿರಲಿ. ಜೀವ ಇದ್ದರಷ್ಟೇ ಜೀವನ.

–ಪತ್ತಂಗಿ ಎಸ್. ಮುರಳಿ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.