ADVERTISEMENT

ಮಾಧ್ಯಮಗಳಿಗೇಕೆ ‘ದಲಿತ’ ಮೋಹ?

ಸುದರ್ಶನ ಬಾಳನಾಯ್ಕ, ಚಿಕ್ಕೋಡಿ
Published 20 ಮಾರ್ಚ್ 2019, 20:23 IST
Last Updated 20 ಮಾರ್ಚ್ 2019, 20:23 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ, ದಲಿತ ನಾಯಕ ರಾಮವಿಲಾಸ್ ಪಾಸ್ವಾನ್, ದಲಿತ ನಾಯಕ ಪ್ರಕಾಶ್‌ ಅಂಬೇಡ್ಕರ್, ದಲಿತ ನಾಯಕ ಜಿಗ್ನೇಶ್ ಮೆವಾನಿ, ದಲಿತ ನಾಯಕ ಎನ್.ಮಹೇಶ್... ಪತ್ರಿಕೆಗಳು ಹಾಗೂ ಟಿ.ವಿ. ಚಾನೆಲ್‌ಗಳು ಈ ನಾಯಕರ ಹೆಸರುಗಳನ್ನು ಪ್ರಸ್ತಾಪಿಸುವ ಪರಿ ಇದು. ಈ ಮುಖಂಡರ ಹೆಸರಿನ ಹಿಂದೆ ಮಾಧ್ಯಮಗಳು ‘ದಲಿತ’ ಎಂಬ ಟ್ಯಾಗ್ ಏಕೆ ಬಳಸುತ್ತವೆ ಎಂಬುದು ಅರ್ಥವಾಗುವುದಿಲ್ಲ. ದಲಿತ ಎಂಬ ಪದ ಜಾತಿಸೂಚಕವಲ್ಲ. ಆದರೂ ಆ ಪದವನ್ನು ಜಾತಿಸೂಚಕವನ್ನಾಗಿಯೇ ನೋಡಲಾಗುತ್ತಿದೆ. ಹಾಗಿದ್ದರೆ ದಲಿತೇತರ ನಾಯಕರಿಗೆ ಅವರ ಹೆಸರಿನ ಹಿಂದೆ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ, ಈಡಿಗ ಎಂದೆಲ್ಲ ಬಳಸಲಾಗುತ್ತದೆಯೇ?

ಯಾವುದೇ ಜನಪ್ರತಿನಿಧಿ ಕೇವಲ ಒಂದು ವರ್ಗದ ಮತಗಳಿಂದ ಆರಿಸಿ ಬಂದಿರುವುದಿಲ್ಲ. ತಾನು ಪ್ರತಿನಿಧಿಸುವ ಕ್ಷೇತ್ರದಲ್ಲಿ ಎಲ್ಲ ವರ್ಗದ ಮತದಾರರಿಂದ ಮಾತ್ರ ಆಯ್ಕೆಯಾಗಲು ಸಾಧ್ಯ. ಶಾಸಕ, ಸಚಿವ, ಸಂಸದನಾದರೂ ಇನ್ನೂ ತನ್ನನ್ನು ದಲಿತ ನಾಯಕನೆಂದೇ ಬಿಂಬಿಸಲಾಗುತ್ತಿದೆ ಎಂಬ ಭಾವನೆ ಬಂದು, ಸಹಜವಾಗಿಯೇ ಆತ ಬೇಸರಗೊಳ್ಳುತ್ತಾನೆ. ಇದರಿಂದ ಆತನಲ್ಲಿ ತನ್ನ ಬಗ್ಗೆಯೇ ಸಂಕುಚಿತ ಭಾವನೆ ಉಂಟಾಗಬಹುದು. ಒಬ್ಬ ವ್ಯಕ್ತಿ ಹುಟ್ಟಿನಿಂದ ಕೀಳು ಎಂದು ಜರೆದರೆ ಆಗುವ ನೋವು ಆತನಿಗೆ ಮಾತ್ರ ಗೊತ್ತಾಗುತ್ತದೆ ಹೊರತು ಅನ್ಯರಿಗಲ್ಲ. ಆದರೂ ಅದನ್ನೆಲ್ಲ ಮೀರಿ ಆತ ಜನಪ್ರತಿನಿಧಿಯ ಮಟ್ಟಕ್ಕೆ ಬೆಳೆದಿದ್ದರೂ ಮಾಧ್ಯಮಗಳು ಮಾತ್ರ ಅವನನ್ನು ಬಿಡುವುದಿಲ್ಲ. ಕ್ರೀಡಾಪಟುಗಳು, ಸಿನಿಮಾ ಕಲಾವಿದರು, ಸಂಗೀತಗಾರರನ್ನು ಯಾರೂ ಅವರ ಜಾತಿಯಿಂದ ಗುರುತಿಸುವುದಿಲ್ಲ. ಜನಪ್ರತಿನಿಧಿಗಳಿಗೆ ಮಾತ್ರ ಇದು ಅನ್ವಯಿಸುವುದೇಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT