ADVERTISEMENT

ಪಶ್ಚಿಮಘಟ್ಟದಲ್ಲಿ ಡ್ಯಾಂ: ಚರ್ಚೆ ನಡೆಯಲಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 19:30 IST
Last Updated 12 ಆಗಸ್ಟ್ 2021, 19:30 IST

ಪಶ್ಚಿಮಘಟ್ಟದ ಒಡಲಿನಲ್ಲಿ ಈಗಾಗಲೇ ಕಾರ್ಯಗತಗೊಂಡಿರುವ ಹಲವಾರು ಅವೈಜ್ಞಾನಿಕ ಬೃಹತ್, ಮಧ್ಯಮ ಮತ್ತು ಸಣ್ಣ ಪ್ರಮಾಣದ ಯೋಜನೆಗಳಿಂದಾಗಿ ಅಗಾಧ ಪ್ರಮಾಣದ ಅರಣ್ಯ ಸಂಪತ್ತು ನಾಶವಾಗಿದೆ.

ಯೋಜನೆಗಳ ಅನುಷ್ಠಾನಕ್ಕೆ ದೊಡ್ಡ ಪ್ರಮಾಣದ ಯಂತ್ರಗಳ ಬಳಕೆಯಿಂದ, ವಾಹನಗಳ ಭರದ ಓಡಾಟದಿಂದ ಅರಣ್ಯ ಪರಿಸರ, ವನ್ಯಮೃಗಗಳ ಬದುಕು ಅಸ್ತವ್ಯಸ್ತವಾಗಿದೆ. ಹೀಗಾಗಿ, ಇತ್ತೀಚಿನ ವರ್ಷಗಳಲ್ಲಿ ಮಳೆಯ ತೀವ್ರತೆಗೆ ಹಿಂದೆಂದೂ ಕಂಡು ಕೇಳರಿಯದಷ್ಟು ಅಪಾರ ಪ್ರಮಾಣದಲ್ಲಿ ಗುಡ್ಡ ಕುಸಿತ, ಭೂಕುಸಿತಗಳು ಉಂಟಾಗುತ್ತಿವೆ.

ಇದಿಷ್ಟೇ ಸಾಲದೆಂಬಂತೆ ಮತ್ತೆ ಪಶ್ಚಿಮಘಟ್ಟದ ಒಡಲೊಳಗೆ 1,400 ಚಿಕ್ಕ ಚಿಕ್ಕ ಡ್ಯಾಂಗಳ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದ್ದು, ಅದಕ್ಕೆ ನೆರವು ನೀಡುವಂತೆ ಕೇಂದ್ರ ಜಲಶಕ್ತಿ ಸಚಿವರೊಂದಿಗೆ ಚರ್ಚಿಸಿ, ಪ್ರಸ್ತಾವ ಸಲ್ಲಿಸಲಾಗಿದೆ ಎಂದು ರಾಜ್ಯದ ಸಣ್ಣ ನೀರಾವರಿ ಸಚಿವರು ಹೇಳಿರುವುದು ವರದಿಯಾಗಿದೆ. ಅರಣ್ಯದಲ್ಲಿ ನಡೆಯುವ ಇಂತಹ ಯೋಜನೆಗಳಿಂದ ಶಾಶ್ವತ ಹಾನಿಗೀಡಾಗುವ ಒಟ್ಟು ಪರಿಸರ, ಅರಣ್ಯ, ಜನಜೀವನವನ್ನು ಕುರಿತು ಮೊದಲು ಸರ್ಕಾರವು ವಿಜ್ಞಾನಿಗಳು, ತಜ್ಞರೊಂದಿಗೆ ಚರ್ಚೆ ಮಾಡಲಿ. ಈಗಾಗಲೇ ಪ್ರಕೃತಿಯ ಮೇಲಿನ ಅವ್ಯಾಹತ ಪ್ರಹಾರದಿಂದ ಅವನತಿಯ ಹಾದಿ ಹಿಡಿದಿರುವ ಮನುಕುಲ, ವಿವೇಚನೆ ಇಲ್ಲದೇ ಇಂತಹ ಮತ್ತಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸದಿರಲಿ.

ADVERTISEMENT

ರೂಪ ಹಾಸನ,ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.