ADVERTISEMENT

ಅಸಮಾನತೆಯ ಪ್ರಜಾಪ್ರಭುತ್ವ!!

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 17:12 IST
Last Updated 14 ಡಿಸೆಂಬರ್ 2018, 17:12 IST

ಬಿ.ಎಸ್. ಯಡಿಯೂರಪ್ಪ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಲೋಕಾಯುಕ್ತ ಸಂಸ್ಥೆಯಲ್ಲಿ ಹಲವಾರು ಕ್ರಿಮಿನಲ್ ಪ್ರಕರಣಗಳ ತನಿಖೆ ಇನ್ನೂ ಬಾಕಿ ಇದೆ. ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ವೆಚ್ಚ ಮಾಡಿರುವ ₹ 35,000 ಕೋಟಿ ಹಣದ ಲೆಕ್ಕ ಸಿಗುತ್ತಿಲ್ಲವೆಂದು ಸಿಎಜಿ ವರದಿ ತಿಳಿಸಿದೆ. ನೋಟುಗಳ ಕಂತೆಗಳನ್ನು ಮನೆಯಲ್ಲಿ ಒಟ್ಟಿದ್ದ ನಾಯಕರೊಬ್ಬರು ಭ್ರಷ್ಟಾಚಾರದ ಆರೋಪದಲ್ಲಿ ಜೈಲುಪಾಲಾಗುವುದು ನಿಶ್ಚಿತ ಎಂದು ಖಾಸಗಿ ಟಿ.ವಿ. ಚಾನೆಲ್ಲುಗಳು ಸುದ್ದಿ ಮಾಡಿದ್ದವು. ಆದರೆ, ಅವರು ಇಂದು ಸಚಿವ ಸ್ಥಾನದಲ್ಲಿ ನೆಮ್ಮದಿಯಾಗಿ ರಾರಾಜಿಸುತ್ತಿದ್ದಾರೆ.

ಈ ಮೂವರನ್ನು ಬಿಟ್ಟು ಅನ್ಯರನ್ನು ಆಯ್ಕೆ ಮಾಡಲು, ನಮ್ಮಪ‍್ರಜಾಪ್ರಭುತ್ವ ಮಾದರಿ ನೆಲದಲ್ಲಿ ಅವಕಾಶವೇ ಇಲ್ಲ! ಶತಮಾನ
ಗಳ ಹಿಂದೆ, ಆಳರಸರು ರಾಜ್ಯವಾಳುತ್ತಿದ್ದರು. ಆ ರಾಜರುಗಳು ಎಷ್ಟೇ ಅನ್ಯಾಯ, ಶೋಷಣೆ ಮಾಡುವವರಾಗಿದ್ದರೂ, ಯಾವ ಪ್ರಜೆಯೂ ಪ್ರಶ್ನಿಸುವಂತಿರಲಿಲ್ಲ. ಯಾಕೆಂದರೆ, ಅದು ಸಾರ್ವಭೌಮತ್ವವುಳ್ಳ ಆಡಳಿತವಾಗಿತ್ತು. ಇಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವ ‘ಪ್ರಜಾ ಪ್ರಭುತ್ವ’ ಆಡಳಿತದಲ್ಲಿಯೂ ಸಹ, ಹಿಂದಿನ ‘ಸಾರ್ವಭೌಮತ್ವ’ವೇ ರಾರಾಜಿಸುತ್ತಿದೆ.

ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವವರು ಮತ್ತೆ ಮತ್ತೆ ಆಯ್ಕೆಯಾಗಿ ಆಡಳಿತ ನಡೆಸುತ್ತಾರೆ. ಅವರ ಮೇಲಿನ ಆರೋಪಗಳ ಬಗ್ಗೆ ದಶಕಗಳು ಕಳೆದರೂ ವಿಚಾರಣೆಯಾಗಿ, ತೀರ್ಪು ಹೊರಬೀಳುವುದಿಲ್ಲ. ತೀರ್ಪು ಹೊರಬಿದ್ದರೂ, ಕಾಟಾಚಾರಕ್ಕೆ, ಒಂದೆರಡು ದಿನ, ಶಿಕ್ಷೆಯ ಪ್ರಹಸನ ನಡೆದು, ಅವರು ಹೊರಬಂದು ಅಧಿಕಾರ ಹಿಡಿಯುತ್ತಾರೆ. ‘ಪ್ರಜಾಪ್ರಭುತ್ವ’ವೆಂಬುದು ಸಂವಿಧಾನದ ಶೋಕೇಸಿನಲ್ಲಿಟ್ಟಿರುವ ಅಲಂಕಾರದ ಗೊಂಬೆಯೇ?

ADVERTISEMENT

ಕೆ.ಜಿ. ಭದ್ರಣ್ಣವರ, ಮುದ್ದೇಬಿಹಾಳ

***

ಗುರಿ ಅಭಿವೃದ್ಧಿಯತ್ತ ಇರಲಿ

₹1,200 ಕೋಟಿ ವೆಚ್ಚದಲ್ಲಿ 125 ಅಡಿ ಎತ್ತರದ ಕಾವೇರಿ ಮಾತೆಯ ಪ್ರತಿಮೆಯನ್ನು ಸ್ಥಾಪಿಸಲು ಮತ್ತು ಕೆಆರ್‌ಎಸ್ ಉದ್ಯಾನವನ್ನು ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಸರ್ಕಾರ ಉತ್ಸಾಹ ವ್ಯಕ್ತಪಡಿಸುತ್ತಿರುವುದನ್ನು ನೋಡಿ, ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ…’ ಎಂಬ ಅಡಿಗರ ಕವಿತೆಯ ಸಾಲು ನೆನಪಿಗೆ ಬಂತು.

ಇದೇ ₹1,200 ಕೋಟಿ ಹಣವನ್ನು ರಾಜ್ಯದಲ್ಲಿ ಸಂಕಷ್ಟದಲ್ಲಿರುವ ರೈತರ ಕ್ಷೇಮಾಭಿವೃದ್ಧಿಗೆ, ಸರ್ಕಾರಿ ಶಾಲೆಗಳ ಸುಧಾರಣೆಗೆ, ಉದ್ಯೋಗಕ್ಕಾಗಿ ಕಾಯುತ್ತಿರುವ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು, ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳ ಶ್ರೇಯೋಭಿವೃದ್ಧಿಗೆ, ಉತ್ತರ ಕರ್ನಾಟಕದ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ… ಹೀಗೆ ಅನೇಕ ಅತ್ಯಗತ್ಯ ಉದ್ದೇಶಗಳಿಗೆ ವಿನಿಯೋಗಿಸುವಂತಾದರೆ ಅದಕ್ಕಿಂತ ನೆಮ್ಮದಿ ಬೇರೆ ಇದೆಯೇ? ಆದ್ದರಿಂದ ಈ ಯೋಜನೆಯನ್ನು ಕೈ ಬಿಡುವುದು ಸೂಕ್ತ.

ಕವಿತಾ ಟಿ., ಹೊಸಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.