ADVERTISEMENT

ವಾಚಕರ ವಾಣಿ | ರಾಮಮಂದಿರಕ್ಕೆ ದೇಣಿಗೆ: ಅನಗತ್ಯ ವಿವಾದ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 19:11 IST
Last Updated 19 ಫೆಬ್ರುವರಿ 2021, 19:11 IST
   

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಈಗ ಇಡೀ ರಾಷ್ಟ್ರದಲ್ಲಿ ಎಲ್ಲಾ ಜಾತಿ-ಮತ ಬಾಂಧವರು ಅಭೂತಪೂರ್ವ, ಸ್ವಯಂಪ್ರೇರಿತ ಪ್ರೋತ್ಸಾಹ ನೀಡುತ್ತಿದ್ದಾರೆ. ಇದನ್ನು ಸಹಿಸದ ಕೆಲವರು ರಾಮನ ಪರ ಇರುವ ಸಂಘಟನೆಗಳ ವಿರುದ್ಧ ತಮಗಿದ್ದ ಆಕ್ರೋಶಗಳನ್ನೇ ಈಗ ತಮ್ಮ ಹುಸಿ ಆರೋಪಗಳ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ. ರಾಮಮಂದಿರ ನಿರ್ಮಾಣ ಕಾರ್ಯಕ್ಕಾಗಿ ಅಥಣಿಯಲ್ಲಿ ಇತ್ತೀಚೆಗೆ ನಾನು ಸ್ವಯಂಪ್ರೇರಣೆಯಿಂದ ದೇಣಿಗೆ ನೀಡಿ ರಸೀದಿ ಪಡೆದಿದ್ದೇನೆ. ಆದರೆ ಈ ವಿಷಯದಲ್ಲಿ ಕೆಲವರು ಅನಗತ್ಯ ವಿವಾದ ಸೃಷ್ಟಿಸುತ್ತಿದ್ದಾರೆ.

ರಾಮಮಂದಿರ ನಿರ್ಮಾಣಕ್ಕೆ ಕಾಣಿಕೆ ನೀಡಿದವರು ಅಥವಾ ನೀಡಬೇಕೆಂಬ ಇಚ್ಛೆ ಉಳ್ಳವರು ರಾಮಮಂದಿರ ನಿರ್ಮಾಣ ಅಭಿಯಾನದಲ್ಲಿ ಸಕ್ರಿಯವಾಗಿರುವ ವಿಶ್ವ ಹಿಂದೂ ಪರಿಷತ್ತು ಅಥವಾ ಸಂಘ ಪರಿವಾರದ ವಿಶ್ವಾಸಾರ್ಹತೆಯ ಬಗ್ಗೆಯಾಗಲೀ ಸಂಗ್ರಹಿಸಲಾದ ಕಾಣಿಕೆಗಳ ಸದುಪಯೋಗದ ಬಗ್ಗೆಯಾಗಲೀ ಸಂಶಯ ವ್ಯಕ್ತಪಡಿಸಿಲ್ಲ. ತಮ್ಮ ಪ್ರಾಮಾಣಿಕತೆಯನ್ನು, ನಿಷ್ಠೆಯನ್ನು ಪ್ರಶ್ನಿಸುವುದಕ್ಕೆ ಆಸ್ಪದವಿಲ್ಲದಂತೆ ಈ ಸಂಘಟನೆಗಳು ಹಿಂದಿನಿಂದಲೂ ಸಚ್ಚಾರಿತ್ರ್ಯ ಕಾಪಾಡಿಕೊಂಡು ಬಂದಿರುವ ಇತಿಹಾಸ ಸ್ಫಟಿಕದಷ್ಟೇ ಪ್ರಚ್ಛನ್ನವಾಗಿದೆ.

ನಾವು ಎಲ್ಲೇ ಇರಲಿ, ಹೇಗೇ ಇರಲಿ ನಮ್ಮ ಭಗವಂತನ ನೆಲೆ ಸುಂದರವಾಗಿದ್ದರೆ ಅದರಂತಹ ಸಂತೋಷ ಇನ್ನೊಂದಿಲ್ಲ ಎಂಬ ನಮ್ಮ ಸಂಸ್ಕೃತಿಗೆ ಈ ರಾಮಮಂದಿರವೂ ಸೂಕ್ತ ನಿದರ್ಶನವಾಗಲಿದೆ. ಇಲ್ಲದಿದ್ದರೆ ಸಾಂಸ್ಕೃತಿಕವಾಗಿ ಬರಡಾಗಿರುವ ಎಷ್ಟೋ ಕಮ್ಯುನಿಸ್ಟ್ ರಾಷ್ಟ್ರಗಳಿಗೆ ಎದುರಾದ ದುಃಸ್ಥಿತಿಯೇ ನಮ್ಮ ದೇಶಕ್ಕೂ ಎದುರಾಗುವ ಅಪಾಯವಿದೆ.

ADVERTISEMENT

ಇತಿಹಾಸವನ್ನು ಗಮನಿಸಿದರೆ, ನಮ್ಮ ರಾಜಮಹಾರಾಜರು ಕೂಡ ಗ್ರಾಮಕ್ಕೊಂದಾದರೂ ದೇವಾಲಯವನ್ನು ನಿರ್ಮಿಸುತ್ತಿದ್ದುದು ತಿಳಿಯುತ್ತದೆ. ಅವರು ತಮ್ಮ ಸ್ವಂತ ಲಾಭ– ನಷ್ಟದ ಲೆಕ್ಕಾಚಾರದಲ್ಲಿ ಈ ದೇವಾಲಯಗಳನ್ನು ನಿರ್ಮಿಸಲಿಲ್ಲ. ಊರಿಗೆ ಒಳ್ಳೆಯದಾಗುತ್ತದೆ ಎಂಬ ಒಂದೇ ಸದಿಚ್ಛೆಯಿಂದ ಇಂತಹ ಪುಣ್ಯಕಾರ್ಯ ಕೈಗೊಂಡಿದ್ದರು ಎಂಬುದು ನಮಗೆ ಸದಾ ಮಾರ್ಗದರ್ಶಕವಾಗಬೇಕು.

ಈ ಎಲ್ಲಾ ವಿಚಾರಗಳ ಪರಿಜ್ಞಾನವಿಲ್ಲದೆ ಅಥವಾ ಪರಿಜ್ಞಾನವಿದ್ದೂ ಜಾಣ ಕುರುಡುತನವನ್ನು ಶ್ರೀರಾಮನ ವಿಚಾರದಲ್ಲಿ ಪ್ರದರ್ಶಿಸುತ್ತಾ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾದರೆ, ಹಿಂದೆ ರಾವಣನಿಗೆ ಉಂಟಾದ ದುರ್ಗತಿಯೇ ಎದುರಾದೀತು ಎಂಬ ವಿವೇಕ ಇದ್ದರೆ ಒಳ್ಳೆಯದು.

-ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.