ADVERTISEMENT

ಮೆರಿಟ್ ಕೋಟಾ ಖೋತಾ ಆಗದೇ?

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 20:30 IST
Last Updated 24 ಏಪ್ರಿಲ್ 2019, 20:30 IST

ಶಿಕ್ಷಣ ಮಾಫಿಯಾಕ್ಕೂ ಲಿಂಗಾಯತ ಹೋರಾಟಕ್ಕೂ ಸಂಬಂಧವಿಲ್ಲ ಎನ್ನುತ್ತಲೇ ಎಸ್.ಎಂ.ಜಾಮದಾರ ಅವರು ಎರಡು ಸತ್ಯಗಳನ್ನು ಒಪ್ಪಿಕೊಂಡಿದ್ದಾರೆ (ವಾ.ವಾ., ಏ.24). ಇಲ್ಲಿಯವರೆಗೆ ಲಿಂಗಾಯತ ಹೋರಾಟದಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡ ಎಲ್ಲರೂ ‘ಲಿಂಗಾಯತ ನನ್ನ ಅಸ್ಮಿತೆ, ಪ್ರತ್ಯೇಕ ಧರ್ಮಕ್ಕಾಗಿ ಹೋರಾಡುತ್ತಿದ್ದೇವೆ’ ಎಂದು ಹೇಳುತ್ತಿದ್ದರು. ಈಗ ಸ್ವತಃ ಜಾಮದಾರ ಅವರೇ ‘ಯಾವುದೇ ಧರ್ಮಕ್ಕೆ ಮಾನ್ಯತೆ ನೀಡುವ ಅಥವಾ ಅಮಾನ್ಯ ಮಾಡುವ ಅಧಿಕಾರ ಸರ್ಕಾರಗಳಿಗೆ ಇಲ್ಲ’ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಲಿಂಗಾಯತ ಹೋರಾಟದಲ್ಲಿ ಪಾಲ್ಗೊಂಡ ಬಹುಪಾಲು ಬಸವ ಭಕ್ತರು ಪ್ರತ್ಯೇಕ ಧರ್ಮ ಸಿಗಬಹುದೆಂಬ ನಿರೀಕ್ಷೆಯಲ್ಲೇ ಇದ್ದರು. ಅವರಅಮಾಯಕತೆಯನ್ನು ಬಳಸಿಕೊಳ್ಳಲಾಯಿತು.

ಲಿಂಗಾಯತಕ್ಕೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ಸಿಗುವುದರಿಂದ ‘ಪ್ರತಿವರ್ಷ ಸುಮಾರು ಒಂದು ಸಾವಿರಕ್ಕೂ ಹೆಚ್ಚು ವೈದ್ಯಕೀಯ ಸೀಟುಗಳು ಮತ್ತು ಏಳೆಂಟು ಸಾವಿರ ಎಂಜಿನಿಯರಿಂಗ್ ಸೀಟುಗಳು ಲಿಂಗಾಯತ ಶಿಕ್ಷಣ ಸಂಸ್ಥೆಗಳಿಗೆ ಸಿಗುತ್ತವೆ’ ಎನ್ನುವುದನ್ನೂ ಜಾಮದಾರ ಒಪ್ಪಿಕೊಳ್ಳುತ್ತಾರೆ.‌ ಆ ಹೆಚ್ಚುವರಿ ಸೀಟುಗಳು ಲಿಂಗಾಯತರಿಗೆ ಸಿಕ್ಕರೆ ತಪ್ಪೇನು ಎಂದು ಭಂಡ ವಾದ ಮಂಡಿಸುತ್ತಾರೆ. ಪ್ರತಿವರ್ಷ ರಾಜ್ಯದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್ ಮತ್ತು ಸಿಇಟಿ ಬರೆಯುತ್ತಾರೆ. ಎಲ್ಲರಿಗೂ ಸರ್ಕಾರಿ ಮೆಡಿಕಲ್‌ ಕಾಲೇಜುಗಳಲ್ಲಿ ಸೀಟು ಸಿಗುವುದಿಲ್ಲ. ಅನಿವಾರ್ಯವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಮೆಡಿಕಲ್ ಕಾಲೇಜುಗಳತ್ತ ಚಿತ್ತ ಹರಿಸಬೇಕಾಗುತ್ತದೆ. ಮೆರಿಟ್ ಕೋಟಾದ ಮೆಡಿಕಲ್ ಸೀಟು ಅಪೇಕ್ಷಿಸುವವರಲ್ಲಿ ಲಿಂಗಾಯತರೂ ಸೇರಿ ಎಲ್ಲ ಜಾತಿಯ ಬಡ ಪ್ರತಿಭಾವಂತರು ಇರುತ್ತಾರೆ ಎನ್ನುವುದನ್ನು ಮರೆಯಬಾರದು. ಅಷ್ಟಕ್ಕೂ ಲಿಂಗಾಯತರಲ್ಲಿನ ಬಡ ಪ್ರತಿಭಾವಂತರು ಪ್ರವರ್ಗ 2ಎ ಮತ್ತು ಪ್ರವರ್ಗ 3 ಬಿಯಲ್ಲಿ ಮೀಸಲಾತಿ ಮೂಲಕ ಹಕ್ಕಿನಿಂದ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಸೀಟುಗಳನ್ನು ಪಡೆದುಕೊಳ್ಳುತ್ತಾರೆ. ಲಿಂಗಾಯತ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ಪಡೆಯುವ ಶಿಕ್ಷಣ ಸಂಸ್ಥೆಗಳು ಪ್ರತಿವರ್ಷ ಸಾವಿರಕ್ಕೂ ಹೆಚ್ಚು ಮೆಡಿಕಲ್ ಸೀಟುಗಳನ್ನು ಮತ್ತು ಎಂಟು ಸಾವಿರಕ್ಕೂ ಹೆಚ್ಚು ಎಂಜಿನಿಯರಿಂಗ್ ಸೀಟುಗಳನ್ನು ಗಿಟ್ಟಿಸಿಕೊಳ್ಳುತ್ತವೆ. ಹಾಗಾದರೆ ಮೆರಿಟ್ ಕೋಟಾದಲ್ಲಿ ಖೋತಾ ಆಗುವುದಿಲ್ಲವೆ? ಒಂದು ಮೆಡಿಕಲ್ ಸೀಟಿಗೆ ಆಡಳಿತ ಮಂಡಳಿ ಕೋಟಾದಲ್ಲಿ ₹1.25 ಕೋಟಿ. ಯಾವ ಬಡವರ ಕೈಗೆ ಎಟುಕುತ್ತದೆ?

- ಡಾ. ರಾಜಶೇಖರ ಹತಗುಂದಿ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.