ADVERTISEMENT

ವಾಚಕರ ವಾಣಿ: ಪಾತಾಳ ಲೋಕಕ್ಕೆ ಇನ್ನಷ್ಟು ಹಸಿವು?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 2 ಫೆಬ್ರುವರಿ 2023, 19:31 IST
Last Updated 2 ಫೆಬ್ರುವರಿ 2023, 19:31 IST

ಕಾಟನ್ನೋ ಸಿಂಥೆಟಿಕ್ಕೋ ಬೆಲೆ ಎಷ್ಟೋ?!

ಟಿ.ವಿ.ಯಲ್ಲಿ ಕೇಂದ್ರದ ಬಜೆಟ್ ಮಂಡನೆ ವೀಕ್ಷಿಸುತ್ತಿದ್ದೆವು. ನಮ್ಮ ಚರ್ಚೆ, ವಿಮರ್ಶೆ ಸಾಗಿತ್ತು. ಅಜ್ಜಿಯೂ ನಮ್ಮೊಂದಿ
ಗಿದ್ದರು. ಸಂಜೆಗೆ ಅವರಲ್ಲಿ ‘ಹೇಗಿತ್ತು?’ ಎಂದು ಬಜೆಟ್ ಬಗ್ಗೆ ವಿಚಾರಿಸಿದಾಗ ‘ಚೆನ್ನಾಗಿದೆ’ ಎಂದರು. ನಮಗೆ ಆಶ್ಚರ್ಯ
ವಾಗಿ, ‘ಹೌದಾ? ಯಾವುದು? ಏನು?’ ಎಂದು ಪ್ರಶ್ನಿಸಿದಾಗ ‘ಅದೇ ಕಣಪ್ಪಾ, ಬಜೆಟ್ ಓದುತ್ತಾ ಇದ್ದರಲ್ಲಾ ಹೆಣ್ಮಗಳು, ಆಕೆ ಉಟ್ಟಿದ್ದ ಸೀರೆ ಚೆನ್ನಾಗಿತ್ತು’ ಎಂದರು! ಕಾಟನ್ನೋ, ಸಿಂಥೆಟಿಕ್ಕೋ, ಬೆಲೆ ಎಷ್ಟೋ ಎಂದೆಲ್ಲ ಗುನುಗಿದ್ದೂ ಆಯಿತು.

ಮಾರನೇ ದಿನ ಪತ್ರಿಕೆಯಲ್ಲಿ, ಅವರು ಉಟ್ಟಿದ್ದುದು ಧಾರವಾಡದ ಕಸೂತಿ ಸೀರೆ ಎಂಬ ವಿವರವನ್ನು ಓದಿ ಅಜ್ಜಿಗೆ ತಿಳಿಸಿದೆ. ‘ಬೆಲೆ ಎಷ್ಟು?’ ಎಂದರು. ಪತ್ರಿಕೆ ನೋಡಿ ‘ಅಂದಾಜು ₹ 27 ಸಾವಿರ’ ಅಂದಾಗ, ಅಜ್ಜಿ ‘ಇದು ಜನಸಾಮಾನ್ಯರ, ಮಧ್ಯಮ ವರ್ಗದವರ ಪಾಲಿನ ಬಜೆಟ್ಟಿಗೆ ಎಟುಕದು!’ ಎಂದರು. ಮುಂದುವರಿಯುತ್ತಾ ‘ಅವರಾದ್ರೂ ಟಿ.ವಿ.ಯಲ್ಲಿ ಬರ್ತಾರೆ, ನಾವೆಲ್ಲಿ ಬರ್ತೀವಿ? ನೋಡುತ್ತೇವೆ ಅಷ್ಟೇ. ಇನ್ನು ಮುಂದೆ ಮಂದಿ ಸೀರೆ ಅಂಗಡಿಯಲ್ಲಿ ಬಜೆಟ್ ಸೀರೆ ತೋರಿಸಿ ಎನ್ನಲು ಅಡ್ಡಿಯಿಲ್ಲ’ ಎನ್ನುತ್ತಾ ಬಜೆಟ್‌ ಮೇಲಿನ ಅಜ್ಜಿಯ ವಿಮರ್ಶೆ ಮುಗಿದಿತ್ತು!

ADVERTISEMENT

⇒ನಗರ ಗುರುದೇವ್ ಭಂಡಾರ್ಕರ್, ಹೊಸನಗರ

***

ಹೂಳು ಕೆರೆಯಲ್ಲಲ್ಲ, ತಲೆಯಲ್ಲಿ ತುಂಬಿದೆಯೆ?

ಕೆರೆಕುಂಟೆ, ನದಿತೀರ, ಅಳಿವೆಯಂಥ ಜೌಗು ಭೂಮಿಗಳ ಸಂರಕ್ಷಣೆಗೆಂದೇ ಗುರುವಾರ (ಫೆ. 2) ‘ವಿಶ್ವ ತರಿ ಭೂಮಿ ದಿನ’ವನ್ನು ಜಾಗತಿಕ ಮಟ್ಟದಲ್ಲಿ ಆಚರಿಸಲಾಯಿತು. ಮನುಷ್ಯರಿಗಷ್ಟೇ ಅಲ್ಲ, ಒಟ್ಟಾರೆ ಜೀವಲೋಕಕ್ಕೆ ಆಸರೆ ನೀಡುವ ಈ ಜೌಗು ಭೂಮಿಗಳು ಜಗತ್ತಿನ ಎಲ್ಲೆಡೆ ನಿರಂತರ ಅವನತಿಗೀಡಾಗುತ್ತಿವೆ. ಅರಣ್ಯನಾಶಕ್ಕಿಂತ ಮೂರು ಪಟ್ಟು ವೇಗದಲ್ಲಿ ಈ ಜಲಸೆಲೆಗಳು ದುರ್ಗತಿಗೀಡಾಗುತ್ತಿವೆ ಎಂದು ವಿಶ್ವಸಂಸ್ಥೆ ಹೇಳಿದೆ. ಈ ಕುರಿತು ಜನಜಾಗೃತಿ ಮೂಡಿಸಲೆಂದು 130ಕ್ಕೂ ಹೆಚ್ಚು ದೇಶಗಳಲ್ಲಿ ಗುರುವಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕದಲ್ಲಿ ಜನನಾಯಕರಿಗಂತೂ ಇಂಥ ಗಂಭೀರ ವಿಷಯಗಳ ಬಗ್ಗೆ ಗಮನಹರಿಸಲು ಬಿಡುವಿಲ್ಲ.

ಆಡಳಿತಯಂತ್ರಕ್ಕೆ ಏನಾಗಿದೆ? ಕನಿಷ್ಠ ಆರು ಸರ್ಕಾರಿ ಇಲಾಖೆಗಳ ಮತ್ತು ಹತ್ತಾರು ಪ್ರಾಧಿಕಾರ, ನಿಗಮ, ಮಂಡಳಿಗಳ ಸಾವಿರಾರು ಅಧಿಕಾರಿಗಳು ನೀರಿಗೆ ಸಂಬಂಧಿಸಿದ ಕೆಲಸಕ್ಕೆ ಸಂಬಳ ಪಡೆಯುತ್ತಿದ್ದಾರೆ. ಇತರ ಜಿಲ್ಲೆಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮ ಬಿಡಿ; ಬೆಂಗಳೂರಿನಲ್ಲಿ ಒಂದೇ ಒಂದಾದರೂ ಸಾರ್ವಜನಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಇವರಿಂದ ಸಾಧ್ಯವಾಗಿಲ್ಲವೆ? ಇಲ್ಲಿನ ಕೆರೆಗಳ ಜೀರ್ಣೋದ್ಧಾರಕ್ಕೆ ನೀರಿನಂತೆ ಹಣ ಚೆಲ್ಲಿದ ಕಾಟಾಚಾರಕ್ಕೆ ಒಂದು ಜಾಹೀರಾತನ್ನಾದರೂ ನೀಡಿ ಕೈತೊಳೆದುಕೊಳ್ಳಬಹುದಿತ್ತು. ಅದನ್ನೂ ಮಾಡಿಲ್ಲ. ಜೌಗುಭೂಮಿಗಳಲ್ಲಿ ತುಂಬಿದಷ್ಟೇ ಪ್ರಮಾಣದ ಹೂಳು ಆಡಳಿತಯಂತ್ರದೊಳಕ್ಕೂ ತುಂಬಿದೆಯೆ?

ನಾಗೇಶ ಹೆಗಡೆ, ಕೆಂಗೇರಿ

***

ಪಾತಾಳ ಲೋಕಕ್ಕೆ ಇನ್ನಷ್ಟು ಹಸಿವು?

ಕೇಂದ್ರ ಸರ್ಕಾರದಿಂದ 2023- 24ನೇ ಸಾಲಿಗೆ ಭಾರಿ ಗಾತ್ರದ (ಸಾಲದ) ಬಜೆಟ್ ಮಂಡನೆ ಆಗಿದೆ. ಯಾವಾಗಲೂ ಲಾಭದಲ್ಲೇ ಇರುವ ಉಳ್ಳವರ ಲೋಕದ ಜನರಿಗೆ ಬಜೆಟ್ ಹೇಗಿದ್ದರೂ ಪರಿಣಾಮ ಬೀರದು. ಶೇ 30-35ರಷ್ಟು ಮಾತ್ರ ಮರ್ತ್ಯಲೋಕದ ಜನರಿದ್ದಾರೆ (ಮಧ್ಯಮ ವರ್ಗ). ಮಂಡಿಸಿರುವ ಬಜೆಟ್‌ನಲ್ಲಿ ಇವರ ದುಡಿಮೆ ಮತ್ತು ಸಂಬಳದ ಮೇಲೆ ಕಣ್ಣಿಟ್ಟು ಕೆಲವು ವಸ್ತುಗಳನ್ನು ಖರೀದಿಸಲು ಉತ್ತೇಜನ ನೀಡಲಾಗಿದೆ. ಉಳಿದಂತೆ ಶೇ 55-60ರಷ್ಟು ಪಾತಾಳ ಲೋಕದ (ಆರ್ಥಿಕವಾಗಿ ಕೆಳಮಟ್ಟ) ಕೂಲಿ ಮಾಡುವ ಜನರ ಬದುಕಿನ ಸುಧಾರಣೆಗಾಗಿ ಬಜೆಟ್‌ನಲ್ಲಿ ಸಾರಾಂಶ ಏನಿದೆ? ಗ್ರಾಮೀಣ ಉದ್ಯೋಗ ಖಾತರಿಯಲ್ಲಿ ಅನುದಾನ ಕಡಿತ, ಆಹಾರದ ಸಬ್ಸಿಡಿ ಕಡಿತ, ರಸಗೊಬ್ಬರದ ಸಬ್ಸಿಡಿ ಕಡಿತ, ಕೈಗಾರಿಕಾ ಅಭಿವೃದ್ಧಿಗೆ, ಅಲ್ಪಸಂಖ್ಯಾತರ ಕಲ್ಯಾಣ ನಿಧಿಗೆ, ಗ್ರಾಮೀಣಾಭಿವೃದ್ಧಿಗೆ, ಅಪೌಷ್ಟಿಕತೆಯ ನಿವಾರಣೆಗೆ ಈ ಹಿಂದೆ ತೆಗೆದಿರಿಸುತ್ತಿದ್ದ ಅನುದಾನಕ್ಕೆ ಹೋಲಿಸಿದರೆ ಈ ಸಲ ಅನುದಾನದಲ್ಲಿ ಕಡಿತ ಮಾಡಲಾಗಿದೆ.

ಬಜೆಟ್ ಈ ವರ್ಗದ ಜನರನ್ನು ಮೇಲೆತ್ತುವ ಕೆಲಸ ಮಾಡಬೇಕಾಗಿತ್ತು. ಆದರೆ ಈಗ ಮಂಡಿಸಿರುವ ಬಜೆಟ್‌, ಪಾತಾಳ ಲೋಕದ ಈ ಜನರಿಗೆ ಇನ್ನಷ್ಟು ಹಸಿವು, ರೋಗ ಬಾಧೆ, ಶಿಕ್ಷಣ ವಂಚನೆ, ಸಂಕಷ್ಟಗಳ ಯಾದಿ ದೊಡ್ಡದಾಗಲು ಪೂರಕವಾಗಿ ಇದ್ದಂತಿದೆ.

ತಾ.ಸಿ.ತಿಮ್ಮಯ್ಯ, ಬೆಂಗಳೂರು

***

ಮತ್ತೆ ನಡೆಯಲಿ ದುರ್ಗೋತ್ಸವ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಜಿಲ್ಲಾ ಉತ್ಸವಗಳು ನಡೆಯುತ್ತವೆ. ಆದರೆ ನಮ್ಮ ಚಿತ್ರದುರ್ಗದಲ್ಲಿ ‘ದುರ್ಗೋತ್ಸವ’ ಎಂಬ ಹೆಸರಿನಲ್ಲಿ ಒಂದೆರಡು ಬಾರಿ ಜಿಲ್ಲಾ ಉತ್ಸವ ನಡೆದದ್ದು ಬಿಟ್ಟರೆ ಮತ್ತೆ ನಡೆದಿಲ್ಲ. ಚಿತ್ರದುರ್ಗ ಸೇರಿದಂತೆ ಜಿಲ್ಲೆಯ ಅನೇಕ ತಾಲ್ಲೂಕುಗಳು ಗತ ಇತಿಹಾಸ ವೈಭವವನ್ನು ಹೇಳುತ್ತವೆ. ವರ್ಷಕ್ಕೊಮ್ಮೆ ಜಿಲ್ಲಾ ಉತ್ಸವ ನಡೆದರೆ ಆ ಹೆಸರಿನಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಆದಾವು. ಅದರಂತೆ ಕಲೆ, ಕ್ರೀಡೆಗೆ ಪ್ರೋತ್ಸಾಹ, ಸಾಹಿತ್ಯ, ಸಂಸ್ಕೃತಿ ಬಗೆಗೆ ಚರ್ಚೆ, ಸಂವಾದ ನಡೆಯಲು ಅವಕಾಶ ಸೇರಿದಂತೆ ಪ್ರವಾಸೋದ್ಯಮ ಪ್ರಗತಿ, ಆ ಮೂಲಕ ಉದ್ಯೋಗ ಸೃಷ್ಟಿ ಸಾಧ್ಯವಾಗುತ್ತದೆ. ಸರ್ಕಾರ ‘ದುರ್ಗೋತ್ಸವ’ ಮಾಡಲು ಮುಂದಾಗುವುದೇ?

ರುದ್ರಮೂರ್ತಿ ಎಂ.ಜೆ., ಚಿತ್ರದುರ್ಗ

***

ಕುಶಲಕರ್ಮಿಗಳಿಗೆ ಪುನರುಜ್ಜೀವನ ನೀಡಲಿ

2023- 24ನೇ ಸಾಲಿನ ಕೇಂದ್ರ ಬಜೆಟ್, ಕುಶಲಕರ್ಮಿಗಳಿಗಾಗಿ ಪರಿಚಯಿಸಿರುವ ‘ವಿಶ್ವಕರ್ಮ ಕೌಶಲ ಸಮ್ಮಾನ್ ಯೋಜನೆ’ ಸ್ವಾಗತಾರ್ಹ. ದೊಡ್ಡ ಕೈಗಾರಿಕೆಗಳು ಉತ್ಪಾದಿಸುವ ಸರಕುಗಳು ಮತ್ತು ಆಮದು ಸರಕುಗಳೊಂದಿಗೆ ಪೈಪೋಟಿ ಮಾಡಲಾಗದೆ ಎಷ್ಟೋ ಕರಕುಶಲ ಕೈಗಾರಿಕೆಗಳು ಅವನತಿ ಹೊಂದಿ ಕುಶಲಕರ್ಮಿಗಳು ನಿರುದ್ಯೋಗ, ಬಡತನದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಭಾಗಶಃ ಅವನತಿ ಹೊಂದಿದ ಕರಕುಶಲ ಕೈಗಾರಿಕೆಗಳಿಗೆ ಈ ಯೋಜನೆಯು ಸ್ಫೂರ್ತಿ ತುಂಬಲಿ. ಉತ್ಪಾದನೆಯ ಗುಣಮಟ್ಟ ಹೆಚ್ಚಿಸುವುದರ ಬಗ್ಗೆ ತರಬೇತಿ ಮತ್ತು ಕುಶಲಕರ್ಮಿಗಳು ಉತ್ಪಾದಿಸುವ ಕರಕುಶಲ ಸರಕುಗಳಿಗೆ ಜಗತ್ತಿನಾದ್ಯಂತ ಬೇಡಿಕೆ ಬರುವಂತೆ ಮಾಡಲಿ.

ನಿರ್ಮಲ ನಾಗೇಶ್, ಕಲಬುರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.