ADVERTISEMENT

ಮಸಿ ಕಾಣಿಸಿದ ಕನ್ನಡಿಯನ್ನೇಕೆ ದೂರಬೇಕು?

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 20:21 IST
Last Updated 10 ಫೆಬ್ರುವರಿ 2021, 20:21 IST

‘ಪಾಪ್ ಗಾಯಕಿ ರಿಯಾನಾಗೆ ಭಾರತದ ಕೃಷಿ ಮತ್ತು ಹೊಸ ಕೃಷಿ ಕಾಯ್ದೆಯ ಬಗ್ಗೆ ಏನು ಗೊತ್ತು?’ ಎಂದು ಆಕೆಯನ್ನು ಅನೇಕರು ಗೇಲಿ ಮಾಡಿದ್ದಾರೆ. ಕೇಂದ್ರ ಸಚಿವ ಸದಾನಂದ ಗೌಡ ಅವರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘ರಿಯಾನಾ ಎಂದಾದರೂ ಭತ್ತದ ಗದ್ದೆಯನ್ನು ನೋಡಿದ್ದಾರೆಯೇ’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಸತ್ಯೋತ್ತರ ಯುಗದಲ್ಲಿ ಸತ್ಯ ಹೇಗೆ ಅಪ್ರಸ್ತುತವಾಗುತ್ತದೆ ಮತ್ತು ವಿರೂಪಗೊಳ್ಳುತ್ತಾ ಹೋಗುತ್ತದೆ ಎಂಬುದಕ್ಕೆ ಈ ಹೇಳಿಕೆಗಳು ಅತ್ಯುತ್ತಮ ಉದಾಹರಣೆ.

ಅಸಲಿಗೆ ರಿಯಾನಾ ಭಾರತದ ಕೃಷಿಯ ಬಗ್ಗೆಯಾಗಲೀ ಕೃಷಿ ಕಾಯ್ದೆಯ ಬಗ್ಗೆಯಾಗಲೀ ಆಕ್ಷೇಪದ ಒಂದೇ ಒಂದು ಮಾತು ಆಡಿಲ್ಲ. ಭಾರತದಲ್ಲಿ ಸದ್ಯ ನಡೆಯುತ್ತಿರುವ ರೈತ ಹೋರಾಟದ ಬಗ್ಗೆ ಸಿಎನ್‌ಎನ್ ಸುದ್ದಿ ಸಂಸ್ಥೆ ಮಾಡಿದ ವಿಸ್ತೃತ ವರದಿಯನ್ನು ಉಲ್ಲೇಖಿಸಿ ಆಕೆ, ‘ಇದರ ಬಗ್ಗೆ ನಾವೇಕೆ ಮಾತನಾಡುತ್ತಿಲ್ಲ?’ ಎಂದು ಟ್ವಿಟರ್ ಮೂಲಕ ಕೇಳಿದ್ದು ಅಷ್ಟೇ. ಅಲ್ಲಿಯೇ ಕಡೆಗಣಿಸಿಬಿಡುವ ಬದಲು ಆಕೆಯ ಈ ಒಂದು ಸಾಲಿನ ಪ್ರಶ್ನೆಗೆ ಕೇಂದ್ರ ಸರ್ಕಾರ ಸಹಿತ ಕೆಲವರು ಉರಿದುಬಿದ್ದ ರೀತಿಯಿಂದ ಭಾರತದ ವರ್ಚಸ್ಸಿಗೆ ಜಾಗತಿಕವಾಗಿ ಇನ್ನಷ್ಟು ಹಾನಿಯಾಯಿತೇ ಹೊರತು ಇನ್ನೇನೂ ಸಾಧನೆಯಾಗಲಿಲ್ಲ. ಯಾರಾದರೂ ನಮ್ಮ ನಡವಳಿಕೆಯ ಬಗ್ಗೆ ಟೀಕಿಸಿದರೆ ನಾವು ಅದನ್ನು
ಸಕಾರಾತ್ಮಕವಾಗಿ ಸ್ವೀಕರಿಸಿ ಆತ್ಮಾವಲೋಕನ ಮಾಡಿಕೊಳ್ಳಬೇಕೇ ಹೊರತು ಟೀಕಿಸಿದವರ ಮೇಲೆ ಮುಗಿಬೀಳುವುದಲ್ಲ. ನಮ್ಮ ಮುಖದ ಮೇಲಿರುವ ಮಸಿಯನ್ನು ಕಾಣಿಸಿದ ಕನ್ನಡಿಯನ್ನೇಕೆ ನಾವು ದೂರಬೇಕು?

ಶ್ರೀನಿವಾಸ ಕಾರ್ಕಳ,ಮಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.