ADVERTISEMENT

ವಿಮಾನ ಅಪಘಾತ: ಕೆಳಗಿನವರಿಗೂ ಬೇಕು ಸುರಕ್ಷತೆ 

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2019, 2:59 IST
Last Updated 20 ಮಾರ್ಚ್ 2019, 2:59 IST
   

ಇಂಡೊನೇಷ್ಯಾ, ಇಥಿಯೋಪಿಯಾಗಳಲ್ಲಿ ‘ಬೋಯಿಂಗ್ 737 ಮ್ಯಾಕ್ಸ್’ ವಿಮಾನ ಅಪಘಾತ ಆದ ನಂತರ ಅನೇಕ ದೇಶಗಳಲ್ಲಿ ಈ ವಿಮಾನಗಳ ಹಾರಾಟಕ್ಕೆ ನಿಷೇಧ ಹಾಕಲಾಗುತ್ತಿದೆ.

ಇಂಡಿಯಾದಲ್ಲಿ ಕೂಡ ನಿಷೇಧ ಹಾಕಿದ್ದೂ ಅಲ್ಲದೆ ಬೇರೆ ದೇಶಗಳ ಮ್ಯಾಕ್ಸ್ ವಿಮಾನಗಳು ಬಾರದಂತೆ ಪ್ರತಿಬಂಧ ಹೇರಲಾಗಿದೆ. ಪ್ರಯಾಣಿಕರ ಸುರಕ್ಷೆ ಕುರಿತ ವಿಮಾನ ಸಾರಿಗೆಯವರ ಕಾಳಜಿ ಮೆಚ್ಚತಕ್ಕದ್ದೇ ಹೌದು. ಅಷ್ಟೇ ಕಾಳಜಿಯನ್ನು ಸಾಮಾನ್ಯ ಜನರ ಸಾರಿಗೆಯ ವಿಷಯದಲ್ಲೂ ವಹಿಸಬೇಕು.

ನಮ್ಮಲ್ಲಿ ಟ್ರ್ಯಾಕ್ಟರ್‌ಗಳು ಹಿಂಬದಿಯ ಬೆಳಕೂ ಇಲ್ಲದೆ (ಐದು ರೂಪಾಯಿ ಮೊತ್ತದ ರಿಫ್ಲೆಕ್ಟರ್ ಸೋನೇರಿ ಕಾಗದವನ್ನೂ ಅಂಟಿಸದೆ) ಕತ್ತಲಲ್ಲಿ ಹೆದ್ದಾರಿಯಲ್ಲಿ ಸಂಚರಿಸುತ್ತ ಪ್ರತಿವರ್ಷ 300ಕ್ಕೂ ಹೆಚ್ಚು ಜನರ ಸಾವುನೋವಿಗೆ ಕಾರಣವಾಗುತ್ತಿವೆ.

ADVERTISEMENT

ಇಪ್ಪತ್ತು ವರ್ಷಕ್ಕೂ ಹಳತಾದ ಲಾರಿಗಳು ಹೊಗೆ ಕಾರುತ್ತಾ ಎಲ್ಲಾ ಬಗೆಯ ಸುರಕ್ಷಾ ಕಾನೂನುಗಳನ್ನು ಧಿಕ್ಕರಿಸಿ ಚಲಿಸುತ್ತ, ಕತ್ತಲಲ್ಲಿ ಕೆಟ್ಟು ನಿಂತು ಅಪಘಾತಕ್ಕೆ ಕಾರಣ ಆಗುತ್ತವೆ. ಅಂತಹ ವಾಹನಗಳಿಗೆ ನಿಷೇಧ ಹಾಕಿದರೆ ಬಡವರ ಹೊಟ್ಟೆಯ ಮೇಲೆ ಹೊಡೆದಂತಾಗುತ್ತದೆ ನಿಜ. ಆದರೆ ಸರ್ಕಾರವೇ ಪರಿಹಾರ ಕೊಟ್ಟು ಅವನ್ನು ಗುಜರಿಗೆ ಹಾಕಬಾರದೇಕೆ?

ನೂರಾರು ಕೋಟಿ ಮೊತ್ತದ ಒಂದೊಂದು ವಿಮಾನವನ್ನು ಗುಜರಿಗೆ ಹಾಕುವ ವೆಚ್ಚಕ್ಕೆ ಹೋಲಿಸಿದರೆ, ಲಕ್ಷಗಟ್ಟಲೆ ಹಳೆ ಲಾರಿ, ಟೆಂಪೋಗಳನ್ನು ಗುಜರಿಗೆ ಹಾಕಿ ಮಾಲೀಕರಿಗೂ ಪರಿಹಾರ ಕೊಟ್ಟು ಜನರ ಜೀವ ಮತ್ತು ಗಾಳಿಯ ಶುದ್ಧತೆಯನ್ನು ಕಾಪಾಡಲು ಸಾಧ್ಯ ಇದ್ದೀತು. ಹಳೆ ಲಾರಿ, ಟ್ರ್ಯಾಕ್ಟರ್ ಟ್ರೇಲರ್ ಮೇಲೆ ಕಣ್ಣಿಡಲೂ ಆಗದಷ್ಟು ದುರ್ಬಲವೇ ನಮ್ಮ ಸಾರಿಗೆ ಇಲಾಖೆ ಅಥವಾ ಕುರುಡೇ?

–ನಾಗೇಶ ಹೆಗಡೆ, ಕೆಂಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.