ADVERTISEMENT

ಪಡಿತರ ವಿವರ ಬಹಿರಂಗಗೊಳ್ಳಲಿ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 19:30 IST
Last Updated 11 ಸೆಪ್ಟೆಂಬರ್ 2020, 19:30 IST

ನ್ಯಾಯಬೆಲೆ ಅಂಗಡಿಗಳಲ್ಲಿ ಈಗ ರಾಜ್ಯ ಸರ್ಕಾರದ ಅನ್ನಭಾಗ್ಯದ ಅಕ್ಕಿಯ ಜೊತೆಗೆ ಕೇಂದ್ರ ಸರ್ಕಾರದ ಅಕ್ಕಿಯೂ ವಿತರಣೆಯಾಗುತ್ತಿದೆ. ಕೊರೊನಾ ಸೋಂಕಿನ ಸಂಕಷ್ಟದ ಸಮಯದಲ್ಲಿ ಕೆಲ ತಿಂಗಳುಗಳಿಂದ ಕೇಂದ್ರ ಸರ್ಕಾರವು ಪಡಿತರ ಚೀಟಿದಾರ ಕುಟುಂಬದ ಪ್ರತೀ ಸದಸ್ಯನಿಗೆ 5 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ಒಮ್ಮೊಮ್ಮೆ ಅಕ್ಕಿಯ ಜೊತೆಗೆ ತೊಗರಿಬೇಳೆಯನ್ನೂ ನೀಡಲಾಗಿದೆ. ಆಗಸ್ಟ್‌ನಲ್ಲಿ ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ ಕೆಲ ಜಿಲ್ಲೆಗಳಲ್ಲಿ ಅಕ್ಕಿಗೆ ಬದಲು ರಾಗಿಯನ್ನು ವಿತರಿಸಿದೆ. ಆ ಪ್ರಕಾರ, ಬಿಪಿಎಲ್ ಕಾರ್ಡ್ ಹೊಂದಿರುವ ನಾಲ್ವರು ಸದಸ್ಯರ ಒಂದು ಕುಟುಂಬಕ್ಕೆ ಅನ್ನಭಾಗ್ಯದ 20 ಕೆ.ಜಿ. ರಾಗಿ ಮತ್ತು 2 ಕೆ.ಜಿ. ಗೋಧಿ ಹಾಗೂ ಕೇಂದ್ರ ಸರ್ಕಾರದ 20 ಕೆ.ಜಿ. ಅಕ್ಕಿ ಸೇರಿ ಒಟ್ಟು 42 ಕೆ.ಜಿ. ಧಾನ್ಯ ಸಿಗುತ್ತದೆ. ಇಂತಹ ಸಂಕೀರ್ಣ ವಿತರಣಾ ವ್ಯವಸ್ಥೆಯ ವಿವರದ ಬಗ್ಗೆ ಬಹಳಷ್ಟು ಮಂದಿಗೆ ಅರಿವಿಲ್ಲ. ಅವರ ಬಿಪಿಎಲ್ ಕಾರ್ಡಿನ ಪಡಿತರ ಹಂಚಿಕೆಯ ಪಟ್ಟಿಯಲ್ಲಿ ತಿಂಗಳ ಮೊದಲ ದಿನವೇ ಈ ಹಂಚಿಕೆಯ ವಿವರ ದಾಖಲಾಗಿರುತ್ತದಾದರೂ ಆನ್‍ಲೈನ್‍ನಲ್ಲಿ ತಮ್ಮ ಪಡಿತರ ವಿವರ ನೋಡಿ
ತಿಳಿದುಕೊಳ್ಳುವಷ್ಟು ಕೌಶಲ ಬಹಳಷ್ಟು ಕಾರ್ಡುದಾರರಿಗೆ ಇರುವುದಿಲ್ಲ.

ಅಕ್ಕಿಯ ಜೊತೆಗೆ ರಾಗಿ, ಗೋಧಿ ಕೂಡ ವಿತರಣೆಯಾದಾಗ ಬಹಳಷ್ಟು ಗ್ರಾಹಕರು ಅದನ್ನು ಬೋನಸ್ ಎಂದೇ ತಿಳಿಯುವ ಸಂಭವವಿರುತ್ತದೆ. ಹಾಗಾಗಿ ತೂಕದ ಬಗ್ಗೆ ಯೋಚಿಸುವುದಿಲ್ಲ. ಇದನ್ನೇ ಅವಕಾಶವಾಗಿ ಮಾಡಿಕೊಂಡು, ನ್ಯಾಯಬೆಲೆ ಅಂಗಡಿಗಳಲ್ಲಿ ಗ್ರಾಹಕರನ್ನು ವಂಚಿಸಿದ್ದು ಕೆಲವೆಡೆ ಬೆಳಕಿಗೆ ಬಂದಿದೆ. ಅಕ್ಕಿಯನ್ನೇನೋ ಸರಿಯಾಗಿಯೇ ವಿತರಿಸಿದರೂ ರಾಗಿ ಮತ್ತು ಗೋಧಿಯಲ್ಲಿ ಅರ್ಧಕ್ಕರ್ಧ ಖೋತಾ ಮಾಡಿ ಬಡವರ ಹೊಟ್ಟೆಯ ಮೇಲೆ ಹೊಡೆದ ದೂರುಗಳಿವೆ. ಆಹಾರ ಇಲಾಖೆ ನಿರೀಕ್ಷಕರು ಈ ಅವ್ಯವಹಾರದಲ್ಲಿ ಜಾಣಕುರುಡುತನ ಪ್ರದರ್ಶಿಸಿದ್ದು
ಅನಿರೀಕ್ಷಿತವೇನಲ್ಲ!

ಪಡಿತರ ವಿತರಣೆಗೆ ಮುಂಚೆ, ಆಯಾ ತಿಂಗಳು ಗ್ರಾಹಕರಿಗೆ ಲಭಿಸಬಹುದಾದ ಆಹಾರಧಾನ್ಯಗಳ ಮಾಹಿತಿ ಎಲ್ಲರಿಗೂ ತಿಳಿಯುವಂತೆ ಸರ್ಕಾರ ಪ್ರಕಟಣೆ ಹೊರಡಿಸಬೇಕು ಹಾಗೂ ನ್ಯಾಯಬೆಲೆ ಅಂಗಡಿಗಳ ಮುಂದೆ ಪಡಿತರ ವಿತರಣೆಯ ವಿವರದ ಫಲಕ ಕಡ್ಡಾಯವಾಗಿ ಪ್ರದರ್ಶಿಸುವ ಏರ್ಪಾಡು ಮಾಡಬೇಕು. ಹೀಗಾದಾಗ ಪಡಿತರ ಚೀಟಿದಾರರು ಎಚ್ಚೆತ್ತುಕೊಳ್ಳುತ್ತಾರೆ, ತೂಕದಲ್ಲಿ ವ್ಯತ್ಯಾಸ ಕಂಡುಬಂದರೆ ಪ್ರಶ್ನಿಸುವ ಧೈರ್ಯ ತೋರುತ್ತಾರೆ. ಸರ್ಕಾರವು ಆಹಾರಧಾನ್ಯಗಳನ್ನು ನ್ಯಾಯಬೆಲೆ ಅಂಗಡಿಗಳಿಗೆ ರವಾನಿಸಿದರಷ್ಟೇ ಸಾಲದು, ವಿವರ ಬಹಿರಂಗಗೊಳಿಸಿ, ವಂಚನೆಗೆ ಅವಕಾಶವಾಗದಂತೆ ಎಚ್ಚರ ವಹಿಸಬೇಕಾದ ತುರ್ತು ಅಗತ್ಯವಿದೆ.

ADVERTISEMENT

– ಟಿ.ಎಂ.ಕೃಷ್ಣ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.