ADVERTISEMENT

ಅಪನಂಬಿಕೆಯಿಂದ ಹಾಳಾಯಿತು ಆಹಾರಧಾನ್ಯ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 19:30 IST
Last Updated 5 ನವೆಂಬರ್ 2020, 19:30 IST

ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ವಿತರಿಸಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ (ಕೆಎಫ್‌ಸಿಎಸ್‌ಸಿ) ಗೋದಾಮುಗಳಲ್ಲಿ ಸಂಗ್ರಹಿಸಿ ಇಟ್ಟಿದ್ದ ಸಾವಿರಾರು ಟನ್‌ಗಳಷ್ಟು ಆಹಾರಧಾನ್ಯ ದೊಡ್ಡ ಪ್ರಮಾಣದಲ್ಲಿ ಹಾಳಾಗಿದ್ದರೆ, ಅದಕ್ಕೆ ಹೊಂದಾಣಿಕೆಗೆ ಅವಕಾಶ ಇರದ ಕಾನೂನು ಮತ್ತು ಕೆಳ ಹಂತದ ಅಧಿಕಾರಿಗಳ ಮೇಲೆ ಹಿರಿಯ ಅಧಿಕಾರಿಗಳು ಹೊಂದಿರುವ ಅಪನಂಬಿಕೆ ಕಾರಣ. ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ (ಪಿಡಿಎಸ್‌) ವಿತರಿಸಬೇಕಾದ ಅಕ್ಕಿ ಮತ್ತು ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸುವ ಅಕ್ಕಿ ಒಂದೇ ಗೋದಾಮಿನಲ್ಲಿ ಇದ್ದರೂ ಎರಡನ್ನೂ ಪ್ರತ್ಯೇಕವಾಗಿ ಶೇಖರಣೆ ಮಾಡಿ ಇಡಲು ಆದೇಶ ಇರುತ್ತದೆ. ಬಿಸಿಯೂಟಕ್ಕೆ ಬಳಕೆ ಆಗುವ ಅಕ್ಕಿ, ಗೋಧಿ ವ್ಯವಹಾರವನ್ನು ಶಿಕ್ಷಣ ಇಲಾಖೆ ನಿರ್ವಹಣೆ ಮಾಡಿದರೆ, ಪಿಡಿಎಸ್ ಅನ್ನು ಆಹಾರ ಇಲಾಖೆ ಅಧಿಕಾರಿಗಳು ನಿರ್ವಹಿಸುತ್ತಾರೆ. ಇದರಿಂದಾಗಿ ಒಂದೇ ಗೋದಾಮಿನಲ್ಲಿ ಈ ಎರಡೂ ಯೋಜನೆಯ
ಅಕ್ಕಿ, ಗೋಧಿ ಇದ್ದರೂ ಬೇರೆ ಬೇರೆ ಕಡೆ ಇಟ್ಟು ನಿರ್ವಹಣೆ ಮಾಡುವುದು ಗೋದಾಮು ನಿರ್ವಾಹಕರಿಗೆ
ಅನಿವಾರ್ಯ.

ಅಕ್ಕಿ, ಗೋಧಿಯನ್ನು ಬಳಸದೆ ಎರಡು-ಮೂರು ತಿಂಗಳು ಒಂದೇ ಕಡೆ ಇಟ್ಟರೆ, ಹುಳು ಬೀಳುವುದು ಎಲ್ಲರಿಗೂ ಗೊತ್ತಿರುವ ವಿಷಯ. ಪ್ರತೀ ತಿಂಗಳೂ ವಿತರಣೆ ಆಗುವ ಪಿಡಿಎಸ್‌ಗೆ ಹಳೇ ದಾಸ್ತಾನು ಬಳಸಿಕೊಂಡು ಒಟ್ಟಾರೆ ಲೆಕ್ಕ ಇಡುವ ಸ್ವಾತಂತ್ರ್ಯವನ್ನು ಗೋದಾಮು ನಿರ್ವಾಹಕರಿಗೆ ಕಾನೂನು ಕೊಟ್ಟಿಲ್ಲ. ಈ ಎರಡೂ ಇಲಾಖೆಗಳ ನಡುವೆ ಹೊಂದಿಕೊಂಡು ಕೆಲಸ ಮಾಡಬೇಕಾದ ಅನಿವಾರ್ಯ ಅವರಿಗೆ ಇರುವುದರಿಂದ, ಹಳೇ ದಾಸ್ತಾನು ಹಾಗೆಯೇ ಉಳಿದು ಹಾಳಾಗುತ್ತದೆ. ಭವಿಷ್ಯದಲ್ಲಿ ಈ ರೀತಿ ಆಗುವುದನ್ನು ತಪ್ಪಿಸಲು ಗೋದಾಮು ನಿರ್ವಾಹಕರು ಮತ್ತು ಅಧಿಕಾರಿಗಳ ನಡುವೆ ಹೊಂದಾಣಿಕೆ ಕಾಯ್ದುಕೊಳ್ಳುವಂತೆ ಹಾಗೂ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸುವಂತೆ ಸರ್ಕಾರ ಆದೇಶಿಸಲಿ.

- ತಾ.ಸಿ.ತಿಮ್ಮಯ್ಯ,ನಿವೃತ್ತ ಸಹಾಯಕ ನಿರ್ದೇಶಕ, ಆಹಾರ ಇಲಾಖೆ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.