ADVERTISEMENT

ಸಫಾರಿ ಹೆಸರಲ್ಲಿ ಸ್ವಾತಂತ್ರ್ಯಹರಣ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 19:31 IST
Last Updated 1 ಏಪ್ರಿಲ್ 2021, 19:31 IST

ವನ್ಯಪ್ರಾಣಿಗಳ ವಾಸಕ್ಕೆ ಅಳಿದುಳಿದಿರುವ ಕಾಡುಗಳನ್ನು ಸರ್ಕಾರಗಳು ಹೇಗೋ ರಕ್ಷಣೆ ಮಾಡುತ್ತಿವೆ. ಈ ದಿಸೆಯಲ್ಲಿ ಹಲವಾರು ನೀತಿ, ನಿಯಮಗಳನ್ನು ತಂದರೂ ಪರೋಕ್ಷವಾಗಿ ‘ಪ್ರವಾಸೋದ್ಯಮ’ದ ಬೆಳವಣಿಗೆಗಾಗಿ ‘ಸಫಾರಿ’ಯನ್ನು ಜಾರಿಗೊಳಿಸಿ ವನ್ಯಪ್ರಾಣಿಗಳ ಬದುಕಿನ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿವೆ. ಕಾಡುಪ್ರಾಣಿಗಳು ಮತ್ತು ಮಾನವರ ನಡುವಿನ ಸಂಘರ್ಷ ಹೆಚ್ಚುತ್ತಿದ್ದರೂ ವನ್ಯಪ್ರಾಣಿಗಳ ಜೀವಿಸುವ ಸ್ವಾತಂತ್ರ್ಯಕ್ಕೆ ಅಡ್ಡಿಯನ್ನುಂಟುಮಾಡುವುದು ಯಾವ ನ್ಯಾಯ?

ರಾಜ್ಯದಲ್ಲಿ ಸಂರಕ್ಷಿತ ಅರಣ್ಯ, ರಾಷ್ಟ್ರೀಯ ಉದ್ಯಾನ, ಹುಲಿ ಸಂರಕ್ಷಿತ ಪ್ರದೇಶಗಳಿಗೆ ನಗರವಾಸಿಗಳು ತಮ್ಮ ಪ್ರತಿಷ್ಠೆಗಾಗಿ ಭೇಟಿ ನೀಡುತ್ತಾರೆ. ಈ ಸ್ಥಳಗಳಿಗೆ ಸಮೀಪದಲ್ಲಿ ನಾಯಿಕೊಡೆಗಳಂತೆ ತಲೆಎತ್ತಿರುವ ರೆಸಾರ್ಟ್‌ಗಳ ಆರ್ಥಿಕಾಭಿವೃದ್ಧಿಗೆ ಈ ವನ್ಯಮೃಗಗಳೇ ಬಂಡವಾಳವಾಗಿವೆ. ಅನತಿ ದೂರದಲ್ಲಿ ನಿಂತುಕೊಂಡು ಕಾಡುಪ್ರಾಣಿಗಳ, ಅವುಗಳ ಆಹಾರ ಸರಪಳಿಯ ಫೋಟೊಗಳನ್ನು ತೆಗೆಯುವುದು, ಅವುಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದು, ನಂತರ ಆ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಾದ ಫೇಸ್‍ಬುಕ್, ವಾಟ್ಸ್‌ಆ್ಯಪ್‌, ಟ್ವಿಟರ್‌ನಂತಹವುಗಳಲ್ಲಿ ಹಾಕಿಕೊಳ್ಳುತ್ತಿರುವುದು ಎಷ್ಟು ಸರಿ? ಇದರಿಂದ ಅರಣ್ಯ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆಯಾಗದೇ?

ಸಫಾರಿಗಾಗಿ ತೆರಳಿದವರು ಹಲವು ಸಂದರ್ಭಗಳಲ್ಲಿ ಕೂದಲೆಳೆಯ ಅಂತರದಲ್ಲಿ ಪ್ರಾಣಿಗಳ ದಾಳಿಯಿಂದ ತಪ್ಪಿಸಿಕೊಂಡರೆಂಬ ಸುದ್ದಿಗಳೂ ಮಾಧ್ಯಮಗಳಲ್ಲಿ ಕಂಡುಬರುತ್ತಿವೆ. ಕಾಡುಗಳಲ್ಲಿ ಸ್ವಚ್ಛಂದವಾಗಿ ವಿಹರಿಸುವ ಅಮೂಲ್ಯ ಪ್ರಾಣಿಗಳ ನಿರ್ಭೀತಿಯ ಓಡಾಟಕ್ಕೆ ಇಂತಹ ರೆಸಾರ್ಟ್ ಮೋಹಿತರು ಅಡ್ಡಿಪಡಿಸುವುದು ಎಷ್ಟು ಸರಿ? ಇನ್ನಾದರೂ ನಾಡಿನ ಸಂರಕ್ಷಿತ ಅರಣ್ಯಗಳು, ರಾಷ್ಟ್ರೀಯ ಉದ್ಯಾವನಗಳು, ಹುಲಿ ಸಂರಕ್ಷಿತ ಪ್ರದೇಶಗಳಿಗೆ ‘ಸಫಾರಿ’ ಹೆಸರಿನಲ್ಲಿ ಜನರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸುವ ಕಡೆ ಗಮನಹರಿಸಬೇಕು. ಮೃಗಾಲಯಗಳಲ್ಲಿ ದೇಶ ವಿದೇಶಗಳ ವಿವಿಧ ಪ್ರಭೇದಗಳ ವನ್ಯಮೃಗಗಳನ್ನು ತಂದು ಸಂರಕ್ಷಿಸುವ ಜೊತೆಗೆ ಜನರಿಗೆ ಅವುಗಳನ್ನು ನೋಡಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಜನ ಅಲ್ಲಿಯೇ ಪ್ರಾಣಿಗಳನ್ನು ನೋಡಿ ಸಂತೋಷಪಡಲಿ. ಅದು ಬಿಟ್ಟು ಯಾರೋ ಕೆಲವರ ಆರ್ಥಿಕ ಏಳ್ಗೆಗಾಗಿ ಸರ್ಕಾರಗಳು ತಲೆಬಾಗಬಾರದು.

ADVERTISEMENT

ಮಹದೇವಪ್ಪ ಪಿ., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.