ADVERTISEMENT

‘ಕಾಯಕ’ದ ಬೆವರು ದೇವರಲ್ಲವೇ?

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 19:31 IST
Last Updated 11 ಮಾರ್ಚ್ 2021, 19:31 IST

‘ದೇವರ ದೇವರು ಜನರ ಬೆವರು’ ಎಂಬ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಲೇಖನ (ಪ್ರ.ವಾ., ಮಾರ್ಚ್‌ 10) ವಸ್ತುಸತ್ಯವನ್ನು ಹುಬೇಹುಬಾಗಿ ಎತ್ತಿ ತೋರಿಸುತ್ತದೆ. ಬೆವರು ಹರಿಸದೇ ಅಧಿಕಾರ, ಅಂತಸ್ತು, ಹಣ-ಏನೆಲ್ಲವನ್ನೂ ಕೊಳ್ಳೆ ಹೊಡೆದ ಮತ್ತು ಹೊಡೆಯುತ್ತಿರುವವರಿಗೆ ಲೇಖನವು ವಾಸ್ತವವನ್ನು ಕಣ್ಮುಂದೆ ತಂದು ನಿಲ್ಲಿಸುತ್ತದೆ. ಅಂಥ ‘ಅಡ್ಡನಾಡಿ’ ಜನರನ್ನು ಪ್ರಸ್ತುತ ಲೇಖನ ಮುಟ್ಟಬೇಕು, ತಟ್ಟಬೇಕು. ಆದರೆ? ಬೆವರು ರಹಿತ ಬದುಕೇ ಕೆಲವರ ನಿತ್ಯದ ಜೀವನಕ್ರಮ ಆಗುತ್ತಿಲ್ಲವೇ? ವೈಚಾರಿಕರೆಂದು ಹೇಳಿಕೊಳ್ಳುವ ‘ಕೆಲವರಾದರೂ’ ಈ ಸಾಲಿನಲ್ಲಿ ಇಲ್ಲವೇ?

ಮನುಷ್ಯನ ಆತ್ಮಸಾಕ್ಷಿಯೇ ಸತ್ತಾಗ ಇಂಥ ನಡೆ ತನ್ನ ಸಾಮ್ರಾಜ್ಯ ಸ್ಥಾಪಿಸಿಕೊಳ್ಳುತ್ತದೆ. ಮಾನವನ ಇತಿಹಾಸವೆಂದರೆ ಇದೇ ಆಗಿದೆಯಲ್ಲವೇ? ಒಳ್ಳೆಯ ಆಡಳಿತ ವ್ಯವಸ್ಥೆ ಎನ್ನಲಾಗುವ ಪ್ರಜಾಪ್ರಭುತ್ವದಲ್ಲಿ ಇದರ ಅಪರವತಾರಗಳೇ ವಿಜೃಂಭಿಸುತ್ತಿವೆಯಲ್ಲವೇ? ಇದಕ್ಕೆ ಕೊನೆ ಇಲ್ಲವೇ? ಸಮಾಜವಾದ, ಸಾಮ್ಯವಾದ, ಸಮತಾವಾದ ಏನೆಲ್ಲ ಬಂದರೂ ಯಾವುದರಿಂದಲೂ ಈ ಸ್ಥಿತಿ ಬದಲಾಗಲೇ ಇಲ್ಲವಲ್ಲ? ಬದಲಾಗುವುದಿರಲಿ, ಇದು ಅನಿಯಂತ್ರಿತವಾಗಿ ಬೆಳೆಯುತ್ತಲೇ ಇದೆಯಲ್ಲ? ಹಾಗಿದ್ದರೆ, ಇದಕ್ಕೆ ಪರಿಹಾರವೇ ಇಲ್ಲವೇ?

ಈ ಎಲ್ಲ ಪ್ರಶ್ನೆಗಳಿಗೆ ಸಮರ್ಥ ಉತ್ತರ ಕೊಟ್ಟಿದೆ, ಹನ್ನೆರಡನೆಯ ಶತಮಾನದ ಕನ್ನಡ ವಚನಕಾರರ ‘ಕಾಯಕ’ವೆಂಬ ಕ್ರಿಯಾತತ್ವ. ಅಚ್ಚರಿಯೆಂದರೆ, ಇಡೀ ಜಗತ್ತಿಗೇ ಮಾದರಿಯಾದ ಈ ಕಾಯಕ ತತ್ವದ ಬಗ್ಗೆ ಪ್ರಸ್ತುತ ಲೇಖನದಲ್ಲಿ ಒಂದೇ ಒಂದು ಅಕ್ಷರದ ಪ್ರಸ್ತಾಪವೂ ಇಲ್ಲದಿರುವುದು! ಶರಣರ ಮೊದಲ ಆದ್ಯತೆಯೇ ಶ್ರಮಿಕರ ಬೆವರಿಗೆ ಬೆಲೆ ಬರಬೇಕೆಂಬುದಾಗಿರಲಿಲ್ಲವೇ? ಪ್ರತಿಯೊಬ್ಬರೂ ಬೆವರು ಹರಿಸಲೇಬೇಕು, ಅವರ ಬೆವರಿಗೆ ಸೂಕ್ತವಾದ ಬೆಲೆ ಸಿಗಲೇಬೇಕು, ಹೀಗೆ ಪಡೆದ ಬೆಲೆಯನ್ನು ತಾನೊಬ್ಬನೇ ತಿನ್ನದೆ, ಸಮಾಜದ ಎಲ್ಲರಿಗೂ ಸಮನಾಗಿ ಹಂಚಿ ಉಣ್ಣಬೇಕೆಂದು ಸಾರಿದ್ದು ಚಾರಿತ್ರಿಕ ನಡೆಯಲ್ಲವೇ? ಇಂಥ ಕ್ರಿಯಾತತ್ವವನ್ನು ಆ ಚಳವಳಿಯಲ್ಲಿ ಪಾಲ್ಗೊಂಡಿದ್ದ ಎಲ್ಲ ಶರಣರೂ ಅಕ್ಷರಶಃ ಆಚರಿಸಲಿಲ್ಲವೇ? ಅವರು ಮೊದಲು ನಡೆದು, ಆನಂತರ ನುಡಿದ ‘ಕಾಯಕವೇ ಕೈಲಾಸ’ ಎಂಬ ಮಾತಿನ ಅರ್ಥವೇನು? ಇಡೀ ಲೇಖನದಲ್ಲಿ, ಲೇಖಕರ ಪ್ರತಿಪಾದನೆಗೆ, ತಾತ್ವಿಕ ಮತ್ತು ಕ್ರಿಯಾತ್ಮಕ ಉತ್ತರದಂತಿರುವ ‘ಕಾಯಕ’ ಕ್ರಿಯಾತತ್ವದ ಬಗ್ಗೆ ಪ್ರಸ್ತಾಪಿಸದೇ ಇದ್ದದ್ದು ನಿಜಕ್ಕೂ ಅಚ್ಚರಿಯೆನಿಸುತ್ತದೆ! ಹಿಂದನರಿತೂ ಚರಿತ್ರೆಯ ಇಂಥ ಪಾಠಗಳನ್ನು ವರ್ತಮಾನಕ್ಕೆ ತೋರಿಸದೇ ಇರುವುದು ಸರಿಯೇ?

ADVERTISEMENT

–ಡಾ. ಬಸವರಾಜ ಸಾದರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.