ADVERTISEMENT

ಸರ್ಕಾರದ ಯೋಜನೆಗಳು ಮತ್ತು ವಾಸ್ತವ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 19:31 IST
Last Updated 28 ಮಾರ್ಚ್ 2021, 19:31 IST

ನೀರು, ಭೂಮಿ, ಗಾಳಿಯ ಶುಚಿತ್ವ ಕಾಪಾಡಲು ಸರ್ಕಾರ ಅನೇಕ ಯೋಜನೆಗಳನ್ನು ಹಾಕಿಕೊಳ್ಳುತ್ತದೆ. ಆದರೆ ಅವು ಎಷ್ಟರಮಟ್ಟಿಗೆ ಸಫಲವಾಗುತ್ತವೆ ಎಂಬುದು ಎಷ್ಟೋ ಬಾರಿ ತಿಳಿಯುವುದೇ ಇಲ್ಲ. ನಾನು ಚಿಕ್ಕವಳಿದ್ದಾಗ ಅಂದರೆ 1995–2000ದ ಅವಧಿಯಲ್ಲಿ ಯೋಜನೆಯೊಂದು ಬಂದಿತ್ತು. ಅದರಂತೆ ರೈತರು ತಮ್ಮ ಹೊಲದಲ್ಲಿ ಚಿಕ್ಕದಾದ ಬಾವಿಯನ್ನು ತೊಡಬೇಕು. ಅದಕ್ಕೆ ಪ್ರತಿಯಾಗಿ ಸರ್ಕಾರದಿಂದ ಅಕ್ಕಿಯನ್ನು ವಿತರಿಸಲಾಗುತ್ತಿತ್ತು. ಪ್ರತಿಯೊಬ್ಬ ರೈತರೂ ತಮ್ಮ ತಮ್ಮ ಹೊಲದಲ್ಲಿ ಗುಂಡಿಗಳನ್ನು ತೆಗೆದು ಅಕ್ಕಿಯನ್ನು ಪಡೆದುಕೊಂಡರು. ಇದಾದ ಮೂರ್ನಾಲ್ಕು ವರ್ಷಗಳ ನಂತರ ಆ ಗುಂಡಿಗಳು ಕಾಣೆಯಾದವು. ಇಂತಹದೇ ಇನ್ನೊಂದು ಸಂದರ್ಭ ನೆನಪಿಗೆ ಬರುತ್ತದೆ. ನೆದರ್ಲೆಂಡ್ಸ್‌ ಯೋಜನೆಯಡಿ ಊರಿನ ಪ್ರತಿಯೊಂದು ಓಣಿಯಲ್ಲಿ ಚಿಕ್ಕ ಚಿಕ್ಕ ನೀರಿನ ಟ್ಯಾಂಕರ್, ಅದರ ಪಕ್ಕದಲ್ಲಿ ಒಂದು ನೀರಿನ ತೊಟ್ಟಿ ನಿರ್ಮಾಣವಾಗಿದ್ದವು. ಅವೆಲ್ಲ ಈಗ ಎಲ್ಲಿ ಮಾಯವಾದವು? ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಸಸಿ ನೆಟ್ಟು ಮೂರು ವರ್ಷ ಪೋಷಿಸಿರುವ ರೈತರಿಗೆ ಪ್ರತೀ ಸಸಿಗೆ ₹ 125 ಪ್ರೋತ್ಸಾಹಧನವನ್ನು ಅರಣ್ಯ ಇಲಾಖೆ ನೀಡುತ್ತದೆ. ಮೂರು ವರ್ಷದ ನಂತರ ಆ ಗಿಡವು ಇರದಿದ್ದರೆ, ಯೋಜನೆಯ ಉದ್ದೇಶ ಸಫಲವಾಗುವುದೇ?

ಸುಮಾರು ಹದಿನೈದು ವರ್ಷಗಳ ಹಿಂದೆ, ಮಲೆನಾಡಿನ ಸೆರಗಿಗೆ ಅಂಟಿಕೊಂಡಿರುವ ಹಾನಗಲ್‌ನಿಂದ ಹಾವೇರಿಗೆ ಬರುವ ರಸ್ತೆಯ ಮಾರ್ಗದಲ್ಲಿ ಸಾವಿರಾರು ಮರಗಿಡಗಳು ಇದ್ದವು. ನಿಜಕ್ಕೂ ಈ ರಸ್ತೆಯಲ್ಲಿ ಬರುತ್ತಿದ್ದರೆ ಹಸಿರು ಸುರಂಗಮಾರ್ಗದಲ್ಲಿ ಬರುತ್ತಿದ್ದೇವೆ ಎಂಬಂತೆ ಭಾಸವಾಗುತ್ತಿತ್ತು. ರಸ್ತೆಯ ಎರಡೂ ಬದಿಯ ಗಿಡಗಳು ಮೇಲೆ ಕೂಡಿ ಚಪ್ಪರದಂತಿದ್ದವು. ಆದರೆ ರಸ್ತೆಯ ಅಗಲೀಕರಣದಲ್ಲಿ ಎಲ್ಲಾ ಗಿಡಗಳು ಮಾಯವಾದವು. ಇಂದು ಆ ರಸ್ತೆಯಲ್ಲಿ ದಣಿವಾರಿಸಿಕೊಳ್ಳಲು ಸಹ ಒಂದು ಮರವಿಲ್ಲ. ರಸ್ತೆಗಳ ಅಗಲೀಕರಣ ಇಂದಿನ ಬದುಕಿಗೆ ಅವಶ್ಯ. ಆದರೆ ಅದಕ್ಕಾಗಿ ಅಲ್ಲಿನ ಗಿಡಗಳನ್ನು ನಾಶ ಮಾಡುವ ಬದಲು ಅವುಗಳನ್ನು ಪುನರ್‌ಸ್ಥಾಪಿಸುವಂತೆ ಆಗಬೇಕು. ಯಾವುದೇ ಪಕ್ಷದ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೂ ಅದು ತನ್ನ ಪ್ರತಿಷ್ಠೆಗಾಗಿ ಹೊಸ ಯೋಜನೆಗಳನ್ನು ಜಾರಿಗೆ ತರುವ ಬದಲು ಹಳೇ ಯೋಜನೆಗಳನ್ನು ಪುಷ್ಟೀಕರಿಸುವಂತೆ ಆಗಬೇಕು.

→ಶೈಲಾ ಕೊಪ್ಪದ ಉಪ್ಪುನಸಿ,ಹಾನಗಲ್

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.