ADVERTISEMENT

ವಾಚಕರ ವಾಣಿ: ಒಬ್ಬ ಮಹಾರಾಜನ ಬದಲಿಗೆ ನೂರಾರು ಮಹಾರಾಜರು?!

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 23 ಫೆಬ್ರುವರಿ 2022, 19:31 IST
Last Updated 23 ಫೆಬ್ರುವರಿ 2022, 19:31 IST

ಒಬ್ಬ ಮಹಾರಾಜನ ಬದಲಿಗೆ ನೂರಾರು ಮಹಾರಾಜರು?!

ಮುಖ್ಯಮಂತ್ರಿ, ಸಚಿವರು ಮತ್ತು ಶಾಸಕರ ವೇತನವನ್ನು ಹೆಚ್ಚಿಸುವ ಎರಡು ಮಸೂದೆಗಳು ಯಾವುದೇ ಚರ್ಚೆ ಇಲ್ಲದೆವಿಧಾನಮಂಡಲದಲ್ಲಿ ಅಂಗೀಕಾರಗೊಂಡಿವೆ. ವೇತನದಲ್ಲಿ ಶೇ 50ರಿಂದ ಶೇ 60ರಷ್ಟು ಏರಿಕೆ ಆಗಿದೆ. ರಾಜ್ಯ ಸರ್ಕಾರವು ಆರ್ಥಿಕ ಸಂಕಷ್ಟದಲ್ಲಿರುವಾಗ ಈ ಏರಿಕೆ ಅನಿವಾರ್ಯವಾಗಿತ್ತೇ? ‘ನಾವು ಒಬ್ಬ ಮಹಾರಾಜನನ್ನು ತೆಗೆದು 300 ಮಹಾರಾಜರನ್ನು ಹುಟ್ಟುಹಾಕಿದ್ದೇವೆ’ ಎಂದು ಒಮ್ಮೆ ಡಾ. ಶಿವರಾಮ ಕಾರಂತ ಹೇಳಿದ್ದರು. ಇದು ಅಕ್ಷರಶಃ ನಿಜ. ಇದು ಕೇವಲ ಹೆಚ್ಚು ವೆಚ್ಚ ಮತ್ತು ಹಣದ ಸಮಸ್ಯೆಯಲ್ಲ, ನೈತಿಕತೆ ಮತ್ತು ಮೌಲ್ಯದ ಪ್ರಶ್ನೆಯೂ ಹೌದು.

–ಕೆ.ವೆಂಕಟರಾಜು, ಚಾಮರಾಜನಗರ

ADVERTISEMENT

ಸಂಕುಚಿತ ರಾಜಕೀಯ ಕೊನೆಗೊಳ್ಳಲಿ

ವರ್ತಮಾನದ ಅಲ್ಪಸಂಖ್ಯಾತರ ಸಮಸ್ಯೆಗಳು ಬರೀ ಧಾರ್ಮಿಕ ಸ್ವರೂಪದವು ಎನ್ನುವ ಕೆಲವು ಮಾಧ್ಯಮಗಳ ಪ್ರಾಪಗಾಂಡ ಅಲ್ಪಸಂಖ್ಯಾತ ಗುಂಪುಗಳ ಒಳಗಿನ ಸಣ್ಣ ಮೂಲಭೂತವಾದಿ ಗುಂಪಿನ ಧೋರಣೆಯನ್ನಷ್ಟೇ ಪ್ರತಿನಿಧಿಸುತ್ತದೆ! ಈ ಧೋರಣೆಯನ್ನೇ ‘ಅಲ್ಪಸಂಖ್ಯಾತರ ಹೋರಾಟ’ ಎಂಬ ಅರ್ಥದಲ್ಲಿ ಬಹುಸಂಖ್ಯಾತರ ಒಳಗಿರುವ ಧಾರ್ಮಿಕ ಗುಂಪುಗಳ ಎದುರು ಮಂಡಿಸಲ್ಪಡುತ್ತಿರುವುದರಿಂದ ಸಮುದಾಯಗಳ ನಡುವೆ ಕೋಮು ಸಂಘರ್ಷ ಏರ್ಪಡುತ್ತಿದೆ!

ವಾಸ್ತವದಲ್ಲಿ ಇದು ಹಿಂದೂ-ಮುಸ್ಲಿಂ ಸಂಘರ್ಷವಲ್ಲ, ಬದಲಾಗಿ ಮುಸ್ಲಿಂ ಮೂಲಭೂತವಾದಿ ಗುಂಪು ಮತ್ತು ಹಿಂದೂ ಮೂಲಭೂತವಾದಿ ಗುಂಪಿನ ನಡುವೆ ಸಮುದಾಯಗಳ ಮೇಲಿನ ‘ಮತಬ್ಯಾಂಕ್ ಅಧಿಕಾರ’ಕ್ಕಾಗಿ ನಡೆದಿರುವ ಸಂಘರ್ಷ. ಇದನ್ನು ಹಿಂದೂ-ಮುಸ್ಲಿಂ ಸಂಘರ್ಷದಂತೆ ವ್ಯವಸ್ಥಿತವಾಗಿ ಮಂಡಿಸಲಾಗುತ್ತಿದೆ. ಇದಕ್ಕೆ ಇರುವ ಪರಿಹಾರ ವರ್ತಮಾನದ ಮುಸ್ಲಿಂ ಸಮುದಾಯಗಳ ಸಮಸ್ಯೆಗಳನ್ನು ಸಮಾಜೋ-ಆರ್ಥಿಕ ನೆಲೆಯಿಂದ ವಿಶ್ಲೇಷಿಸಿ ಆ ಸಮುದಾಯಗಳ ನೈಜ ಸವಾಲುಗಳಾದ ಉದ್ಯೋಗದ ಕೊರತೆ, ಶಿಕ್ಷಣದಲ್ಲಿ ಹಿಂದುಳಿದಿರುವಿಕೆ, ಆರ್ಥಿಕ ಮತ್ತು ಸ್ವಾವಲಂಬಿ ಬದುಕು ಇಲ್ಲದಿರುವ ಸ್ಥಿತಿ ಇತ್ಯಾದಿಗಳನ್ನು ಪ್ರಭುತ್ವದ ಮುಂದೆ ಮಂಡಿಸಬೇಕು. ಆದರೆ ಈ ಉತ್ಸಾಹ ಧಾರ್ಮಿಕ ಮೂಲಭೂತವಾದಕ್ಕಿಲ್ಲ. ಬಹುಸಂಖ್ಯಾತ ಧಾರ್ಮಿಕ ಮೂಲಭೂತವಾದಿ ಗುಂಪಿಗೂ ತಮ್ಮ ಸಮುದಾಯದ ಯುವಕರ ಕುರಿತು ಈ ಉದ್ದೇಶವಿಲ್ಲ. ಏಕೆಂದರೆ ಆವುಗಳ ಉದ್ದೇಶ ಸಮುದಾಯಗಳನ್ನು
ಧಾರ್ಮಿಕಗೊಳಿಸುವುದಷ್ಟೇ ವಿನಾ ಈ ಗುಂಪುಗಳನ್ನು ಸಮಾಜೋ- ಆರ್ಥಿಕವಾಗಿ ಸಬಲಗೊಳಿಸುವುದಲ್ಲ.

ನಮ್ಮ ನಡುವಿನ ಸಮುದಾಯಗಳ ಸಮಾಜೋ-ಆರ್ಥಿಕ ಸಬಲೀಕರಣದ ಉದ್ದೇಶ ಈ ಗುಂಪಿಗೆ ಇದ್ದಿದ್ದರೆ ವರ್ತಮಾನದ ಹೋರಾಟದ ದಿಕ್ಕು ಕೇವಲ ಧಾರ್ಮಿಕ ಅಸ್ಮಿತೆಯ ಸುತ್ತ ಸುತ್ತುತ್ತಿರಲಿಲ್ಲ. ಈ ಕುರಿತ ಸ್ಪಷ್ಟತೆ ಸ್ವತಃ ಧಾರ್ಮಿಕ ನಾಯಕರು ಮತ್ತು ನಮ್ಮನ್ನು ಆಳುವ ಪ್ರಭುತ್ವದ ಆಡಳಿತಕ್ಕೆ ಇರಬೇಕಿದೆ. ಅಲ್ಪಸಂಖ್ಯಾತರ ಸವಾಲುಗಳನ್ನು ಧಾರ್ಮಿಕಗೊಳಿಸಿ ಆ ಸಮುದಾಯಗಳನ್ನು ಬಹುಸಂಖ್ಯಾತರ ಎದುರು ವಿಚಿತ್ರವಾಗಿ ಮಂಡಿಸುವ ‘ಸಂಕುಚಿತ ರಾಜಕೀಯ’ ಕೊನೆಗೊಳ್ಳಬೇಕಿದೆ. ಏಕೆಂದರೆ ಶಿಕ್ಷಣ, ಉದ್ಯೋಗ, ಆರ್ಥಿಕ ಸ್ವಾವಲಂಬನೆ ಇಲ್ಲದೇ ಹುಟ್ಟುವ ಬಡತನ, ಹಸಿವಿಗೆ ಧರ್ಮದ ಹಂಗಿಲ್ಲ.

–ಕಿರಣ್ ಎಂ. ಗಾಜನೂರು, ಕಲಬುರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.