ADVERTISEMENT

ಕೋವಿಡ್: ಎಲ್ಲ ಸಮಸ್ಯೆಗಳಿಗೆ ನೇರ ಹೊಣೆಯೇ?

​ಪ್ರಜಾವಾಣಿ ವಾರ್ತೆ
Published 30 ಮೇ 2022, 19:31 IST
Last Updated 30 ಮೇ 2022, 19:31 IST

ಕೋವಿಡ್‍ನಿಂದಾಗಿ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ತಗ್ಗಿದೆ, ಅಶಿಸ್ತು ಮತ್ತು ಆಕ್ರಮಣಕಾರಿ ಪ್ರವೃತ್ತಿ ಹೆಚ್ಚಾಗಿದೆ ಹಾಗೂ ಕೋವಿಡ್ ನಂತರ ಮಕ್ಕಳ ನಾಪತ್ತೆ ಪ್ರಕರಣಗಳು ಹೆಚ್ಚಿವೆ ಎಂದು ವರದಿಯಾಗಿದೆ (ಪ್ರ.ವಾ., ಮೇ 29). ಬಹಳ ಮಂದಿ ತಿಳಿದಿರುವಂತೆ ಮಕ್ಕಳ ಈ ಸಮಸ್ಯೆಗಳಿಗೆ ನೇರ ಹೊಣೆ ಕೋವಿಡ್ ಅಲ್ಲ, ಈ ಹೊಣೆಯನ್ನು ಮೊಬೈಲ್ ಹೊರಬೇಕಾಗುತ್ತದೆ. ಯಾವ ಮೊಬೈಲ್‍ಗಳು ಮಕ್ಕಳ ಕೈಗೆ ಸಿಗದಂತೆ ಮನೆಯಲ್ಲಿ ಪೋಷಕರು ಹಾಗೂ ಶಾಲೆ- ಕಾಲೇಜುಗಳಲ್ಲಿ ಶಿಕ್ಷಕರು ಎಚ್ಚರ ವಹಿಸಿದ್ದರೋ ಅದೇ ಮೊಬೈಲನ್ನು ಕೋವಿಡ್‍ನಿಂದ ಆನ್‍ಲೈನ್ ತರಗತಿಗಳು ಪ್ರಾರಂಭವಾದ ಕಾರಣದಿಂದ ಮಕ್ಕಳ ಕೈಗೆ ಕೊಡುವುದು ಅನಿವಾರ್ಯವಾಯಿತು. ಇದರಿಂದ ಮಕ್ಕಳು ಮೊಬೈಲ್‍ಗಳನ್ನು ನಿರಾತಂಕವಾಗಿ ಬಳಸುವ ಅವಕಾಶ ಪಡೆದರು, ಜೊತೆಗೆ ಅವುಗಳನ್ನು ಬಳಸಲು ಬಹಳಷ್ಟು ಸಮಯವೂ ಅವರಿಗೆ ದೊರೆಯಿತು.

ಅತ್ಯಂತ ಅದ್ಭುತ ವೈಜ್ಞಾನಿಕ ಆವಿಷ್ಕಾರವಾದ ಮೊಬೈಲ್‍ನ ಸದ್ಬಳಕೆಯಿಂದ ಜ್ಞಾನ ವೃದ್ಧಿಸಿಕೊಳ್ಳುವ ಎಲ್ಲ ಅವಕಾಶಗಳು ಇದ್ದಾಗ್ಯೂ ಅದನ್ನು ಕೆಲ ಮಕ್ಕಳು, ಯುವಕ–ಯುವತಿಯರು ದುರ್ಬಳಕೆ ಮಾಡಿಕೊಂಡಿರುವುದೇ ಹೆಚ್ಚು. ಮೊಬೈಲ್ ಬಳಕೆ ಮಕ್ಕಳನ್ನೂ ಒಳಗೊಂಡಂತೆ ಎಲ್ಲರಿಗೂ ಒಂದು ಚಟವಾಗಿ ಪರಿಣಮಿಸಿರುವುದರಿಂದ ಅದರಿಂದ ಯಾರಿಗೂ ಬಿಡುಗಡೆಯಂತೂ ಇಲ್ಲ. ಹಾಗಾಗಿ ದುರ್ಬಳಕೆಯಿಂದ ‘ಶಾಪ’ವಾಗಿರುವ ಮೊಬೈಲನ್ನು ಸದ್ಬಳಕೆಯಿಂದ ‘ವರ’ವಾಗಿ ಪರಿವರ್ತಿಸಿಕೊಳ್ಳುವುದೊಂದೇ ಈಗ ಉಳಿದಿರುವ ದಾರಿ.

- ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.