ADVERTISEMENT

ವಾಚಕರ ವಾಣಿ | ಜಾತಿ ಹೆಸರಿನ ಗ್ರಾಮ ಬೇಡವೇಕೆ?

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 21:09 IST
Last Updated 18 ಮಾರ್ಚ್ 2022, 21:09 IST

‘ಕಂದಾಯ ಗ್ರಾಮಗಳಿಗೆ ಜಾತಿಯ ಹೆಸರುಗಳನ್ನು ಇಡುವುದು ಸರಿಯಲ್ಲ’ ಎಂಬ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರ ಅಭಿಪ್ರಾಯಕ್ಕೆ ಸಚಿವ ಅಶೋಕ ಅವರು ಯಾವುದೇ ಚರ್ಚೆಯಿಲ್ಲದೆ ಅಂಥ ಹೆಸರುಗಳನ್ನು ಬದಲಿಸುವ ಬಗ್ಗೆ ಭರವಸೆ ನೀಡಿದ್ದಾರೆ (ಪ್ರ.ವಾ., ಮಾರ್ಚ್‌ 15). ಇದು ಒಪ್ಪುವ ವಿಚಾರವೇ? ಉದ್ದೇಶಿತ ಹೊಸ ಹೆಸರುಗಳಾದರೂ ಯಾವ ರೀತಿಯಾಗಿ ಇರುತ್ತವೆ ಎಂಬ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಬೇಕಲ್ಲವೇ?

ಗ್ರಾಮಗಳು ಹೋಗಲಿ, ನಗರಗಳಲ್ಲೂ ಜಾತಿಯ ಹೆಸರಿನಲ್ಲಿ ಬೀದಿಗಳು, ರಸ್ತೆಗಳು, ಬಡಾವಣೆಗಳು, ಹೋಟೆಲು ಗಳು, ಬೇಕರಿಗಳು, ಶಿಕ್ಷಣ ಸಂಸ್ಥೆಗಳು, ಮಠ ಮಂದಿರಗಳು, ಕಲ್ಯಾಣ ಮಂಟಪಗಳು ಹಾಗೂ ಸ್ಮಶಾನಗಳಿವೆ. ಹೀಗೆ ತಮ್ಮ ಜಾತಿಯ ಹೆಸರುಗಳನ್ನು ಇಡುವುದು ಸರಿಯೆನಿಸುವುದಾದರೆ ಉಳಿದವರಿಗೆ ತಮ್ಮ ಜಾತಿಯ ಹೆಸರಿನ ಗ್ರಾಮಗಳು ಬೇಡವೇ? ತಮ್ಮ ಜಾತಿಯ ಹೆಸರಿನಲ್ಲಿ ಒಂದು ಗ್ರಾಮವಿರುವುದು ಹೆಮ್ಮೆಯೆನಿಸುವುದು ಬೇಡವೇ? ಜಾತಿಗಳಮಧ್ಯೆ ಮೇಲುಕೀಳು ಎಂಬ ಮನೋಭಾವ ಬೆಳೆಸಿಕೊಳ್ಳದೆ ಎಲ್ಲ ಜಾತಿಗಳೂ ಸಮಾನ ಎಂದು ತಿಳಿಯಲು ಸಾಧ್ಯವಾದರೆ ಜಾತಿಯ ಹೆಸರು ಇಡುವುದರಲ್ಲಿ ತಪ್ಪೇನಿದೆ? ಅಷ್ಟಕ್ಕೂ ಇಂದಿನ ವೈಜ್ಞಾನಿಕ ಕಾಲದಲ್ಲಿ ಜಾತಿಗಳೇ ಬೇಡ ಎನ್ನುವ ನಿರ್ಧಾರಕ್ಕೆ ಬರುವ ವಾತಾವರಣ ಅನಿವಾರ್ಯವಾಗುವುದಿಲ್ಲ ಏಕೆ? ನಾವು ಯಾವ ಜಾತಿಯಲ್ಲಿ ಹುಟ್ಟುತ್ತೇವೆ ಎಂದು ನಿರ್ಧರಿಸಲು ಸಾಧ್ಯವಿಲ್ಲ. ಬದಲಾಗಿ ಯಾವ ಜಾತಿಯಲ್ಲಿ ಹುಟ್ಟಿದ್ದೇವೆಯೋ ಅದರ ಬಗ್ಗೆ ಗೌರವ, ಅಭಿಮಾನ ಇರುವುದು ಸಹಜ ನಡೆಯಾಗಬೇಕು. ಗ್ರಾಮಗಳ ಹೆಸರು ಒಂದು ಸಂಸ್ಕೃತಿ, ಪರಂಪರೆಗೆ ಸೇರಿದ್ದು. ಇಂಥ ಮಹತ್ವದ ವಿಚಾರಗಳ ಬಗ್ಗೆ ನಾಡಿನ ಜಾನಪದ ಮತ್ತು ಇತಿಹಾಸ ತಜ್ಞರು ಅಭಿಪ್ರಾಯ ತಿಳಿಸಿದರೆ ಸಾಮಾನ್ಯ ಜನರಿಗೆ ಉತ್ತಮ ಮಾಹಿತಿಯಾಗುತ್ತದೆ.

-ಡಾ. ಜಿ.ಬೈರೇಗೌಡ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.