ADVERTISEMENT

ವಾಚಕರ ವಾಣಿ | ಸಚಿವರು ಮಾರುವೇಷದಲ್ಲಿ ಸುಳಿದಾಡಲಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2022, 18:45 IST
Last Updated 15 ಮಾರ್ಚ್ 2022, 18:45 IST

ರಾಜ್ಯ ಸಾರಿಗೆ ಸಚಿವ ಶ್ರೀರಾಮುಲು ಅವರು ‘ನಮ್ಮ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲ. ಈಗ ಅದಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕಲಾಗಿದೆ’ ಎಂದು ಹೇಳಿದ್ದಾರೆ (ಪ್ರ.ವಾ., ಮಾರ್ಚ್‌ 14). ಇದು ನೂರಕ್ಕೆ ಸಾವಿರದಷ್ಟು ಪಾಲು ಸುಳ್ಳು. ಸಚಿವರು ತಮ್ಮ ಇಲಾಖೆಯ ಯಾರೋ ಅಧಿಕಾರಿ ನೀಡಿದ ಮಾಹಿತಿಯೇ ನಿಜವೆಂದು ನಂಬಿ ಪ್ರತಿಕ್ರಿಯಿಸಿದ್ದಾರೆ. ಆರ್‌ಟಿಒ ಕಚೇರಿಯ ಬಗೆಗಿನ ವಿಶೇಷ ವರದಿಯು (ಪ್ರ.ವಾ., ಮಾರ್ಚ್‌ 14) ಸಂಪೂರ್ಣ ವಾಸ್ತವ ಹಾಗೂ ವಸ್ತುನಿಷ್ಠವಾಗಿದೆ.

ಆರ್‌ಟಿಒ ಕಚೇರಿಯಲ್ಲಿ ದಲ್ಲಾಳಿಗಳಿಲ್ಲದೆ ಯಾವುದೇ ಕೆಲಸವಾದರೆ ಅದನ್ನು ಪವಾಡವೆನ್ನಬಹುದು. ಇಲ್ಲಿನ ಬ್ರೋಕರ್‌ಗಳು ಎಷ್ಟು ಪ್ರಭಾವಶಾಲಿ ಆಗಿರುತ್ತಾರೆಂದರೆ, ಕಾನೂನಿಗೆ ಅನುಗುಣವಾಗಿ ಅಲ್ಪಸ್ವಲ್ಪ ಕೆಲಸ ಮಾಡಲೆತ್ನಿಸುವ ಆರ್‌ಟಿಒಗಳನ್ನು ಅಲ್ಲಿಂದ ಎತ್ತಂಗಡಿ ಮಾಡಿಸಿ ತಮಗೆ ಬೇಕಾದವರನ್ನು ಆ ಜಾಗಕ್ಕೆ ತರುತ್ತಾರೆ. ಈ ಕಚೇರಿಯ ಮೇಲೆ ಯಾವಾಗಲೂ ಯಾವುದೇ ದಾಳಿಗಳು ನಡೆಯುವುದೇ ಇಲ್ಲ. ಏಕೆಂದರೆ ಇವರ ‘ಸಮಪಾಲು’ ಸಿದ್ಧಾಂತ ಕರಾರುವಾಕ್ಕಾಗಿರುತ್ತದೆ. ಪಾಲುದಾರಿಕೆಯಲ್ಲಿ ಯಾವುದೇ ತಾರತಮ್ಯವೂ ಆಗುವುದಿಲ್ಲ.

ಹಾಗೆಯೇ ಈ ಕಚೇರಿಗಳ ಅಧಿಕಾರಿಗಳು ಮತ್ತು ನೌಕರರು ಜನರ ಹಣವನ್ನು ನೇರವಾಗಿ ಮುಟ್ಟುವುದೇ ಇಲ್ಲ. ಅದೇನಿದ್ದರೂ ದಲ್ಲಾಳಿಗಳ ಮೂಲಕ ಸಂದಾಯವಾಗುತ್ತದೆ. ಕಚೇರಿಯ ಅವಧಿ ಮುಗಿದ ನಂತರ ಅವರವರ ಯೋಗ್ಯತಾನುಸಾರ ಲಂಚದ ಹಣ ನಿರ್ವಂಚನೆಯಿಂದ ಬಟವಾಡೆಯಾಗುತ್ತದೆ. ಇದೆಲ್ಲವನ್ನೂ ಕಣ್ಣಾರೆ ಕಾಣಲು ಶ್ರೀರಾಮುಲು ಅವರು ಒಮ್ಮೆಯಾದರೂ ಹಿರಿಯ ಅಧಿಕಾರಿಗಳಿಗೆ ಗೊತ್ತಿಲ್ಲದಂತೆ ಮಾರುವೇಷದಲ್ಲಿ ನಾಲ್ಕಾರು ಆರ್‌ಟಿಒ ಕಚೇರಿಗಳ ಸುತ್ತಮುತ್ತ ಸುಳಿದಾಡಬೇಕು. ಆಗ ಅವರ ‘ಪ್ರಾಮಾಣಿಕ ಇಲಾಖೆ’ಯ ವಿರಾಟ್ ಸ್ವರೂಪದ ದರ್ಶನವಾಗುತ್ತದೆ. ಅಲ್ಲದೆ ಸರ್ಕಾರ ಜಾರಿಗೆ ತಂದಿರುವ ಮತ್ತು ತರಲಿರುವ ಆನ್‌ಲೈನ್ ನಿಯಮಗಳು ಹೇಗೆ ನೌಕರರು ಮತ್ತು ದಲ್ಲಾಳಿಗಳ ಕಾಲಡಿಯಲ್ಲಿ ಉಸಿರುಕಟ್ಟುತ್ತಿವೆ ಎಂಬುದು ಸ್ವಯಂವೇದ್ಯವಾಗುತ್ತದೆ.
ಮೋದೂರು ಮಹೇಶಾರಾಧ್ಯ,ಹುಣಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.