ADVERTISEMENT

ಲಕ್ಷದ್ವೀಪದ ವ್ಯಾಜ್ಯ: ಅಪಾಯಕಾರಿ ನಿಲುವು

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 21 ಜೂನ್ 2021, 19:45 IST
Last Updated 21 ಜೂನ್ 2021, 19:45 IST

ಒಂದು ತಿಂಗಳಿನಿಂದ ಲಕ್ಷದ್ವೀಪದಲ್ಲಿ ನಡೆಯುತ್ತಿರುವ ಆಡಳಿತಾತ್ಮಕ ಬದಲಾವಣೆ ಅತ್ಯಂತ ಸೂಕ್ಷ್ಮ ವಿಚಾರ ವಾಗಿದೆ. ಪಾರಂಪರಿಕವಾಗಿ ಲಕ್ಷದ್ವೀಪವು ಕೇರಳ ರಾಜ್ಯದ ಜೊತೆಗೆ ಬೆಸೆದುಕೊಂಡಿದೆ. ಲಕ್ಷದ್ವೀಪಕ್ಕೆ ಸಂಬಂಧಿಸಿದಂತೆ ಉಂಟಾಗುವ ಸಕಲ ವ್ಯಾಜ್ಯಗಳು ಕೇರಳ ಹೈಕೋರ್ಟ್‌ನ ಭೌಗೋಳಿಕ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತವೆ. ಹೊಸದಾಗಿ ನೇಮಕಗೊಂಡಿರುವ ಲಕ್ಷದ್ವೀಪದ ಲೆಫ್ಟಿನೆಂಟ್ ಗವರ್ನರ್ ತರಾತುರಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಲು ಮುಂದಾಗಿರುವುದು ಅಲ್ಲಿನ ನಾಗರಿಕರನ್ನು ಕಂಗೆಡಿಸಿದೆ. ನಾಗರಿಕರು ಆಡಳಿತ ವ್ಯವಸ್ಥೆಯ ನೀತಿ ನಿಲುವುಗಳನ್ನು ಹತ್ತಿರದ ಕೇರಳ ಹೈಕೋರ್ಟ್‌ನಲ್ಲಿ ಪ್ರಶ್ನಿಸುತ್ತಾರೆ ಎಂಬ ಕಾರಣಕ್ಕೆ ಲಕ್ಷದ್ವೀಪವನ್ನು ಕರ್ನಾಟಕ ಹೈಕೋರ್ಟ್ ಕ್ಷೇತ್ರ ವ್ಯಾಪ್ತಿಯಲ್ಲಿ ತರಲು ಅಲ್ಲಿನ ಆಡಳಿತ ವ್ಯವಸ್ಥೆ ಚಿಂತನೆ ನಡೆಸಿರುವುದು ಅಪಾಯಕಾರಿ ನಿಲುವಾಗಿದೆ.

ಬೆಂಗಳೂರು ಕೇಂದ್ರಿತ ನ್ಯಾಯ ವಿತರಣಾ ವ್ಯವಸ್ಥೆ, ಭೌಗೋಳಿಕ ಅಂತರ, ಪ್ರಯಾಣದ ಅವಧಿ, ತಂಗಲು ಉಂಟಾಗುವ ವಿಪರೀತ ಖರ್ಚು ವೆಚ್ಚ ಇತ್ಯಾದಿ ಕಾರಣಗಳಿಂದ ರಾಜ್ಯದ ಹೈಕೋರ್ಟ್ ಪೀಠಗಳನ್ನು ಧಾರವಾಡ ಮತ್ತು ಕಲಬುರ್ಗಿಯಲ್ಲಿ ಸ್ಥಾಪಿಸಲಾಯಿತು. ಇಂತಹ ಜನಪರವಾದ ನಿರ್ಧಾರವನ್ನು ಕೈಗೊಳ್ಳಲು ಹತ್ತಾರು ವರ್ಷಗಳ ಕಾಲ ನಿರಂತರ ಹೋರಾಟವನ್ನು ಉತ್ತರ ಕರ್ನಾಟಕ ಭಾಗದವರು ನಡೆಸಿದರು. ಈಗ, ಸಾರ್ವಜನಿಕ ಒಳಿತನ್ನು ಕಡೆಗಣಿಸಿ ಕಪಟ ರಾಜಕೀಯ ನೀತಿಗಾಗಿ ಲಕ್ಷದ್ವೀಪವನ್ನು ಕರ್ನಾಟಕ ಹೈಕೋರ್ಟ್ ಕ್ಷೇತ್ರ ವ್ಯಾಪ್ತಿಯಲ್ಲಿ ತರಲು ಚಿಂತಿಸಿರುವುದು ಅಲ್ಲಿನ ನಾಗರಿಕರಿಗೆ ಎಸಗುವ ಘೋರ ಅನ್ಯಾಯ. ಇದನ್ನು ನಮ್ಮ ರಾಜ್ಯದ ಪ್ರಜ್ಞಾವಂತ ನಾಗರಿಕರು ಅರಿತು ವಿರೋಧಿಸಬೇಕು.

-ಕೆ.ಬಿ.ಕೆ.ಸ್ವಾಮಿ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.