ADVERTISEMENT

ಸರ್ವಸಮ್ಮತ ಹೆಸರಿರಲಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2022, 19:30 IST
Last Updated 25 ಏಪ್ರಿಲ್ 2022, 19:30 IST

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರಿಡುವ ನಿರ್ಧಾರವನ್ನು ಕೈಬಿಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಜೆಪಿ ಮುಖಂಡ ಬಿ.ಎಸ್.ಯಡಿಯೂರಪ್ಪ ಅವರು ಪತ್ರ ಬರೆದಿರುವುದಾಗಿ ವರದಿಯಾಗಿದೆ (ಪ್ರ.ವಾ., ಏ. 25). ಇದಕ್ಕಾಗಿ ಯಡಿಯೂರಪ್ಪ ಅಭಿನಂದನಾರ್ಹರು.

ರಸ್ತೆಗಳು, ಬಸ್ ನಿಲ್ದಾಣಗಳು, ರೈಲ್ವೆ ಮತ್ತು ವಿಮಾನ ನಿಲ್ದಾಣಗಳು, ಹೊಸ ಬಡಾವಣೆಗಳಂತಹ ಸಾರ್ವಜನಿಕ ಸ್ಥಳಗಳಿಗೆ ಹೆಸರಿಡುವಾಗ ಸರ್ಕಾರ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಜಾತಿ, ಧರ್ಮ, ಪಕ್ಷ, ಪಂಗಡ, ಪಂಥ- ಇವೆಲ್ಲವುಗಳ ಆಚೆ ನಿಂತು ಸಮಾಜಮುಖಿಯಾಗಿ ಬದುಕಿದ ಸಾರ್ಥಕ ಜೀವಿಗಳು ಇಂಥ ಸ್ಥಳಗಳ ಹೆಸರಿಗೆ ಅತ್ಯಂತ ಸೂಕ್ತರು. ಶಿವಮೊಗ್ಗ ಜಿಲ್ಲೆ ಈ ಬಗೆಯ ಬಹಳಷ್ಟು ಪುಣ್ಯಜೀವಿಗಳಿಗೆ ಜನ್ಮ ನೀಡಿದೆ. ಅಂಥವರ ಹೆಸರನ್ನು ಪಟ್ಟಿ ಮಾಡಿ, ಅದನ್ನು ಸಾರ್ವಜನಿಕ ಅಭಿಪ್ರಾಯಕ್ಕೆ ಬಿಟ್ಟು, ಅದರ ಆಧಾರದ ಮೇಲೆ ಅಂತಿಮ ತೀರ್ಮಾನ ಕೈಗೊಳ್ಳುವುದು ಸೂಕ್ತ.

ಸರ್ಕಾರ, ಪಕ್ಷ, ಮುಖ್ಯಮಂತ್ರಿ ಇವೆಲ್ಲವೂ ತಾತ್ಕಾಲಿಕ ವ್ಯವಸ್ಥೆಗಳು. ಆದರೆ ಸರ್ಕಾರ ಇಡುವ ಹೆಸರು ಶಾಶ್ವತ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಪಂಪನಂಥ ಶ್ರೇಷ್ಠ ಕವಿಗೆ ಆಶ್ರಯ ನೀಡಿದ ಕಾರಣಕ್ಕೆ ಸಾಮಂತ ರಾಜನಾದ ಅರಿಕೇಸರಿ ತಾನೂ ಶ್ರೇಷ್ಠನಾಗಿ ಉಳಿದಂತೆ, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಶಾಶ್ವತ ಹೆಸರು ಇಡುವುದರ ಮೂಲಕ ಈ ತಾತ್ಕಾಲಿಕ ಸರ್ಕಾರವೂ ಶಾಶ್ವತವಾಗಿ ಉಳಿಯುವ ಅವಕಾಶವಿದೆ.

ADVERTISEMENT

ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.