ADVERTISEMENT

ಭಗವದ್ಗೀತೆ: ಲೇಖಕರ ಚಿಂತನೆ ಹೇರುವುದು ಸಲ್ಲ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2022, 5:41 IST
Last Updated 29 ಮಾರ್ಚ್ 2022, 5:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಾಲಾ ಶಿಕ್ಷಣದಲ್ಲಿ ಭಗವದ್ಗೀತೆ ಕುರಿತಾದ ಚರ್ಚೆಯಲ್ಲಿ (ಪ್ರ.ವಾ., ಮಾರ್ಚ್‌ 26) ಡಾ. ಸಿ.ಎನ್.‌ರಾಮಚಂದ್ರನ್‌ ಅವರು ಗೀತೆಯನ್ನು ಪಠ್ಯವನ್ನಾಗಿ ಅಳವಡಿಸುವ ವಿಚಾರದಲ್ಲಿ ಅನೇಕ ಮಿತಿಗಳು ಹಾಗೂ ಅಪಾಯಕಾರಿ ಸಾಧ್ಯತೆಗಳಿವೆ ಎಂದು ವಾದಿಸುತ್ತಾರೆ. ಆದರೆ, ನೀತಿ ಶಿಕ್ಷಣವನ್ನು ಭಗವದ್ಗೀತೆಯ ಮೂಲಕ ಕಲಿಸಲೇಬೇಕು ಎಂದಾದರೆ ಗಾಂಧೀಜಿಯವರ ‘Discourses on the Gita’ ಕೃತಿಯಿಂದ ಆಯ್ದ ಭಾಗಗಳನ್ನು ಸೂಚಿಸುತ್ತಾರೆ. ಆಧುನಿಕ ಜೀವನದ ಸಮಸ್ಯೆಗಳನ್ನು ಎದುರಿಸಲು ಭಗವದ್ಗೀತೆಯ ಉಪದೇಶಗಳು ಹೇಗೆ ಸಹಕಾರಿ ಎಂಬ ಬಗ್ಗೆ ನಾರಾಯಣ ಶೇವರೆ ಅವರು ವಿವರಿಸಿರುವ (ಪ್ರ.ವಾ, ಚರ್ಚೆ, ಮಾರ್ಚ್‌ 26) ಹಲವಾರು ವಿಚಾರಗಳು ರಾಮಚಂದ್ರನ್‌ ಅವರಿಗೆ ತಿಳಿಯದವೇನಲ್ಲ. ಆದರೆ ಅವುಗಳಲ್ಲಿ ಒಂದನ್ನೂ ಪ್ರಸ್ತಾಪಿಸದೆ ಏಕಮುಖ ವಾದವನ್ನು ಮಂಡಿಸಿದ್ದು ಸರಿಯಲ್ಲ. ‘ಆಧುನಿಕ ಓದುಗರಿಗೆ ಭಗವದ್ಗೀತೆ: ಇತಿಹಾಸ, ಭಾಷ್ಯಗಳು ಮತ್ತು ತತ್ವಜ್ಞಾನ’ ಪುಸ್ತಕದಲ್ಲಿ ಡಾ. ಎಂ.ವಿ.ನಾಡಕರ್ಣಿ ಅವರು ಭಗವದ್ಗೀತೆಯನ್ನು ಆಧುನಿಕ ಮೌಲ್ಯಗಳಾದ ಸಮತೆ, ಮಾನವ ಘನತೆ, ಪರಧರ್ಮ ಸಹಿಷ್ಣುತೆ ಇವುಗಳ ದೃಷ್ಟಿಯಿಂದ ಅರ್ಥಪೂರ್ಣವಾಗಿ ವಿವರಿಸಿ, ಗೀತೆಯ ಉಪದೇಶಗಳ ಬಗ್ಗೆ ನಮ್ಮಲ್ಲಿ ಮೂಡುವ ಹಲವಾರು ಸಂಶಯಗಳನ್ನು ನಿವಾರಿಸುತ್ತಾರೆ. ಪು.ಸೂ. ಲಕ್ಷ್ಮೀನಾರಾಯಣ ರಾವ್ (ವಾ.ವಾ., ಮಾರ್ಚ್‌ 28) ಅವರು ಕುರಾನ್‌ ಮತ್ತು ಬೈಬಲ್‌ಗಳಲ್ಲಿ ತಿಳಿಸಿರುವ ‘ಎಲ್ಲರನ್ನೂ ಒಳಗೊಳ್ಳುವ’ ನೀತಿಪಾಠಗಳ ಬಗ್ಗೆ ಪ್ರಸ್ತಾಪಿಸುತ್ತಾರೆ. ಆದರೆ ಈ ಗ್ರಂಥಗಳ ಮಿತಿಗಳು ಹಾಗೂ ಅಪಾಯಕಾರಿ ಸಾಧ್ಯತೆಗಳ ಬಗ್ಗೆ ಇಬ್ಬರೂ (ಸಿ.ಎನ್‌.ರಾಮಚಂದ್ರನ್‌ ಸೇರಿಸಿ) ಚಕಾರವೆತ್ತದೇ ಇರುವುದು, ‘ಚರ್ಚಾಪಟುಗಳ ವಾದಮಂಡನೆ’ಯನ್ನು ಸ್ಮರಣೆಗೆ ತರುತ್ತದೆ.

ಈ ಎಲ್ಲ ಕಾರಣಗಳಿಂದ, ಭಗವದ್ಗೀತೆಯಿಂದ ನೇರವಾಗಿ ಆಯ್ದ ಭಾಗಗಳನ್ನು ಶಾಲಾ ಶಿಕ್ಷಣದಲ್ಲಿ ಅಳವಡಿಸುವುದರಿಂದ ವಿಶ್ವಮಾನ್ಯತೆ ಗಳಿಸಿರುವ ಈ ಗ್ರಂಥದ ಬಗ್ಗೆ ಮಕ್ಕಳ ಗಮನ ಸೆಳೆಯಲು ಮತ್ತು ಅವರು ಮುಂದಿನ ದಿನಗಳಲ್ಲಿ ಸ್ವಯಂಪ್ರೇರಿತರಾಗಿ ಗೀತೆಯ ಬಗ್ಗೆ ವಸ್ತುನಿಷ್ಠ ಅಧ್ಯಯನ ನಡೆಸಲು ಸಹಕಾರಿಯಾಗುತ್ತದೆ. ಗೀತೆಯ ಸಾಲುಗಳು, ಕನ್ನಡದಲ್ಲಿ ಅವುಗಳ ಅರ್ಥ ಮತ್ತು ಭಾವಾರ್ಥಗಳನ್ನು ವಿವರಿಸದೆ, ಭಗವದ್ಗೀತೆಯ ಬಗ್ಗೆ ಗಾಂಧೀಜಿಯ ಅಥವಾ ನಾವು ಇಷ್ಟಪಡುವ ಕೆಲವು ಲೇಖಕರ, ಸತ್ಯಾನ್ವೇಷಕರ ಚಿಂತನೆಗಳನ್ನು ಹೇರುವುದು ಅಸಮರ್ಥನೀಯ.

ಇನ್ನು, ಧರ್ಮಸಮ್ಮತ ಎಂದರೆ ಏನು? ಧರ್ಮ ರಕ್ಷಣೆಗೆ ಹಿಂಸಾ ಮಾರ್ಗವೋ ಅಹಿಂಸಾ ಮಾರ್ಗವೋ? ಮಾನವ ಉನ್ನತ ದೆಶೆಯತ್ತ ಸಾಗಲು ಕರ್ಮ ಮಾರ್ಗವೋ ಜ್ಞಾನ ಮಾರ್ಗವೋ? ಈ ಪ್ರಶ್ನೆಗಳು ಗೀತೆಯನ್ನು ಓದಿದಾಗ ಅರ್ಜುನನನ್ನು ಮೊದಲ್ಗೊಂಡು ಎಲ್ಲರಿಗೂ ಬರುವುದು ಸಹಜ. ಈ ಕಾರಣಕ್ಕಾಗಿ ಭಯವೇಕೆ? ಗಮನಿಸಬೇಕಾದ ಅಂಶವೆಂದರೆ. ಈ ರೀತಿಯ ಪ್ರಶ್ನೆಗಳು ಮತ್ತು ಗೊಂದಲಗಳು ಮಕ್ಕಳೇ ಏಕೆ ಎಲ್ಲರ ಸತ್ಯಾನ್ವೇಷಣೆಯ ಪ್ರೇರಕಗಳಲ್ಲವೇ?

ADVERTISEMENT

- ಡಾ. ಎಂ.ರವೀಂದ್ರ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.