ADVERTISEMENT

ವಾಚಕರ ವಾಣಿ| ಗಡಿಭಾಗದಲ್ಲಿ ಕನ್ನಡವನ್ನು ಗಟ್ಟಿಗೊಳಿಸಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2022, 20:29 IST
Last Updated 29 ನವೆಂಬರ್ 2022, 20:29 IST

ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳಿಂದ ಬೇಜವಾಬ್ದಾರಿ ಹೇಳಿಕೆಗಳು ಬಂದರೆ ಏನಾಗುತ್ತದೆ ಎಂಬುದಕ್ಕೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಮಧ್ಯೆ ಈಗ ಉಂಟಾಗಿರುವ ದ್ವೇಷಮಯ ಪರಿಸ್ಥಿತಿಯೇ ನಿದರ್ಶನ. ಇದರಿಂದ ಎರಡು ರಾಜ್ಯಗಳ ಮಧ್ಯೆ ಸಾರಿಗೆ ಸಂಚಾರ ನಿಂತುಹೋಗಿ ಸಾರ್ವಜನಿಕರಿಗೆ ತುಂಬಾ ಅನನುಕೂಲವಾಗಿದೆ ಹಾಗೂ ಸಾರಿಗೆ ಸಂಸ್ಥೆಗಳಿಗೆ ಅಪಾರ ನಷ್ಟವುಂಟಾಗಿದೆ. ಎರಡೂ ರಾಜ್ಯಗಳ ನಡುವಿನ ಸೌಹಾರ್ದಕ್ಕೆ ಧಕ್ಕೆಯಾಗಿದೆ. ಅಲ್ಲದೆ ಮಹಾರಾಷ್ಟ್ರದ ಗಡಿ ಪಟ್ಟಣ ಇಚಲಕರಂಜಿಯಿಂದ ಕರ್ನಾಟಕದ ಕನ್ನಡ ಪ್ರೌಢಶಾಲೆಗಳಿಗೆ ದಿನಾಲೂ ಬಂದು ಹೋಗುವ ವಿದ್ಯಾರ್ಥಿಗಳಿಗೆ ತೊಂದರೆ ಆಗಿರುವುದಾಗಿ ವರದಿಯಾಗಿದೆ (ಪ್ರ.ವಾ., ನ. 28). ಕರ್ನಾಟಕ ಸರ್ಕಾರವು ಗಡಿ ಭಾಗದ ಮರಾಠಿ ಭಾಷಿಕರಿಗೆ ಕಲ್ಪಿಸಿರುವಷ್ಟು ಶಿಕ್ಷಣ ಸೌಲಭ್ಯವನ್ನು ಮಹಾರಾಷ್ಟ್ರ ತನ್ನ ಗಡಿಭಾಗದ ಕನ್ನಡ ಭಾಷಿಕರಿಗೆ ಕಲ್ಪಿಸದೇ ಇರುವುದಕ್ಕೆ ಇದೊಂದು ಉದಾಹರಣೆ. ಜತ್ತ ಮತ್ತು ಅಕ್ಕಲಕೋಟೆ ತಾಲ್ಲೂಕುಗಳ ಕನ್ನಡ ಶಾಲೆಗಳಿಗೆ ಮಹಾರಾಷ್ಟ್ರ ಸರ್ಕಾರ ಕಲ್ಪಿಸಿರುವ ಸೌಲಭ್ಯ ಕೂಡ ಅಷ್ಟಕ್ಕಷ್ಟೆ.

ಕರ್ನಾಟಕದ ಗಡಿ ಭಾಗದಲ್ಲಿ, ಅದರಲ್ಲೂ ನಿಪ್ಪಾಣಿ, ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕುಗಳ ಗಡಿ ಪ್ರದೇಶ ದಲ್ಲಿ ಕೆಲವು ಕನ್ನಡ ಪ್ರೌಢಶಾಲೆಗಳನ್ನು ತೆರೆಯಬೇಕೆಂಬುದು ಆ ಪ್ರದೇಶದ ಜನರ ಬಹುದಿನಗಳ ಬೇಡಿಕೆ. ಸರ್ಕಾರದ ಹೊಸ ನೀತಿಯ ಪ್ರಕಾರ, ಈ ಗ್ರಾಮಗಳಿಗೆ 8, 9 ಮತ್ತು 10ನೇ ತರಗತಿಗಳನ್ನು ‘ಮುಂದುವರಿದ ಶಿಕ್ಷಣ’ ಎಂದು ಪರಿಗಣಿಸಿ ಪ್ರೌಢ ತರಗತಿಗಳನ್ನು ಶೀಘ್ರದಲ್ಲಿ ಮಂಜೂರು ಮಾಡಬೇಕು. ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿ, ಗಡಿಭಾಗದಲ್ಲಿ ಕನ್ನಡವನ್ನು ಗಟ್ಟಿಗೊಳಿಸುವ ದಿಸೆಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು.

- ವೆಂಕಟೇಶ ಮಾಚಕನೂರ,ಧಾರವಾಡ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.