ADVERTISEMENT

ವಾಚಕರ ವಾಣಿ| ಮತ್ತೆ ಅಟಕಾಯಿಸಿರುವ ಗಣಿಗಾರಿಕೆ ಕುಣಿಕೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 21:17 IST
Last Updated 26 ಜನವರಿ 2023, 21:17 IST

ಗದಗ ಜಿಲ್ಲೆಯ ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಅನುಮತಿ ನೀಡುವ ಸಂಬಂಧ ಸರ್ಕಾರದ ಮಟ್ಟದಲ್ಲಿ ಕಳೆದ ವರ್ಷ ಚಿಂತನೆ ನಡೆದಿತ್ತು. ಪರಿಸರವಾದಿಗಳ ವಿರೋಧದಿಂದ ಅದು ತಣ್ಣಗಾಗಿತ್ತು. ‘ಮತ್ತೆ ಚಿನ್ನದ ಗಣಿಗಾರಿಕೆ ಆತಂಕ’ ಲೇಖನ (ಪ್ರ.ವಾ., ಜ. 26) ಓದಿದ ಮೇಲೆ ಈ ಕುರಿತ ಕಳವಳವು ಮತ್ತೊಮ್ಮೆ ಕಾಡುವಂತೆ ಕಾಣುತ್ತದೆ. ಗಣಿಗಾರಿಕೆಯು ರಾಜ್ಯದ ವರಮಾನದ ಪ್ರಮುಖ ಮೂಲವಲ್ಲ ಎಂಬ ಅಂಶವು ಕರ್ನಾಟಕ ರಾಜ್ಯ ಆರ್ಥಿಕ ಸಮೀಕ್ಷೆ– 2022ರಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಮೇಲಾಗಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ ವಾಯು ಗುಣಮಟ್ಟ ಸೂಚ್ಯಂಕದಲ್ಲಿ ಗದಗ ಜಿಲ್ಲೆಯು ಇಡೀ ದೇಶದಲ್ಲಿ ಎರಡನೆಯ ಸ್ಥಾನದಲ್ಲಿದೆ. ಇದಕ್ಕೆ ಕಪ್ಪತಗುಡ್ಡ ಮತ್ತು ಅಲ್ಲಿನ ಔಷಧಿ ಗುಣವುಳ್ಳ ಸಸ್ಯಗಳ ಕೊಡುಗೆ ಗಣನೀಯ. ಈ ಕಪ್ಪತಗುಡ್ಡವು ಗದಗ ಜಿಲ್ಲೆಯಲ್ಲದೆ ಅದರ
ಸುತ್ತಮುತ್ತಲಿನ ನಾಲ್ಕಾರು ಜಿಲ್ಲೆಗಳ ಪರಿಸರದ ಮೇಲೆ ಪ್ರಭಾವ ಬೀರುತ್ತದೆ. ಇಂತಹ ಪರಿಸರಸ್ನೇಹಿ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಅರಣ್ಯಾಧಿಕಾರಿಗಳು ವರದಿ ನೀಡಿದ್ದರೂ ಸರ್ಕಾರವು ಮತ್ತೆ ಮತ್ತೆ ಒತ್ತಡಕ್ಕೆ ಸಿಲುಕಿ ಮರುಪರಿಶೀಲನೆ ನಡೆಸುವಂತೆ ಅರಣ್ಯಾಧಿಕಾರಿಗಳನ್ನು ಕೇಳುತ್ತಿರುವುದರ ಒಳಾರ್ಥವೇನು? ಗದಗ ಜಿಲ್ಲೆಯು ಮತ್ತೊಂದು ಬಳ್ಳಾರಿಯಾಗಬಾರದು ಎನ್ನುವುದಾದರೆ ಗದಗ ಜಿಲ್ಲೆಯ ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಬಾರದು.

- ಟಿ.ಆರ್. ಚಂದ್ರಶೇಖರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT