ADVERTISEMENT

ಸಿಸಿಬಿ ಗಮನಕ್ಕೆ...!

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 19:30 IST
Last Updated 31 ಆಗಸ್ಟ್ 2018, 19:30 IST

ಮಾದಕ ವಸ್ತು ಸೇವನೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬೆಂಗಳೂರಿನ ಸಿಸಿಬಿ ಪೊಲೀಸರು ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆದಿದ್ದಾರಂತೆ!

‘ಅಂತ್ಯ’ ಸಿನಿಮಾದ ‘ಗಾಂಜಾ ಕಿಕ್’ ಎಂಬ ಹಾಡಿಗೆ ಚಂದನ್ ಶೆಟ್ಟಿ ದನಿಗೂಡಿಸಿದ್ದು, ಈ ಹಾಡು ಮಾದಕ ದ್ರವ್ಯಗಳ ಸೇವನೆಯನ್ನು ಪ್ರಚೋದಿಸುವ ಸಾಧ್ಯತೆ ಇದೆ ಎಂಬುದನ್ನು ಪರಿಗಣಿಸಿ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ. ಬೆಂಗಳೂರಿನ ಸಿಸಿಬಿ ಪೊಲೀಸರ ಕಾರ್ಯಕ್ಷಮತೆಯನ್ನು ಮೆಚ್ಚಲೇಬೇಕು.

ಇಲ್ಲಿ ಇನ್ನೊಂದು ಪ್ರಶ್ನೆ; ‘ಹೊಡಿ ಮಗ ಹೊಡಿ ಮಗ ಹೊಡಿ ಮಗ ಹೊಡಿ ಮಗ ಬಿಡಬೇಡ ಅವನ್ನಾ...’ ಎನ್ನುತ್ತಾ ಲಾಂಗು ಜಳಪಿಸುತ್ತಾ ರೌಡಿಸಂ ಮತ್ತು ಹತ್ಯೆಯಂಥ ಗಂಭೀರ ಅಪರಾಧಗಳನ್ನು ಪ್ರಚೋದಿಸುವಂತಹ ಚಿತ್ರಗೀತೆ ಮತ್ತು ಈ ಚಿತ್ರದ ದೃಶ್ಯಗಳು ಸಿಸಿಬಿ ಪೊಲೀಸರ ಕಿವಿಗೆ ಬಿದ್ದಿಲ್ಲವೇ? ಕಣ್ಣಿಗೆ ಕಾಣಿಸಿಲ್ಲವೇ?

ADVERTISEMENT

ಅಷ್ಟೇ ಅಲ್ಲ, ಮನೆ ಮಂದಿಯೆಲ್ಲಾ ಕುಳಿತು ವೀಕ್ಷಿಸುವ ಕಿರುತೆರೆ ಧಾರಾವಾಹಿಗಳಲ್ಲಿ ಭಾರತ ದಂಡಸಂಹಿತೆಯನ್ವಯ ಶಿಕ್ಷಾರ್ಹವಾದ ಅಪರಾಧಗಳನ್ನೆಲ್ಲಾ ಪ್ರಚೋದಿಸುವಂಥ ದೃಶ್ಯ ಹಾಗೂ ಸಂಭಾಷಣೆಗಳಿರುತ್ತವಲ್ಲವೇ?

ಮಾದಕ ವಸ್ತುಗಳಿಗೆ ದಾಸರಾದವರಿಗಿಂತ ಮಚ್ಚು ಲಾಂಗು ಹಿಡಿದು ಹೊಡೆದಾಡಿ ಪ್ರಾಣ ತೆಗೆಯುವ ರೌಡಿಗಳು ಹೆಚ್ಚು ಅಪಾಯಕಾರಿ. ಹಾಗಾಗಿ ಮಾದಕ ವಸ್ತುಗಳ ಸೇವನೆಗೆ ಪ್ರಚೋದನೆ ನೀಡುವವರ ಮೇಲೆ ಕ್ರಮ ತೆಗೆದುಕೊಳ್ಳುವುದಕ್ಕೂ ಮುನ್ನ ಮಚ್ಚು- ಲಾಂಗು ಹಿಡಿದು ದಾಳಿ ಮಾಡುವ ರೌಡಿಗಳಿಗೆ ಪ್ರಚೋದನೆ ನೀಡುವವರ ವಿರುದ್ಧ, ಹಾಗೂ ಕಿರುತೆರೆ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ಹಾಗೂ ವಾಹಿನಿ ಮಾಲೀಕರ ವಿರುದ್ಧ ಸಿಸಿಬಿ ಪೊಲೀಸರು ಕ್ರಮ ಕೈಗೊಳ್ಳಲಿ!

ಪಿ.ಜೆ. ರಾಘವೇಂದ್ರ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.