ADVERTISEMENT

ವಿದೇಶಿಯರ ಅಭಿಮಾನ ಬೇಕು, ಅನುಕಂಪವಲ್ಲ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2019, 19:11 IST
Last Updated 25 ನವೆಂಬರ್ 2019, 19:11 IST

ದೆಹಲಿಯ ವಾಯುಮಾಲಿನ್ಯದ ಕುರಿತು ಹಾಲಿವುಡ್ ನಟ ಲಿಯೊನಾರ್ಡೊ ಡಿಕ್ಯಾಪ್ರಿಯೊ ಆತಂಕ ವ್ಯಕ್ತಪಡಿ ಸಿದ್ದಾರೆ (ಪ್ರ.ವಾ., ನ. 25). ದೂರದ ಯಾವುದೋ ದೇಶದಲ್ಲಿ ವೈಭವೋಪೇತ ಜೀವನ ನಡೆಸುತ್ತಿರುವ ನಟ ಹೀಗೆ ಅನ್ಯ ದೇಶದ ಪರಿಸರ, ಜನಸಾಮಾನ್ಯರ ಆರೋಗ್ಯದ ಬಗ್ಗೆ ಆತಂಕ- ಕಾಳಜಿ ತೋರುತ್ತಿದ್ದಾರೆ. ಆದರೆ, ಇಲ್ಲೇ ಇರುವ ಜನಪ್ರತಿನಿಧಿ ಗಳು, ಅಧಿಕಾರಿಗಳು ಇದರ ಬಗ್ಗೆ ಚಕಾರವೆತ್ತದೆ ಅಧಿಕಾರ, ಹಣಕ್ಕೆ ಪ್ರಾಮುಖ್ಯ ನೀಡುತ್ತಾ, ಜನರ ಆರೋಗ್ಯವನ್ನು ಕಡೆಗಣಿಸುತ್ತಿದ್ದಾರೆ. ಇನ್ನು ಸಮಾಜದಲ್ಲಿ ವೈಚಾರಿಕ, ವೈಜ್ಞಾನಿಕ ಮನೋಭಾವವನ್ನು ಬೆಳೆಸಬೇಕಾದ ಮಠಾಧೀಶರಲ್ಲಿ ಕೆಲವರು ಜನರ ದಾರಿ ತಪ್ಪಿಸಲು ಕ್ಷುಲ್ಲಕ ವಿಚಾರಗಳನ್ನು ಹರಿಬಿಡುತ್ತಿದ್ದಾರೆ.

ಹೀಗಿರುವಾಗ, ಪರದೇಶದ ವ್ಯಕ್ತಿಯೊಬ್ಬ ನಮ್ಮ ದೇಶದ ಬಗ್ಗೆ ಅನುಕಂಪ ತೋರುತ್ತಿರುವುದು ವ್ಯವಸ್ಥೆಯ ವ್ಯಂಗ್ಯದಂತೆ ತೋರುತ್ತದೆ. ನಮ್ಮ ದೇಶದ ಬಗ್ಗೆ ಹೊರದೇಶದವರು ಅಭಿಮಾನ ಬೆಳೆಸಿಕೊಳ್ಳಬೇಕೇ ವಿನಾ ಹೀಗೆ ಅನುಕಂಪ, ಅನುಮಾನ ವ್ಯಕ್ತ ಪಡಿಸುವಂತೆ ಆಗಬಾರದು. ಹಾಗಾಗಿ, ಮೊದಲು ಪರಿಸರ ಸಂರಕ್ಷಣೆಗೆ ನಾವು ಪಣ ತೊಡಬೇಕಾಗಿದೆ. ಇಲ್ಲವಾದಲ್ಲಿ ವೈವಿಧ್ಯದ ನಾಡು, ಶಾಂತಿಪ್ರಿಯ ಮುಂತಾದ ಉಪಮೆಗಳು ಹಿಂದೆ ಸರಿದು, ಉಸಿರಾಡಲು ಶುದ್ಧ ಗಾಳಿ ಇಲ್ಲದ, ಕುಡಿಯಲು ಶುದ್ಧವಾದ ನೀರಿಲ್ಲದ, ತಿನ್ನಲು ಉತ್ತಮ ಆಹಾರವಿಲ್ಲದ ನಾಡು ಎಂಬ ಅಪಕೀರ್ತಿಗೆ ಪಾತ್ರವಾಗಬೇಕಾದ ದಿನಗಳು ಬರಬಹುದು.

ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.