ADVERTISEMENT

ಮತದಾರರ ಶಕ್ತಿ ಮತ್ತು ಮಠಾಧೀಶರ ಪ್ರಭಾವ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 29 ಜುಲೈ 2021, 19:30 IST
Last Updated 29 ಜುಲೈ 2021, 19:30 IST

ರಾಜಕಾರಣಿಗಳು ಅಧಿಕಾರಕ್ಕಾಗಿ ಹಪಹಪಿಸುವುದು ಇತ್ತೀಚೆಗೆ ಸಾಮಾನ್ಯ ಎಂಬಂತಾಗಿದ್ದು, ಜನ ಇದಕ್ಕೆ ಒಗ್ಗಿಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ, ಮಠಾಧೀಶರು ತಮ್ಮ ಶಿಷ್ಯಂದಿರಲ್ಲಿ ನೈತಿಕ ಪ್ರಜ್ಞೆ, ಸಹಿಷ್ಣುತೆ, ನಿಸ್ವಾರ್ಥ ಮನೋಭಾವ, ಶಾಂತಿ, ಸಮಾಧಾನ ಮೈಗೂಡಿಸಿಕೊಳ್ಳಲು ಅಗತ್ಯವಾದ ಉಪದೇಶ ಮಾಡಿ ಸಮಾಜವನ್ನು ಮರ್ಯಾದೆಯಿಂದ ಬದುಕುವಂತೆ ಪ್ರೇರೇಪಿಸಬೇಕು. ಆದರೆ ಈಗ ಮಠಾಧೀಶರ ಜುಟ್ಟಿಗೂ ರಾಜಕಾರಣಿಗಳು ಕೈಹಾಕಿದ್ದಾರೆ. ಆಗಾಗ ಅನುದಾನ ಬಿಡುಗಡೆ ಮಾಡಿ ಅವರನ್ನು ತಮ್ಮ ಹಂಗಿಗೆ ಸಿಕ್ಕಿಸುತ್ತಿದ್ದಾರೆ. ಇದನ್ನು ಅರಿಯದೆ ಅಧಿಕಾರಸ್ಥ ಶಿಷ್ಯರ ನಡೆನುಡಿಯ ಮೋಡಿಗೊಳಗಾಗಿ, ತಮ್ಮಲ್ಲಿ ತೋರುತ್ತಿರುವ ಭಯ ಭಕ್ತಿಯು ತಮ್ಮ ಮೇಲಿನ ಅಭಿಮಾನ, ಪೂಜ್ಯಭಾವನೆಯಿಂದ ಎಂದು ತಿಳಿದು, ಅವರ ಗುಣಾವಗುಣಗಳನ್ನು ಪರಿಗಣಿಸದೆ, ಶರಣು ಬಂದರೆಂದು ಅವರನ್ನು ಸಂರಕ್ಷಿಸಲು ಮಠಾಧೀಶರು ಮುಂದಾಗುವುದು ಅಚ್ಚರಿದಾಯಕ.

ಒಂದು ರಾಜ್ಯದ ಮುಖ್ಯಮಂತ್ರಿ ಸ್ಥಾನ ಕೊಡಿಸುವಷ್ಟು ಅಥವಾ ಉಳಿಸುವಷ್ಟು ತಪಸ್ವಿಗಳು ತಾವಲ್ಲ ಎಂಬುದನ್ನು ಮಠಾಧೀಶರು ಅರಿಯಬೇಕು. ಇದು ತ್ರೇತಾಯುಗ ಅಥವಾ ದ್ವಾಪರ ಯುಗ ಅಲ್ಲ. ಇದು ಕಲಿಯುಗ. ಅಂದಿನ ಕಾಲದ ವಿಶ್ವಾಮಿತ್ರ, ವಸಿಷ್ಠರಂತೆ ತಮ್ಮ ತಪಶ್ಶಕ್ತಿಯಿಂದ ಒಂದು ಹುಲ್ಲುಕಡ್ಡಿಯನ್ನೂ ಈಗಿನವರು ಸುಡಲಾಗುವುದಿಲ್ಲ. ಪಕ್ಷ ಹಾಳಾಗಲಿ ಎಂದು ಶಾಪ ಕೊಟ್ಟು, ತಮ್ಮ ಶಕ್ತಿಯೇನು ಎಂದು ಜನರೆದುರು ತಮ್ಮನ್ನು ಪರೀಕ್ಷೆಗೆ ಒಡ್ಡಿಕೊಳ್ಳುವ ಕೆಲಸಕ್ಕೆ ಮುಂದಾಗುವುದು ತರವಲ್ಲ. ಮಠಾಧೀಶರು ಲೌಕಿಕದಲ್ಲಿ ತಾವರೆ ಎಲೆಯ ಮೇಲಿನ ನೀರಿನಂತೆ ನಿರ್ಲಿಪ್ತರಾಗಿರುವುದು ಅಗತ್ಯ.

ಮತದಾರರ ಶಕ್ತಿಯನ್ನು ಸಾವಿರ ಮಠಾಧೀಶರ ಪ್ರಭಾವ ಗೆಲ್ಲಲಾರದು ಎನ್ನುವುದನ್ನು ಇತ್ತೀಚಿನ ಘಟನೆಗಳಿಂದ ರಾಜಕಾರಣಿಗಳು ಅರಿಯುವುದು ಮುಖ್ಯ. ಜನರೇ ತಮ್ಮ ದೇವರು ಎಂದು ತಿಳಿದು ಜನಸೇವೆಗೆ ಬದ್ಧರಾಗಿ ತಮ್ಮ ಸ್ಥಾನಮಾನ ಉಳಿಸಿಕೊಳ್ಳಲಿ.

ADVERTISEMENT

-ಸತ್ಯಬೋಧ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.