ADVERTISEMENT

ಮನವ ಕಾಡಿದ ಅಭಿನಯ ಶಾರದೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 27 ಜುಲೈ 2021, 19:30 IST
Last Updated 27 ಜುಲೈ 2021, 19:30 IST

ನಟಿ ಜಯಂತಿಯವರು ಅಭಿನಯ ಶಾರದೆಯೂ ಹೌದು, ರೂಪಸಿಯೂ ಹೌದು. ಅವರ ಸರಿಸುಮಾರು70– 80 ಚಿತ್ರಗಳನ್ನು ನಾನು ನೋಡಿರಬಹುದು. 80ರ ದಶಕದಲ್ಲಿ ಜಯಂತಿ ಅವರು ಬೆಂಗಳೂರಿನ ನವರಂಗ್‌ ಬಳಿಯ ಕಾರ್ಡ್ ರೋಡ್‌ನಲ್ಲಿ ವಾಸವಿದ್ದರು. ಅದೇ ಏರಿಯಾದಲ್ಲಿ ಇದ್ದ ನಾನು, ಅವರ ಮನೆ ಮುಂದೆ ಓಡಾಡುತ್ತಿದ್ದೆನಾದರೂ ಒಮ್ಮೆಯೂ ಅವರು ಕಾಣಸಿಗಲಿಲ್ಲ. ರೇಸ್ ಕೋರ್ಸ್‌ ರಸ್ತೆಯಲ್ಲಿನ ಫಿಲಂ ಚೇಂಬರ್ ಕಚೇರಿಯಲ್ಲಿಒಮ್ಮೆ ಕಂಡರೂ ಮಾತನಾಡಲಾಗಲಿಲ್ಲ. ಅವರ ಬಗ್ಗೆ ಬಹಳಷ್ಟು ತಿಳಿದಿದ್ದೆ. ಗೌರವ, ಅಭಿಮಾನ, ಪ್ರೀತಿ ಇರಿಸಿಕೊಂಡಿದ್ದೆ. ಬಳಿಕ ಬೆಂಗಳೂರು ಬಿಟ್ಟು ಮೈಸೂರು ಸೇರಿದ ನಂತರ ಜಯಂತಿಯವರನ್ನು ಮರೆತಿದ್ದೆ.

ಈಗ್ಗೆ ಐದಾರು ತಿಂಗಳ ಹಿಂದೆ ಇದ್ದಕ್ಕಿದ್ದಂತೆ ಜಯಂತಿಯವರು ಮತ್ತೆ ನನ್ನ ಮನದಾಳಕ್ಕೆ ಬಂದು ನಿಂತುಬಿಟ್ಟರು! ಅವರ ಬಗ್ಗೆ ಯೋಚಿಸುತ್ತ ಹೋದಂತೆ ಭಾವುಕನಾಗಿಬಿಟ್ಟೆ. ಸೆಲೆಬ್ರಿಟಿಯಾದರೂ ಹಮ್ಮು, ಬಿಮ್ಮು ಇಲ್ಲದ ಸರಳ ಸುಂದರ ವ್ಯಕ್ತಿತ್ವದ ಮಹಿಳೆ. ಯಾರನ್ನೂ ನೋಯಿಸದ, ಯಾರನ್ನೂ ತಪ್ಪಾಗಿ ಅರ್ಥೈಸಿಕೊಳ್ಳದ ಅಥವಾ ಎಲ್ಲರನ್ನೂ ನಂಬುವಂತಹ ಮುಗ್ಧತೆ. ಇದೇ ಕಾರಣಕ್ಕೆ ಬದುಕಿನಲ್ಲಿ ನೊಂದು, ನಲುಗಿಹೋದವರು.

ಬೆಂಗಳೂರಿನಲ್ಲಿ ಇದ್ದಾಗ ಜಯಂತಿಯವರನ್ನು ಭೇಟಿ ಮಾಡಿ ಆಪ್ತವಾಗಿ ಮಾತನಾಡಲಾಗಲಿಲ್ಲ. ಈಗಲಾದರೂ ಒಮ್ಮೆ ಅವರೊಡನೆ ಮತನಾಡಬೇಕು ಎಂದು ನಿರ್ಧಾರ ಮಾಡಿದೆ. ಆದರೆ ಬೆಂಗಳೂರಿಗೆ ಹೋಗಲು ಕೊರೊನಾ ಬಿಡುವು ಕೊಡಲಿಲ್ಲ. ಅವರ ನೆನಪು ತೀವ್ರವಾಗಿ ಆಗುತ್ತಿತ್ತು. ಒಂದು ಕರೆಯನ್ನಾದರೂ ಮಾಡೋಣವೆಂದು ಬನಶಂಕರಿಯ ಅವರ ನಿವಾಸಕ್ಕೆ ಕರೆ ಮಾಡಿದೆ. ಯಾರೂ ಸ್ವೀಕರಿಸಲಿಲ್ಲ. ಇದೆಲ್ಲಾ ನಡೆದು ಒಂದು ವಾರ ಆಗಿರಬಹು ದಷ್ಟೆ. ಮೊನ್ನೆ ದಿಢೀರೆಂದು ಮಾಧ್ಯಮಗಳಲ್ಲಿ ಜಯಂತಿ ಅವರ ಮರಣದ ಸುದ್ದಿ ಬಿತ್ತರವಾದಾಗ ಹೃದಯ ಭಾರವಾಗಿ ಕಣ್ಣುಗಳು ತುಂಬಿ ಬಂದವು.

ADVERTISEMENT

- ಎಂ.ಕೆ.ವಾಸುದೇವರಾಜು,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.