ADVERTISEMENT

ಕಾಂಗ್ರೆಸ್‌ ಪಕ್ಷಕ್ಕೆ ಹತಾಶೆ ತರವಲ್ಲ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2019, 19:10 IST
Last Updated 25 ನವೆಂಬರ್ 2019, 19:10 IST

ವಿಧಾನಸಭೆ ಚುನಾವಣೆ ನಂತರ ಕರ್ನಾಟಕದಲ್ಲಿ ಪ್ರದರ್ಶನಗೊಂಡ ಸರ್ಕಾರ ರಚನೆಯ ನಾಟಕದ ಪರಿಣಾಮ ವನ್ನು ಜನ ಇನ್ನೂ ಅನುಭವಿಸುತ್ತಿದ್ದಾರೆ. ಆಳುವ ಮೈತ್ರಿಕೂಟಕ್ಕೆ ಸೇರಿದ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯನ್ನು ಅಧಿಕಾರಕ್ಕೆ ತಂದರು. ಈಗ ಮಹಾರಾಷ್ಟ್ರದಲ್ಲಿ ಇನ್ನೊಂದು ರೀತಿಯ ಪ್ರಹಸನ. ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್‌, ಕೇವಲ ಸೆಕ್ಯುಲರ್ ಎಂಬ ಕಾರಣಕ್ಕೆ ಜೆಡಿಎಸ್ ಸಖ್ಯ ಬೆಳೆಸಿ, ಕಡಿಮೆ ಸಂಖ್ಯಾಬಲ ಹೊಂದಿದ್ದ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಕೊಟ್ಟು ತಾನು ಎರಡನೇ ಸ್ಥಾನ ಅಲಂಕರಿಸಿತ್ತು. ಆದರೆ, ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು, ಮತೀಯ ಮಾತ್ರವಲ್ಲ ಪರಭಾಷಿಕರನ್ನು ಶತ್ರುಗಳಂತೆ ಕಾಣುವ ಶಿವಸೇನಾದ ಜೊತೆ ಕೈಜೋಡಿಸಲು ಮುಂದಾಗಿರುವುದು ಯಾವ ಪುರುಷಾರ್ಥಕ್ಕೆ?

ತನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ, ಶತ್ರುವಿನ ಎರಡು ಕಣ್ಣುಗಳೂ ಹೋಗಲಿ ಎನ್ನುವುದು ಚಾಣಕ್ಯ ನೀತಿ. ಆದರೆ ತನ್ನ ಎರಡು ಕಣ್ಣುಗಳು ಹೋದರೂ ಪರ ವಾಗಿಲ್ಲ ಶತ್ರುವಿನ ಒಂದು ಕಣ್ಣಾದರೂ ಹೋಗಬೇಕು ಎನ್ನುವುದು ಕಾಂಗ್ರೆಸ್ ನೀತಿಯೇ? ಕೇಂದ್ರದಲ್ಲಿ ಬಿಜೆಪಿ ಯನ್ನು ಮಣಿಸಿ ಮತ್ತೆ ಅಧಿಕಾರಕ್ಕೆ ಬರುವ ಬಲ ಹೊಂದಬಹುದಾದ ಏಕೈಕ ಪಕ್ಷ ಕಾಂಗ್ರೆಸ್. ಆ ಪಕ್ಷ ಇದನ್ನು ಅರಿಯದೆ ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳೊಡನೆ ಹೊಂದಾಣಿಕೆ ಮಾಡಿಕೊಂಡು, ಅವುಗಳಿಗೆ ಶರಣಾಗುವ ಹತಾಶ ಸ್ಥಿತಿ ತಲುಪಿರುವು
ದನ್ನು ನೋಡಿ ಪ್ರಜಾಪ್ರಭುತ್ವಪ್ರಿಯರಿಗೆ ಆಘಾತವಾಗಿದೆ. ದೇಶದಾದ್ಯಂತ ತನಗಿರುವ ಬೆಂಬಲವನ್ನು ಈಗಲಾದರೂ ಅರ್ಥ ಮಾಡಿಕೊಂಡು, ಪರ್ಯಾಯ ಆಡಳಿತದ ಜವಾಬ್ದಾರಿ ಹೊರುವ ಪಕ್ಷವಾಗಿ ಕಾಂಗ್ರೆಸ್‌ ಬಲಗೊಳ್ಳಬೇಕು. ಇಲ್ಲವಾದರೆ, ದೇಶದಲ್ಲಿ ಪ್ರಬಲ ವಿರೋಧ ಪಕ್ಷವೇ ಇಲ್ಲದಂತಾಗಿ, ಒಂದೇ ಪಕ್ಷದ ಕೈಗೆ ಅಧಿಕಾರ ಸಿಕ್ಕುತ್ತಾ ಹೋದರೆ ಅದು ಪ್ರಜಾಪ್ರಭುತ್ವಕ್ಕೆ ಮಾರಕ. ಯಾವುದೂ ಶಾಶ್ವತವಲ್ಲ, ತನಗೆ ಒದಗಿರುವ ಇಂದಿನ ದುಃಸ್ಥಿತಿ ಕೂಡ ಎಂಬುದನ್ನು ಕಾಂಗ್ರೆಸ್ ಅರಿಯಬೇಕು.

ಸತ್ಯಬೋಧ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.