ADVERTISEMENT

ವಾಚಕರ ವಾಣಿ | ಮೀಸಲಾತಿ: ಅಶಕ್ತರ ಅಭಿವೃದ್ಧಿಗೆ ಕೈಜೋಡಿಸಿ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 17:36 IST
Last Updated 15 ನವೆಂಬರ್ 2022, 17:36 IST

ಮೀಸಲಾತಿ ಸೌಲಭ್ಯ ಇರುವುದೇ ಅತ್ಯವಶ್ಯ ಕಾರಣಗಳಿಗಾಗಿ. ಸಹಸ್ರಾರು ವರ್ಷಗಳಿಂದಲೂ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಬೌದ್ಧಿಕವಾಗಿ ವಂಚಿತರಾದವರು ಮಾನಸಿಕ ವೇದನೆಯ ಶೃಂಖಲೆಗಳಿಂದ ಬಿಡಿಸಿಕೊಳ್ಳಲು,ಪ್ರಜಾಪ್ರಭುತ್ವದ, ಸಂವಿಧಾನದ ಅಡಿಗಲ್ಲಿನ ಮೇಲೆ ‘ಸ್ವಾತಂತ್ರ್ಯ’ವನ್ನು ಸಮನಾಗಿ ಹಂಚಿಕೊಳ್ಳಲು ಪ್ರಬುದ್ಧರು ಚರ್ಚೆಗಳ ನಂತರ ಮೀಸಲಾತಿ ಪದ್ಧತಿಯನ್ನು ಸಂವಿಧಾನದಲ್ಲಿ ಸೇರಿಸಿದರು.

ಹೀಗಿರುವಾಗ, ಇದುವರೆಗೂ ಮೀಸಲಾತಿ ವ್ಯಾಪ್ತಿಗೆ ಒಳಪಡದ ಕೆಲವು ಪ್ರಬಲ ಜಾತಿಗಳಲ್ಲಿಯೂ ಆರ್ಥಿಕವಾಗಿ ಅಶಕ್ತರಿದ್ದಾರೆ ಎಂಬ ವಾದದಿಂದಾಗಿ, ಅವರನ್ನೂ ಮೀಸಲಾತಿ ಸಾಲಿನಲ್ಲಿ ನಿಲ್ಲಿಸುವುದು ಮತ್ತೊಬ್ಬರ ಹಕ್ಕನ್ನು ಕಸಿದಂತೆ. ಇದು ಅಮಾನವೀಯ. ಅತ್ಯಂತ ತಳಮಟ್ಟದ ಉದ್ಯೋಗಗಳನ್ನು ನಿರಾಕರಿಸುವ ಆರ್ಥಿಕವಾಗಿ ಹಿಂದುಳಿದ ಈವರ್ಗದವರಿಗಿಂತ, ಕೆಳಹಂತದ ಕೆಲಸಗಳಲ್ಲಿ ವಂಶಪಾರಂಪರ್ಯವಾಗಿ ದುಡಿಯುತ್ತಿರುವ, ಆರ್ಥಿಕವಾಗಿಯೂ ವಂಚಿತರಾದ ಸಮಾಜದವರಿಗೆ ಮೀಸಲಾತಿ ಸೌಲಭ್ಯ ಸಲ್ಲಬೇಕಲ್ಲವೇ?

ಆರ್ಥಿಕ ಹಿಂದುಳಿದಿರುವಿಕೆಯನ್ನು ಬದಲಾಯಿಸಬಹುದು, ಆದರೆ, ತುಚ್ಛೀಕರಣದ ಪಿಡುಗಿನಿಂದ ಹೊರಬರುವುದು ಅಸಾಧ್ಯ. ಈಗಾಗಲೇ ಸಹಸ್ರಾರು ವರ್ಷಗಳಿಂದ ಸಮಾಜದ ತುಳಿತಕ್ಕೆ ಒಳಗಾಗಿರುವ ಅಶಕ್ತರನ್ನು ಹಿಂದುಳಿಸಿರುವ ತುಚ್ಛೀಕರಣದ ವಾಸ್ತವವನ್ನು ಕಂಡಾದರೂ ‘ಶಕ್ತರು’ ಮಾನವತೆಯಿಂದ, ಜವಾವ್ದಾರಿಯಿಂದ ಮುಂದೆ ಬಂದು, ಶೇ 10 ಮೀಸಲಾತಿಯನ್ನು ಸ್ವೀಕರಿಸದೆ, ಅಶಕ್ತರ ಅಭಿವೃದ್ಧಿಗಾಗಿ ಕೈ ಜೋಡಿಸಬೇಕು. ‘ಕೆಳವರ್ಗ’ ಎಂಬ ಪಿಡುಗಿಗೆ ಒಳಗಾಗಿರುವವರು ದೇಶದ ಅಭಿವೃದ್ಧಿಗೆ ನೀಡಿರುವ ಕೊಡುಗೆ ಅಸಾಮಾನ್ಯ ಮತ್ತು ಅಭಿವೃದ್ಧಿಗೆ ತಳಪಾಯ ಹಾಕಿದ ಕೀರ್ತಿ ಅವರಿಗೆ ಸೇರಿದೆ ಎಂಬ ಪ್ರಜ್ಞೆ ಎಲ್ಲರಲ್ಲೂ ಮೂಡಬೇಕಾಗಿದೆ.
-ಕೆ.ಎನ್.ಭಗವಾನ್, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.