ADVERTISEMENT

ವಾಚಕರವಾಣಿ: ಕನ್ನಡದಲ್ಲಿ ಎಂಜಿನಿಯರಿಂಗ್‌, ಅಪಸ್ವರ ಸಲ್ಲದು

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2021, 19:30 IST
Last Updated 7 ನವೆಂಬರ್ 2021, 19:30 IST

ಕನ್ನಡದಲ್ಲಿ ಎಂಜಿನಿಯರಿಂಗ್ ಶಿಕ್ಷಣ ಕಾರ್ಯಸಾಧ್ಯವಾಗುತ್ತಿರುವುದೇ ಒಂದು ರೋಮಾಂಚಕಾರಿಯಾದ ವಿಷಯವಾಗಿದೆ. ಅದರ ಋಣಾತ್ಮಕ ಅಂಶಗಳ ಬಗ್ಗೆ ಚರ್ಚೆ ಮಾಡುವುದು ನಂತರದ ಕೆಲಸ. ಇದನ್ನು ಸಾಧ್ಯವಾಗಿಸುವುದು ನಮ್ಮ ಮುಂದಿರುವ ಆದ್ಯತೆಯ ಕೆಲಸ. ಈ ರೀತಿಯ ಕ್ರಾಂತಿಕಾರಿ ವಿಷಯಗಳನ್ನು ಕಾರ್ಯಗತಗೊಳಿಸುವಾಗ ಸರ್ಕಾರ ಸರಿಯಾದ ಪೂರ್ವಸಿದ್ಧತೆಗಳನ್ನು ಮಾಡಿಕೊಂಡೇ ಮುಂದಡಿಯಿಟ್ಟಿರುತ್ತದೆ. ಇದರ ಬಗ್ಗೆ ಅಪಸ್ವರ ಸಲ್ಲದು. ಹಲವು ಸಣ್ಣಪುಟ್ಟ ಸಮಸ್ಯೆಗಳು ಇದ್ದರೂ ಅವುಗಳನ್ನು ಆಮೇಲೆ ಸರಿಪಡಿಸಿಕೊಳ್ಳಲು ಕನ್ನಡ ನಾಡಿನಲ್ಲಿ ಪ್ರಕಾಂಡ ಪಂಡಿತರ ದೊಡ್ಡ ಪಡೆಯೇ ಇದೆ. ನಡೆಯುವವ ಎಡವುವುದು ಸಹಜ. ಹಾಗೆಂದು ನಡೆಯುವುದನ್ನು ನಿಲ್ಲಿಸಲಾದೀತೇ? ಕರ್ನಾಟಕದಲ್ಲಿ ಎಲ್ಲ ಶಿಕ್ಷಣವನ್ನೂ ಕನ್ನಡದಲ್ಲೇ ನೀಡಬೇಕೆಂಬುದು ಕುವೆಂಪು ಅವರಿಂದ ಮೊದಲುಗೊಂಡು ಅನೇಕ ಮಹನೀಯರ ಆಸೆ. ಇದು ಕಾರ್ಯಸಾಧ್ಯವಾಗುತ್ತಿರುವುದು ಇಂತಹ ಅನೇಕ ಕನ್ನಡದ ಕಟ್ಟಾಳುಗಳ ದಶಕಗಳ ಆಶಯಗಳಿಗೆ ನೀರೆರೆದು ಪೋಷಿಸಿದಂತೆ ಆಗುತ್ತದೆ.

ವೈಜ್ಞಾನಿಕವಾಗಿ ಹೇಳುವುದಾದರೆ ಯಾವುದೇ ಕಲಿಕೆಯನ್ನು ಮಾತೃಭಾಷೆಯಲ್ಲಿ ಮಾಡುವುದರಿಂದ ಗ್ರಹಿಕೆ ಸುಲಲಿತವಾಗಿ, ಸರಾಗವಾಗಿ ಆಗುತ್ತದೆ. ನಮ್ಮದಲ್ಲದ ಮತ್ತೊಂದು ಭಾಷೆಯಲ್ಲಿ ಶಿಕ್ಷಣ ಇದ್ದರೆ ವಿದ್ಯಾರ್ಥಿಗಳು ಮೊದಲು ಆ ಭಾಷೆಯನ್ನು ಕಲಿಯಲು ಸಮಯ ಮತ್ತು ಶಕ್ತಿಯನ್ನು ವ್ಯಯ ಮಾಡಬೇಕಾಗುತ್ತದೆ. ಮಾಡಿದರೂ ಪರಕೀಯ ಭಾಷೆ ಪರಕೀಯವಾಗೇ ಉಳಿಯುತ್ತದೆ. ಮಾತೃಭಾಷಾ ಶಿಕ್ಷಣದಿಂದ ವಿಷಯಗಳು ನೇರವಾಗಿ ಮನಸ್ಸಿಗೆ ನಾಟುತ್ತವೆ. ನಾವು ಕನ್ನಡ ಮಾಧ್ಯಮದಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿ ಪಿಯುಸಿಗೆ ಇಂಗ್ಲಿಷ್ ಮಾಧ್ಯಮ ತೆಗೆದುಕೊಂಡಾಗ ಪಡುತ್ತಿದ್ದ ಕಷ್ಟ ಅಷ್ಟಿಷ್ಟಲ್ಲ. ನಮ್ಮ ಕಷ್ಟವನ್ನು ನೋಡಿ ಕೆಲವು ಬೋಧಕರು ತರಗತಿಯ ಕೊನೆಯಲ್ಲಿ ಇಂಗ್ಲಿಷಿನಲ್ಲಿ ಮಾಡಿದ ಪಾಠವನ್ನು ಕನ್ನಡದಲ್ಲಿ ಕೆಲವೇ ವಾಕ್ಯಗಳಲ್ಲಿ ಹೇಳುತ್ತಿದ್ದರು. ಆಗ ನಮಗೆ ಆಗುತ್ತಿದ್ದ ಸಮಾಧಾನಕ್ಕೆ ಪಾರವಿರಲಿಲ್ಲ. ಆಮೇಲೆ ಅನಿವಾರ್ಯವಾಗಿ ಇಂಗ್ಲಿಷ್ ಮಾಧ್ಯಮಕ್ಕೆ ಹೊಂದಿಕೊಳ್ಳಬೇಕಾಯಿತು.

ಇಲ್ಲಿ ವೈದ್ಯಕೀಯ ಸೀಟು ಸಿಗದಿದ್ದವರು ಚೀನಾ ಮತ್ತು ರಷ್ಯಾದಂತಹ ದೇಶಗಳಿಗೆ ವೈದ್ಯಕೀಯ ಪದವಿಯನ್ನು ಅರಸಿ ಹೋಗುತ್ತಾರೆ. ಈಗಲೂ ಆ ದೇಶಗಳಲ್ಲಿ ಅಲ್ಲಿನ ಭಾಷೆಗಳಲ್ಲೇ ವೈದ್ಯಕೀಯ ಶಿಕ್ಷಣವನ್ನು ನೀಡಲಾಗುತ್ತಿದೆ. ಮೊದಲ ಆರು ತಿಂಗಳು ಅಲ್ಲಿನ ಭಾಷೆಯನ್ನು ಕಲಿಸಿ ನಂತರ ವೈದ್ಯಕೀಯ ಶಿಕ್ಷಣವನ್ನು ಕಲಿಸಲಾಗುತ್ತದೆ. ಅಲ್ಲಿನ ಭಾಷೆಯಲ್ಲಿ ವೈದ್ಯಕೀಯ ಪದವಿ ಪಡೆದು ಬಂದ ಅನೇಕ ಭಾರತೀಯರು ಈ ದೇಶದಲ್ಲಿ ತಮ್ಮ ವೃತ್ತಿಯನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಅಂದರೆ ಇಂಗ್ಲಿಷಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯದೇ ಇರುವುದು ಅವರ ಯಶಸ್ಸಿಗೆ ಅಡ್ಡಿಯಾಗಿಲ್ಲ. ಕನ್ನಡದಲ್ಲಿ ಉನ್ನತ ಶಿಕ್ಷಣವನ್ನು ಅಭ್ಯಸಿಸುವ ವಿದ್ಯಾರ್ಥಿಗಳ ಸ್ಥಿತಿಯೂ ಇದೇ ರೀತಿ ಇರುತ್ತದೆ. ತಮಗೆ ಜಾಗತಿಕವಾಗಿ ತೆರೆದುಕೊಳ್ಳಬೇಕೆಂಬ ಆಸೆ ಮತ್ತು ಅನಿವಾರ್ಯ ಇದ್ದರೆ ಎಲ್ಲಾ ತರಹದ ರೂಪಾಂತರಗಳಿಗೆ ಸಿದ್ಧವಾಗುವುದು ಸಹಜ ಪ್ರಕ್ರಿಯೆ ಆಗುತ್ತದೆ.

ADVERTISEMENT

ಕನ್ನಡದಲ್ಲಿ ಎಂಜಿನಿಯರಿಂಗ್ ಶಿಕ್ಷಣ ಪ್ರಾರಂವಾಗುತ್ತಿರುವುದು ಕನ್ನಡದ ಅಸ್ಮಿತೆಯನ್ನು ಉಳಿಸುವ ಮತ್ತು ಬೆಳೆಸುವ ದೃಷ್ಟಿಯಿಂದ ಒಂದು ಮಹತ್ವದ ಹೆಜ್ಜೆ. ಇದನ್ನು ಹೃದಯಪೂರ್ವಕವಾಗಿ ಸ್ವಾಗತಿಸೋಣ.

- ಡಾ. ಕೆ.ಎಸ್‌.ಗಂಗಾಧರ,ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.