ADVERTISEMENT

ವಾಚಕರ ವಾಣಿ | ಪಿಎಚ್‌.ಡಿ ನಿಯಮಾವಳಿ: ಸಲ್ಲದ ನಿಯಮ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2022, 19:31 IST
Last Updated 25 ಸೆಪ್ಟೆಂಬರ್ 2022, 19:31 IST

ಪಿಎಚ್‌.ಡಿಗೆ ಸಂಬಂಧಿಸಿದಂತೆ ಮೈಸೂರು ವಿಶ್ವವಿದ್ಯಾಲಯವು ಇತ್ತೀಚೆಗೆ ಹೊರಡಿಸಿರುವ ಹೊಸ ನಿಯಮಾವಳಿಯು ಅನೇಕ ಮಹತ್ವದ ಮಾರ್ಪಾಡುಗಳನ್ನು ಒಳಗೊಂಡಿರುವುದು ಸ್ವಾಗತಾರ್ಹ. ಆದರೆ ಈ ನಿಯಮಾವಳಿಯಲ್ಲಿ, ಐಎಸ್ಎಸ್ಎನ್ (ಇಂಟರ್‌ನ್ಯಾಷನಲ್ ಸ್ಟ್ಯಾಂಡರ್ಡ್ ಸೀರಿಯಲ್ ನಂಬರ್) ಇರುವ ಜರ್ನಲ್‌ನಲ್ಲಿ ಎರಡು ಸಂಶೋಧನಾ ಲೇಖನಗಳು ಮತ್ತು ಒಂದು ಲೇಖನವು ವಿಚಾರ ಸಂಕಿರಣದ ನಡಾವಳಿಯಲ್ಲಿ ಪ್ರಕಟವಾಗಿದ್ದರೆ ಮಾತ್ರ ಪಿಎಚ್‌.ಡಿ ಪದವಿ ಅಂಗೀಕಾರಕ್ಕೆ ಪರಿಗಣಿಸಲಾಗುವುದು ಎಂದು ಹೇಳಿರುವುದು ಸರಿಯಲ್ಲ.

ಇದು ಯುಜಿಸಿಯ ನಿಯಮಕ್ಕೆ ವಿರುದ್ಧವಾಗಿರುವುದಲ್ಲದೆ ಗುಣಮಟ್ಟದ ಸಂಶೋಧನೆಗಳ ಪ್ರಕಟಣೆಗೆ ಕೂಡ ಕೊಡಲಿಪೆಟ್ಟು ನೀಡಲಿದೆ.

ಐಎಸ್ಎಸ್ಎನ್, ಸಂಶೋಧನಾ ಲೇಖನಗಳ ಗುಣಮಟ್ಟವನ್ನು ನಿರ್ಧರಿಸುವ ಮಾನದಂಡವಲ್ಲ. ಅದು ಕೇವಲ ಜರ್ನಲ್‌ಗಳ ಪ್ರಕಾಶನದ (ದೇಶ, ಪ್ರಕಾಶಕರು...) ಮಾಹಿತಿಯನ್ನು ಗುರುತಿಸಲು ಮತ್ತು ಒಂದು ದೇಶದಲ್ಲಿ ಪ್ರಕಟವಾಗುವ ಜರ್ನಲ್‌ಗಳ ಮಾಹಿತಿಯನ್ನು ಶೇಖರಿಸಲು, ತಿಳಿಯಲು ಬಳಸುವ ವಿಶಿಷ್ಟ ಗುರುತಿನ ಸಂಖ್ಯೆ ಮಾತ್ರ. ಐಎಸ್ಎಸ್ಎನ್ ಹೊಂದಿರುವ ಜರ್ನಲ್‌ಗಳಲ್ಲಿ ಪ್ರಕಟವಾದ ಲೇಖನಗಳನ್ನು ಮಾತ್ರ ವಿಶ್ವವಿದ್ಯಾಲಯ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬಡ್ತಿ ಹಾಗೂ ನೇಮಕಾತಿಗಳಿಗೆ ಪರಿಗಣಿಸಲಾಗುವುದು ಎಂದು 2010ರಲ್ಲಿ ಯುಜಿಸಿ ನಿಯಮ ರೂಪಿಸಿದ ನಂತರ ದೇಶದಲ್ಲಿ ಐಎಸ್ಎಸ್ಎನ್ ಹೊಂದಿದ ಬಹಳಷ್ಟು ನಕಲಿ ಜರ್ನಲ್‌ಗಳು ಪ್ರಕಟಣೆಯನ್ನು ಪ್ರಾರಂಭಿಸಿದ್ದವು. ಈ ಕಾರಣದಿಂದ ಭಾರತವು ಪ್ರಪಂಚದ ನಕಲಿ ಜರ್ನಲ್‌ಗಳನ್ನು ಪ್ರಕಟಿಸುವ ಪ್ರಮುಖ ಕೇಂದ್ರವಾಗಿ ಬದಲಾಗಿ, ಜಗತ್ತಿನ ಸಂಶೋಧನಾ ವಲಯದಲ್ಲಿ ಮುಜುಗರಕ್ಕೆ ಒಳಗಾಗಬೇಕಾಯಿತು. ಈ ನಕಲಿ ಜರ್ನಲ್‌ಗಳ ಹಾವಳಿಯನ್ನು ಮನಗಂಡ ಯುಜಿಸಿ 2019ರಲ್ಲಿ ಯುಜಿಸಿ ಕೇರ್ ಲಿಸ್ಟ್ ಎನ್ನುವ ಜರ್ನಲ್‌ಗಳ ಪಟ್ಟಿಯನ್ನು ರೂಪಿಸಿದೆ. ಇದು ನಕಲಿ ಸಂಶೋಧನಾ ಜರ್ನಲ್‌ಗಳ ಪ್ರಕಟಣೆಯನ್ನು ಸ್ವಲ್ಪ ಮಟ್ಟಿಗಾದರೂ ನಿಲ್ಲಿಸಿದೆ. ಈಗ ವಿಶ್ವವಿದ್ಯಾಲಯಗಳ ನೇಮಕಾತಿ ಮತ್ತು ಪದೋನ್ನತಿಗೆ ಯುಜಿಸಿ ಕೇರ್ ಲಿಸ್ಟ್‌ನಲ್ಲಿ ಪ್ರಕಟವಾಗುವ ಸಂಶೋಧನಾ ಲೇಖನಗಳನ್ನು ಮಾತ್ರ ಪರಿಗಣಿಸಲಾಗುತ್ತಿದೆ. ಆದರೆ ಮೈಸೂರು ವಿಶ್ವವಿದ್ಯಾಲಯ ಏಕೆ ಯುಜಿಸಿ ಕೇರ್ ಲಿಸ್ಟ್ ಜರ್ನಲ್‌ಗಳಲ್ಲಿ ಸಂಶೋಧನಾ ಲೇಖನ ಪ್ರಕಟಿಸುವುದನ್ನು ಕಡ್ಡಾಯ ಮಾಡದೆ ಕೇವಲ ಐಎಸ್ಎಸ್ಎನ್ ಹೊಂದಿರುವ ಜರ್ನಲ್‌ಗಳಲ್ಲಿ ಪ್ರಕಟಣೆಯನ್ನು ಕಡ್ಡಾಯ ಮಾಡಿದೆ? ಇದು ಹೇಗೆ ಗುಣಮಟ್ಟದ ಸಂಶೋಧನೆಗಳಿಗೆ ಉತ್ತೇಜನ ನೀಡುವುದು?

ADVERTISEMENT

- ವಸಂತ ರಾಜು ಎನ್., ತಲಕಾಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.