ADVERTISEMENT

ವಾಚಕರ ವಾಣಿ: ರೈಲಿನಲ್ಲಿ ಕಳಪೆ ಆಹಾರ- ಲಘುವಾಗಿ ಪರಿಗಣಿಸದಿರಿ

​ಪ್ರಜಾವಾಣಿ ವಾರ್ತೆ
Published 10 ಮೇ 2022, 23:30 IST
Last Updated 10 ಮೇ 2022, 23:30 IST

ಕೆಲಸದ ನಿಮಿತ್ತ ಇತ್ತೀಚೆಗೆ ಸ್ನೇಹಿತರೊಂದಿಗೆ ದಾವಣಗೆರೆಯಿಂದ ಬೀರೂರಿಗೆ ಸಿದ್ಧಗಂಗಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುವಾಗ, ಬೆಳಗಿನ ಉಪಾಹಾರಕ್ಕೆಂದು ರೈಲಿನಲ್ಲಿಯೇ ಬರುವ ನಾಲ್ಕು ಪ್ಲೇಟ್ ಇಡ್ಲಿ– ವಡೆ ಖರೀದಿಸಿದೆವು. ಅದು ಯಾವ ರೀತಿಯಲ್ಲಿಯೂ ರುಚಿಸಲಿಲ್ಲ, ಗುಣಮಟ್ಟವೂ ಸರಿಯಾಗಿರಲಿಲ್ಲ. ಇಡ್ಲಿಗಳು ಸಂಪೂರ್ಣವಾಗಿ ಒಣಗಿದ್ದವು. ಇನ್ನು ಉದ್ದಿನ ವಡೆ ಹುಳಿಯಾಗಿ ತಿನ್ನಲು ಬಾರದಂತಿತ್ತು. ಅವುಗಳನ್ನು ತಿನ್ನದೆ ಕಸದ ಬುಟ್ಟಿಗೆ ಹಾಕಿದೆವು. ದರ ಮಾತ್ರ ತಲಾ ₹ 40. ಈ ಬಗ್ಗೆ ತಿಂಡಿ ಮಾರುವವರನ್ನು ಕೇಳೋಣವೆಂದರೆ, ಅವರು ಸ್ವಲ್ಪ ಹೊತ್ತಿನಲ್ಲಿಯೇ ಮರೆಯಾಗಿದ್ದರು. ಸಹಾಯವಾಣಿಗೆ ದೂರು ನೀಡೋಣವೆಂದರೆ, ನಮ್ಮ ಹತ್ತಿರ ಸಮಯವಿರಲಿಲ್ಲ ತುರ್ತಾಗಿ ಹೋಗಲೇಬೇಕಾದ ಸಂದರ್ಭ.

ನಮ್ಮ ಜೊತೆಗೆ ಇದ್ದ ಸಹಪ್ರಯಾಣಿಕರೊಬ್ಬರು, ‘ಅಣ್ಣಾ, ಕೆಲವೊಮ್ಮೆ ರಾತ್ರಿ ಉಳಿದವುಗಳನ್ನು ಬೆಳಿಗ್ಗೆ ಮಾರುತ್ತಾರೆ. ಬೆಳಿಗ್ಗೆ ಮಾಡಿದ್ದನ್ನು ಸಂಜೆಯವರೆಗೂ ಮಾರುತ್ತಾರೆ. ಒಮ್ಮೊಮ್ಮೆ 30, 20 ರೂಪಾಯಿಗೂ ಮಾರುತ್ತಾರೆ ಎಂದು ಹೇಳಿದರು. ಆಹಾರ ಪದಾರ್ಥ ಉಳಿದಿದೆ ಎಂದ ಮಾತ್ರಕ್ಕೆ ಪ್ರಯಾಣಿಕರ ಆರೋಗ್ಯ ಮತ್ತು ಹಿತದೃಷ್ಟಿಯಿಂದ ಯಾವಾಗ ಬೇಕೋ ಆಗ ಮಾರುವುದು ಸೂಕ್ತವಲ್ಲ. ಇದರಿಂದ, ಯಾರೋ ಮಾಡಿದ ತಪ್ಪಿಗೆ ಎಲ್ಲರನ್ನೂ ಅದೇ ದೃಷ್ಟಿಯಿಂದ ನೋಡುವಂತಾಗಿದೆ. ಜೊತೆಗೆ ರೈಲ್ವೆ ಇಲಾಖೆಯ ಮಾನ ಕೂಡ ಹರಾಜಾಗುತ್ತಿದೆ. ಭವಿಷ್ಯದಲ್ಲಿ ಈ ಪ್ರಕ್ರಿಯೆ ಹೀಗೇ ಮುಂದುವರಿದರೆ, ರೈಲಿನಲ್ಲಿ ಕೊಂಡು ತಿನ್ನಲು ಯಾರೂ ಇಷ್ಟಪಡುವುದಿಲ್ಲ. ಈ ಬಗ್ಗೆ ರೈಲ್ವೆ ಇಲಾಖೆ ಗಂಭೀರ ಚಿಂತನೆ ನಡೆಸಬೇಕಾಗಿದೆ.

ಮುರುಗೇಶ ಡಿ.,ದಾವಣಗೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.