ನಾನು ಒಬ್ಬ ಟ್ಯಾಕ್ಸಿ ಚಾಲಕ. ಆರು ವರ್ಷಗಳ ಕಾಲ ಅವರಿವರ ಬಳಿ ಬಾಡಿಗೆಗೆ ಗಾಡಿ ಓಡಿಸುತ್ತಾ ನೊಂದು-ಬೆಂದು ಸ್ವಲ್ಪ ಹಣ ಗಳಿಸಿ, ಮಹದಾಸೆಯಿಂದ ಸಾಲದಲ್ಲಿ ಟ್ಯಾಕ್ಸಿಯನ್ನು ಕೊಂಡುಕೊಂಡೆ. ಆದರೆ ಸ್ವಲ್ಪ ದಿನಗಳಲ್ಲೇ ಕೋವಿಡ್ ಎಂಬ ಬರಸಿಡಿಲಿನಿಂದ ಬಂದ ಲಾಕ್‌ಡೌನ್‌ನಿಂದ 8 ತಿಂಗಳು ಟ್ಯಾಕ್ಸಿ ಚಾಲನೆ ಸಾಧ್ಯವಾಗಲಿಲ್ಲ. ಸರ್ಕಾರದಿಂದ ಯಾವುದೇ ಭರವಸೆಯ ಯೋಜನೆ ಸಿಗದೆ, ಬ್ಯಾಂಕಿನ ಬಡ್ಡಿ ಹಣದ ಚಕ್ರ ನಿಲ್ಲಲಿಲ್ಲ. ಲಾಕ್‌ಡೌನ್ ಮುಗಿದ ಬಳಿಕ ಟ್ಯಾಕ್ಸಿ ರಿಪೇರಿ, ವಾಹನಕ್ಕೆ ಸಂಬಂಧಿಸಿದ ವಿವಿಧ ತೆರಿಗೆಗಳು ಹೆಗಲೇರಿದವು.
ಹೇಗೋ ಆ ಭಾರ ಇಳಿಸಿಕೊಳ್ಳುವಷ್ಟರಲ್ಲಿ ಎರಡನೇ ಅಲೆಯ ಲಾಕ್‌ಡೌನ್. ಹೀಗೇ ಎರಡು ವರ್ಷ ನೊಂದು ವಾಹನ ಮಾರಲು ಮುಂದಾದರೆ ಕೊಳ್ಳುವವರ ಕೊರತೆ. ಇದು ನನ್ನೊಬ್ಬನ ಕಥೆಯಲ್ಲ. ಎಲ್ಲ ಆಟೊ ಮತ್ತು ಟ್ಯಾಕ್ಸಿ ಚಾಲಕರ ವೇದನೆ. ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್ ಒಂದೇ ಮಾರ್ಗವಲ್ಲ. ಒಂದು ವೇಳೆ ಲಾಕ್‌ಡೌನ್ ಮಾಡಲೇಬೇಕಾದ ಸಂದರ್ಭ ಎದುರಾದರೆ ವಾಹನಕ್ಕೆ ಸಂಬಂಧಿಸಿದ ತೆರಿಗೆ, ವಾಹನ ವಿಮೆ ಹಾಗೂ ಬ್ಯಾಂಕ್ ಸಾಲದ ಕಂತು ಪಾವತಿಯಲ್ಲಿ ರಿಯಾಯಿತಿ ತಂದು ಸಹಕರಿಸಿ. ಕಾಯಿಲೆಯಿಂದ ಸತ್ತವರು ಕೆಲವು ಮಂದಿ. ಆದರೆ ಹಸಿವಿನಿಂದ ಸಾಯುತ್ತಿರುವವರು ಹಲವು ಮಂದಿ ಎಂಬುದನ್ನು ಸರ್ಕಾರ ಮನಗಾಣಲಿ.
- ಬಸವರಾಜ್,ಹೊಸದುರ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.