ADVERTISEMENT

ವಾಚಕರ ವಾಣಿ: ಮೌಢ್ಯಾಚರಣೆಯ ಅರ್ಥರಹಿತ ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 2:47 IST
Last Updated 16 ಸೆಪ್ಟೆಂಬರ್ 2020, 2:47 IST

‘ಗತಿಸಿದವರ ಸ್ಮರಣೆಯಲ್ಲಿ ಪಿತೃಪಕ್ಷ’ ಎಂಬ ಲೇಖನವು (ಪ್ರ.ವಾ., ಸೆ. 14) ಅವೈಜ್ಞಾನಿಕವಾಗಿದ್ದು, ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಮೌಢ್ಯಾಚರಣೆಯ ಅರ್ಥರಹಿತ ಸಮರ್ಥನೆಯಂತಿದೆ. ಪೂರ್ವಜರ ಸ್ಮರಣೆ ಮನಸ್ಸಿಗೆ ಸಂಬಂಧಿಸಿದ್ದು. ಅದು ಒಬ್ಬ ವ್ಯಕ್ತಿಯ ಜೀವನದುದ್ದಕ್ಕೂ ಅಂತರ್ಗತವಾಗಿ ಪದೇಪದೇ ಅಥವಾ ಆಗಾಗ ಪ್ರವಹಿಸುವ ಒಂದು ಪ್ರೀತಿ ಹಾಗೂ ಕೃತಜ್ಞತಾ ಭಾವದ ಮೆಲುಕು.

ಪ್ರತಿಯೊಬ್ಬರಲ್ಲೂ ಈ ಆರ್ದ್ರ ಭಾವ ಇದ್ದೇ ಇರುತ್ತದೆ. ಅವರಿವರೊಂದಿಗೆ ಮಾತನಾಡುವಾಗ ನುಸುಳಿ ಬಂದು ಕಣ್ಣಾಲಿಗಳು ತೇವಗೊಳ್ಳಬಹುದು. ಕೆಲವೊಮ್ಮೆ ಏಕಾಂತದಲ್ಲಿ ಅಥವಾ ಸ್ವಗತದ ರೂಪದಲ್ಲಿ ‘ನನ್ನ ತಂದೆ ತಾಯಿಯನ್ನು ಇನ್ನೂ ಚೆನ್ನಾಗಿ ನೋಡಿಕೊಳ್ಳಬೇಕಿತ್ತು’ ಎಂತಲೋ ‘ಸರಿಯಾಗಿ ನೋಡಿಕೊಳ್ಳಲಾಗಲಿಲ್ಲ’ ಎಂದೋ ಪಶ್ಚಾತ್ತಾಪವಾಗ
ಬಹುದು. ಹೀಗೆ ಹತ್ತು ಹಲವು ರೂಪಗಳಲ್ಲಿ ಪಿತೃಗಳ ಸ್ಮರಣೆ ಅತ್ಯಂತ ನೈಜವಾಗಿ ಆಗುತ್ತಲೇ ಇರುತ್ತದೆ. ಆದರೆ ಈ ಪಕ್ಷ, ತರ್ಪಣೆ, ಶ್ರಾದ್ಧದಂತಹ ಆಚರಣೆಗಳು ಕೇವಲ ಯಾಂತ್ರಿಕವಾಗಿ, ಭ್ರಮಾತ್ಮಕವಾಗಿ ಮತ್ತು ಕೆಲವು ವೇಳೆ ತೋರಿಕೆಯಾಗಿ ಬಾಲಿಶ ಎಂದೆನಿಸುವುದಿಲ್ಲವೇ?

‘ಅದಕ್ಕೆ ಪ್ರತಿಯಾಗಿ ಪಿತೃಗಳು ಆರೋಗ್ಯವನ್ನೂ ಆಯುಷ್ಯವನ್ನೂ ಸಂಪತ್ತನ್ನೂ ಸಂತಾನವನ್ನೂ ದಯಪಾಲಿಸುತ್ತಾರೆ’ ಎಂಬ ಪ್ರಲೋಭನೆ, ‘ಪಿತೃಗಳನ್ನು ಸಂತೋಷಗೊಳಿಸಿದರೆ ಅವರ ಅನುಗ್ರಹವನ್ನು ಸಂಪಾದಿಸಬಹುದು, ಅದಲ್ಲದಿದ್ದರೆ ಅವರ ಕೋಪಕ್ಕೆ ತುತ್ತಾಗಬಹುದು’ ಎಂಬ ಬೆದರಿಕೆ ಎಷ್ಟರಮಟ್ಟಿಗೆ ಸರಿ ಎಂದು ವಾಚಕರು ಪ್ರಶ್ನಿಸಬೇಕಾಗುತ್ತದೆ! ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ ಎಂದು ಸರಳವಾಗಿ ತೀರ್ಮಾನಿಸಿ ಬಿಡಲೂಆಗದು. ಈ ಕುಟಿಲ ಕಂದಾಚಾರಗಳ ಬೇರುಗಳನ್ನು ಕೀಳಬೇಕಾದರೆ ಜನ ಪ್ರಜ್ಞಾವಂತರಾಗಬೇಕು ಎಂಬ ಅಸಾಧ್ಯದ ಕನಸನ್ನು ಕಾಣುತ್ತಾ ಇರಬೇಕಷ್ಟೆ!

ADVERTISEMENT

-ಪು.ಸೂ.ಲಕ್ಷ್ಮೀನಾರಾಯಣ ರಾವ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.