ADVERTISEMENT

ಮಾನವತೆಯ ಆಧಾರದಲ್ಲಿ ಒಂದಾಗಬೇಕಿದೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 19:31 IST
Last Updated 10 ಮಾರ್ಚ್ 2021, 19:31 IST

‘ಹೀಗೂ ಸಾಧ್ಯ ಪರಿವರ್ತನೆ!’ ಎಂಬ ಮಲ್ಲಿಕಾರ್ಜುನ ಹೆಗ್ಗಳಗಿ ಅವರ ಲೇಖನ (ಸಂಗತ, ಮಾರ್ಚ್‌ 9) ಸಮಾಜದ ನೈತಿಕ ದುಃಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. ತಳಸಮುದಾಯಗಳು ತಲೆಮಾರುಗಳಿಂದ ತಮ್ಮ ಗಳಿಕೆ, ಸಂಪತ್ತು, ಜ್ಞಾನ, ಶ್ರಮ, ಮಾನ, ಪ್ರಾಣ ಎಲ್ಲವನ್ನೂ ಆ ದೇವರಿಗಾಗಿ ಇಲ್ಲವೇ ತಮ್ಮವರನ್ನು ಹೊರತು ಇತರರಿಗೆ ಬಿಟ್ಟುಕೊಟ್ಟಿದ್ದಾರೆ. ಇದರಿಂದಾಗಿಯೇ ರಿಕ್ತ ಹಸ್ತದವರಾಗಿದ್ದಾರೆ. ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ವಂಚಿತರಾಗಿದ್ದಾರೆ. ಅದೇನೇ ಇರಲಿ, ಮಹಾರಾಷ್ಟ್ರದ ಪೆಡ್ಡ ಎಂಬ ಗ್ರಾಮದ ಜನರು ಮನಃಪರಿವರ್ತನೆ ಮಾಡಿಕೊಂಡು, ಅಸ್ಪೃಶ್ಯರೆನಿಸಿಕೊಂಡಿದ್ದ ಸಮಾಜದವರಿಗೆ ಸಿದ್ಧೇಶ್ವರ ದೇವಳದ ಮುಕ್ತ ಪ್ರವೇಶಕ್ಕೆ ಅವಕಾಶ ಕೊಟ್ಟಿರುವುದು ಅನುಕರಣೀಯ. ಆದರೆ ಈ ಅವಕಾಶ ದೊರೆತದ್ದು, ಅದೇ ಹಳ್ಳಿಯವರಾಗಿ ಈಗ ಮುಂಬೈನಲ್ಲಿ ಬೃಹತ್‌ ಉದ್ಯಮಿಯಾಗಿರುವ ತಳಸಮುದಾಯದ ಪ್ರಕಾಶ ಖಾಡೆ ಎಂಬ ಉದ್ಯಮಿ ಒಂದು ಕೋಟಿ ರೂಪಾಯಿಯನ್ನು ದೇವಾಲಯದ ಜೀರ್ಣೋದ್ಧಾರಕ್ಕಾಗಿ ದಾನ ನೀಡಿದ ಕಾರಣದಿಂದ.

ಇದರಿಂದ ಬರುವ ಅರ್ಥವೆಂದರೆ, ಹಣ ಕೊಟ್ಟರೆ ತಮ್ಮವರನ್ನಾಗಿಸಿಕೊಳ್ಳಲು ಅಸ್ಪೃಶ್ಯರಲ್ಲದವರು ತಯಾರಿದ್ದಾರೆ ಎಂಬುದು. ಅಸ್ಪೃಶ್ಯರು ಆರ್ಥಿಕವಾಗಿ ಸಬಲರಾದರೆ ಬೇರೆಲ್ಲಾ ತಂತಾನೇ ಬರುತ್ತದೆ ಎಂಬುದು ಇನ್ನೊಂದು. ಆದರೆ ಈ ನಮ್ಮ ಭರತಖಂಡದಲ್ಲಿ ವಾಸ್ತವ ಸಂಪೂರ್ಣ ಭಿನ್ನವಾಗಿದೆ. ಆದರೂ ಇದೊಂದು ಉತ್ತಮ ನಿದರ್ಶನ. ಅಸ್ಪೃಶ್ಯರಲ್ಲದವರು ಮತ್ತು ಮೇಲ್‌ಸ್ತರದಲ್ಲಿ ಇದ್ದೇವೆ ಎಂದುಕೊಳ್ಳುವವರು ಇವನ್ನು ಹೊರತುಪಡಿಸಿ ಮಾನವತೆಯ ಆಧಾರದ ಮೇಲೆ ದೇವೋಪಾಸನೆಗೆ ಒಂದಾಗಿ ಮುಂದಾಗಲು ಬದ್ಧರಾಗಬಹುದೇ?

–ಬಿ.ಆರ್.ಅಣ್ಣಾಸಾಗರ, ಸೇಡಂ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.