ADVERTISEMENT

ಬಿಸಿಲಿನ ಝಳ: ಮುಂಜಾಗ್ರತಾ ಕ್ರಮ ಅಗತ್ಯ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 19:30 IST
Last Updated 5 ಏಪ್ರಿಲ್ 2021, 19:30 IST

ಅರಣ್ಯ ಪ್ರದೇಶ ಕಡಿಮೆ ಇರುವ ರಾಯಚೂರಿನಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವ ಉಷ್ಣಾಂಶವು ತೀವ್ರ ಬಿಸಿಗಾಳಿಗೆ ಕಾರಣವಾಗಿದೆ. ಆದರೆ, ಇದರಿಂದ ಸಾರ್ವಜನಿಕರನ್ನು ಪಾರು ಮಾಡಲು ಸರ್ಕಾರ ಮಾತ್ರ ಯಾವುದೇ ಉಪಕ್ರಮಗಳನ್ನು ಪ್ರಕಟಿಸಿಲ್ಲ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿಯಮದ ಅನ್ವಯ, ಉಷ್ಣಾಂಶದಿಂದ ಸಂಭವಿಸಬಹುದಾದ ದುಷ್ಪರಿಣಾಮಗಳ ತಡೆಗೆ ತುರ್ತಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಆಡಳಿತದ ಹೊಣೆಗಾರಿಕೆ. ಆಸ್ಪತ್ರೆಗಳಲ್ಲಿ ಅಗತ್ಯ ಔಷಧ ಸಂಗ್ರಹ, ಸೂಕ್ತ ಚಿಕಿತ್ಸೆ ಸೌಲಭ್ಯ ಒದಗಿಸಬೇಕು. ಸಾರ್ವಜನಿಕ ಸ್ಥಳ, ಬಸ್‌, ರೈಲು ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ದಾನಿಗಳು, ಸಂಘ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡಬೇಕು. ನೀರಿನ ಕಿಯೋಸ್ಕ್‌ ಆರಂಭಿಸಲು ಕ್ರಮ ಕೈಗೊಳ್ಳಬೇಕು.

ಕೆಲಸದ ಸ್ಥಳದಲ್ಲಿ ಕುಡಿಯುವ ನೀರು, ಒಆರ್‌ಎಸ್‌ ಪೊಟ್ಟಣ ಪೂರೈಕೆ, ನೆರಳಿನ ಶೆಡ್‌ ನಿರ್ಮಾಣ, ಶಾಲೆ, ಕಾಲೇಜು, ಸರ್ಕಾರಿ ಕಚೇರಿಗಳು ಮತ್ತು ಕಾರ್ಮಿಕರ ಕೆಲಸದ ವೇಳಾಪಟ್ಟಿ ಬದಲಾವಣೆಗೆ ಅವಕಾಶ ಇದೆ. ಹವಾಮಾನ ಇಲಾಖೆಯ ಮುನ್ಸೂಚನೆ ಕುರಿತು ಕಂದಾಯ ಇಲಾಖೆಯಿಂದ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಬಿಸಿಲಿನ ತಾಪದಿಂದ ಜನ, ಜಾನುವಾರು ಸಾವು, ನೋವು ಸಂಭವಿಸದಂತೆ ಎಚ್ಚರ ವಹಿಸಬೇಕು. ರೋಗ ರುಜಿನಗಳು ಹರಡದಂತೆ ನೋಡಿಕೊಳ್ಳಬೇಕು. ಈಗಿನ ಪರಿಸ್ಥಿತಿ ಮುಂದುವರಿದರೆ ಜನರಲ್ಲಿ ಅನಾರೋಗ್ಯ ಹೆಚ್ಚಾಗಬಹುದು. ಆದಕಾರಣ ಸರ್ಕಾರ ತಡಮಾಡದೆ ಕೂಡಲೇ ಕ್ರಮ ಕೈಗೊಳ್ಳಬೇಕು.

ವಿಜಯಕುಮಾರ್ ಎಚ್.ಕೆ., ರಾಯಚೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.