ADVERTISEMENT

ಅರ್ಥಕ್ಕಿಂತ ಆದೀತು ಅಪಾರ್ಥದ ಅಪಾಯ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 16 ಜುಲೈ 2021, 19:30 IST
Last Updated 16 ಜುಲೈ 2021, 19:30 IST

ರಾಷ್ಟ್ರೀಕೃತ ಬ್ಯಾಂಕುಗಳ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಪ್ರಶ್ನೋತ್ತರ ಇರಬೇಕೆಂಬ ಬೇಡಿಕೆಗೆ ಸಂಬಂಧಿಸಿದ ಲೇಖನದಲ್ಲಿ (ಸಂಗತ, ಜುಲೈ 16) ಲೇಖಕ ಡಿ.ಎಸ್‌.ರಾಮಸ್ವಾಮಿ ಅವರ ಒಂದು ವಾಕ್ಯ ಹೀಗಿದೆ: ‘ಕನ್ನಡಕ್ಕೆ ತರ್ಜುಮೆಯಾದ ಮೂಲ ಇಂಗ್ಲಿಷ್ ಪ್ರಶ್ನೆಯನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಅಪಾಯವೇ ಹೆಚ್ಚು’. ಇದಕ್ಕೆ ನಾನೇ ಉದಾಹರಣೆ. ಕೆಲ ದಿನಗಳ ಹಿಂದೆ ನಾನು ವಾಟ್ಸ್ಆ್ಯಪ್ ನೋಡುತ್ತಿದ್ದಾಗ, ಯಾವುದನ್ನೋ ಅನುಮೋದಿಸಲು ಅದು ನನ್ನನ್ನು ಕಟ್ಟಿಹಾಕಿತು. ಮುಂದುವರಿಯಲು ಎರಡರಲ್ಲಿ ಒಂದು ಆಯ್ಕೆಯನ್ನು ಮಾಡಲೇಬೇಕಿತ್ತು. ಪ್ರಶ್ನೆ ಹಾಗೂ ಆಯ್ಕೆಗಳು ಕನ್ನಡದಲ್ಲೇ ಇದ್ದವು. ಅದರಲ್ಲಿ ಒಂದು ಆಯ್ಕೆ ‘ಅಸ್ತಾಪಿಸು’ ಎಂದಿತ್ತು. ಉತ್ತರ ಭಾರತದ ಮಂತ್ರಿಮಹೋದಯರ ಭಾಷಣಗಳಲ್ಲಿ ಈ ‘ಅಸ್ಥಾಪನ’ ಪದ ಕೇಳಿದ್ದೆ. ಸ್ಥಾಪನೆಯನ್ನು ಇವರು ಅಸ್ಥಾಪನೆ ಎನ್ನುತ್ತಾರೆಂದು ಅರ್ಥ ಮಾಡಿಕೊಂಡಿದ್ದೆ. ಸ್ನಾನಕ್ಕೆ ಅಸ್ನಾನ ಅನ್ನುತ್ತಾರೆ. ತಾವು ಆಡುವ ಪದಕ್ಕೆ ಅ ಹಾಗೂ ಇ ಇತ್ಯಾದಿಗಳನ್ನು ಬಳಸುತ್ತಾರೆ ಎಂಬುದನ್ನು ತಿಳಿದುಕೊಳ್ಳುವಷ್ಟು ಜಾಣತನ ಬೆಳೆಸಿಕೊಂಡಿದ್ದೆ. ಅದನ್ನು ಹಾಗೂ ಜೊತೆಗೆ ಗೂಗಲ್ ಟ್ರಾನ್ಸ್‌ಲೇಶನ್‌ನ ಅವಾಂತರಗಳನ್ನು ನೆನಪಿಸಿಕೊಂಡು, ಅಸ್ಥಾಪನಗೆ ಸ್ಥಾಪಿಸು ಎಂದು ಅರ್ಥ ಮಾಡಿಕೊಂಡು ಅದಕ್ಕೆ ಅನುಮೋದನೆ ನೀಡಿದೆ. ಕ್ಷಣಮಾತ್ರದಲ್ಲಿ ವಾಟ್ಸ್ಆ್ಯಪ್‌ ಮಾಯವಾಗಿ ಹೋಯಿತು! ಮೊಬೈಲ್‌ನಲ್ಲಿ ಎಲ್ಲಿ ಹುಡುಕಿದರೂ ಅದರ ಸುಳಿವೇ ಇಲ್ಲ.ಅರ್ಥವಾಗುವ ಹಾಗೆ ಹೇಳಬೇಕೆಂದರೆ, ವಾಟ್ಸ್ಆ್ಯಪ್‌ ಡಿಲೀಟ್ ಆಗಿಹೋಯಿತು!

ನಾನು ಕನ್ನಡಿಗ. ನನಗೆ ಕನ್ನಡದ ಬಗೆಗೆ ಹೆಮ್ಮೆಯಿದೆ. ಆದರೆ ಕನ್ನಡಿಗರು ಬದುಕಬೇಕೆಂದರೆ ಇಂಗ್ಲಿಷ್ ಕಲಿಯಲೇಬೇಕು ಎಂದು ನಾನು ಯಾವತ್ತಿನಿಂದಲೂ ವಾದಿಸುತ್ತಲೇ ಬಂದಿದ್ದೇನೆ. ಆಗ ಕನ್ನಡವೂ ಉಳಿಯುತ್ತದೆ ಕನ್ನಡಿಗರೂ ಉಳಿಯುತ್ತಾರೆ. ಕನ್ನಡಿಗರು ಉಳಿಯದೇ ಕನ್ನಡ ಉಳಿಯಲಾರದು.

– ಡಾ. ಈಶ್ವರ ಶಾಸ್ತ್ರಿ ಮೋಟಿನಸರ,ಶಿರಸಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.