ADVERTISEMENT

ಬೀದಿ ಬೀದಿಯಲ್ಲಿ ಪ್ರತಿಮೆ ಬೇಡ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 19:32 IST
Last Updated 31 ಡಿಸೆಂಬರ್ 2020, 19:32 IST

‘ಬೀದಿ ಬೀದಿಯಲ್ಲಿ ವಿಷ್ಣು ಪುತ್ಥಳಿ’ ಬೇಡ ಎಂದು ಭಾರತಿ ವಿಷ್ಣುವರ್ಧನ್‌ ಅವರು ವಿಷ್ಣು ಅಭಿಮಾನಿಗಳಿಗೆ ಕರೆ ಕೊಟ್ಟಿದ್ದಾರೆ (ಪ್ರ.ವಾ., ಡಿ. 31). ಈ ಕರೆಗೆ ಪ್ರೇರಣೆ– ಬೆಂಗಳೂರಿನ ಟೋಲ್‌ಗೇಟ್‌ ಬಳಿಯ ವೃತ್ತದಲ್ಲಿದ್ದ ವಿಷ್ಣು ಪ್ರತಿಮೆಯ ಧ್ವಂಸ ಪ್ರಕರಣ. ಪ್ರತಿಮೆ ಸ್ಥಾಪನೆಗೆ ಸ್ಪರ್ಧೆ ನಡೆಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಭಾರತಿ ಅವರ ಈ ಕರೆಗೆ ಹೆಚ್ಚು ಮಹತ್ವ ಇದೆ. ಪ್ರತಿಮೆ ಸ್ಥಾಪನೆಯ ಮೂಲ ಉದ್ದೇಶ ಹಿನ್ನೆಲೆಗೆ ಸರಿದು, ಕೇವಲ ಪ್ರತಿಷ್ಠೆಗಾಗಿ ಸ್ಥಾಪನೆಯಾಗುತ್ತಿರುವ ಪ್ರತಿಮೆಗಳು ಸಂಘರ್ಷಗಳಿಗೆ ಕಾರಣವಾಗುತ್ತಿರುವುದನ್ನು ನೋಡುತ್ತಿದ್ದೇವೆ.

ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪನೆಯಾಗುವ ಯಾವುದೇ ಪ್ರತಿಮೆಯು ಧ್ವಂಸದ ಭಯದಿಂದ ಮುಕ್ತವಾಗುವುದಿಲ್ಲ. ಒಂದು ಪ್ರತಿಮೆ ಯಾವುದೋ ಒಂದು ವರ್ಗದವರಿಗೋ ಜಾತಿಯವರಿಗೋ ಅಭಿಮಾನಿಗಳಿಗೋ ಪ್ರಿಯವಾಗಬಹುದು. ಸರ್ವರಿಗೂ ಸರ್ವಕಾಲಕ್ಕೂ ಪ್ರಸ್ತುತವಾಗಬಹುದಾದ ಮಹಾನ್ ಚೇತನಗಳನ್ನು ಒಂದು ಜಾತಿಯವರೋ ಒಂದು ಪಂಥದವರೋ ಒಂದು ವರ್ಗದವರೋ ಗುತ್ತಿಗೆ ಪಡೆದವರಂತೆ ನಡೆದುಕೊಂಡು ಆ ಮಹಾನ್ ಚೇತನಗಳ ಹಿರಿಮೆಗೆ ಭಂಗ ತರುತ್ತಿದ್ದಾರೆ. ಈ ಕಾರಣದಿಂದ, ಭಾರತಿ ಅವರ ಕರೆಯನ್ನು ವಿಷ್ಣು ಅಭಿಮಾನಿಗಳಷ್ಟೇ ಅಲ್ಲ, ಪ್ರತಿಮೆ ಸ್ಥಾಪನೆಯ ಉಮೇದಿನಲ್ಲಿರುವ ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕಾಗಿದೆ.

–ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.