ADVERTISEMENT

ಮಿತಿ ಮೀರಿದೆ ಲಂಚದ ದಾಹ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 19:31 IST
Last Updated 30 ಮಾರ್ಚ್ 2021, 19:31 IST

‘ಪೌರಕಾರ್ಮಿಕರಿಗೆ ಪೊರಕೆ ಖರೀದಿಗೂ ಹಣ ನೀಡುವುದಿಲ್ಲ, ಅದನ್ನೂ ನಾವೇ ಖರೀದಿಸಬೇಕಾಗಿದೆ’ ಎಂಬ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ಪೌರಕಾರ್ಮಿಕರ ಸಂಘದ ಜಂಟಿ ಕಾರ್ಯದರ್ಶಿ ಹೇಳಿಕೆಯು (ಪ್ರ.ವಾ., ಮಾರ್ಚ್‌ 30) ಇಂದಿನ ಸರ್ಕಾರ ಮತ್ತು ಅಧಿಕಾರಿಗಳ ಆಡಳಿತದ ಕಾರ್ಯವೈಖರಿಯ ದಯನೀಯ ಸ್ಥಿತಿಯನ್ನು ಎತ್ತಿ ತೋರಿಸುತ್ತದೆ.

ಸರ್ಕಾರದ ಕಿವಿಗಳಿಗೆ ಅಥವಾ ಕಣ್ಣುಗಳಿಗೆ ಇಂಥ ಸಣ್ಣ ಸಣ್ಣ ಸಂಗತಿಗಳು ತಲುಪದೇ ಸೋರಿಹೋಗುತ್ತವೆ. ಪೊರಕೆ ಕತೆ ಇರಲಿ, ಕೆಲವು ಹಳ್ಳಿಗಳಲ್ಲಿ ಮರಣ ಅಥವಾ ಜನನ ಪ್ರಮಾಣ ಪತ್ರವನ್ನು ತೆಗೆದುಕೊಳ್ಳುವುದಕ್ಕೂ ಆಗದ ದುಸ್ತರ ಪರಿಸ್ಥಿತಿ ಇದೆ. ಅಂಗವಿಕಲರು, ವಯೋವೃದ್ಧರ ಪಿಂಚಣಿ, ಭತ್ಯೆ, ಪಡಿತರ, ವಿಧವಾ ವೇತನ ಪಡೆಯಬೇಕೆಂದರೆ, ಅಂಚೆ ಇಲಾಖೆಯಿಂದಲೋ ಪಂಚಾಯಿತಿ ವ್ಯಾಪ್ತಿಯಿಂದಲೋ ದೊರಕಬಹುದಾದ ಕನಿಷ್ಠ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದರೆ ಯಮಯಾತನೆ. ನೂರೋ ಇನ್ನೂರೋ ರೂಪಾಯಿ ಲಂಚ ಕೊಟ್ಟು ಪಡೆದುಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಇದೆ.

ಎಲ್ಲೆಡೆಯೂ ಲಂಚದ ದಾಹ ಮಿತಿಮೀರಿದೆ. ಫಲಾನುಭವಿಗಳು ಗಟ್ಟಿಯಾಗಿ ಮಾತನಾಡಿದರೆ ನಾಳೆ ಅವರ ಸವಲತ್ತುಗಳನ್ನೇ ಇಲ್ಲವಾಗಿಸುವಷ್ಟು ಭಯದ ವಾತಾವರಣ ಸೃಷ್ಟಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳಲ್ಲಿ ದೂರಿದರೆ
ಪ್ರಯೋಜನವಿಲ್ಲ. ಬೇಲಿಯೇ ಎದ್ದು ಹೊಲ ಮೇಯುವಂತಿದೆ ಇಂದಿನ ಸ್ಥಿತಿ. ಹೀಗಿರುವಾಗ ಯಾರನ್ನು ದೂಷಿಸುವುದು, ಯಾರಲ್ಲಿ ಅಳಲು ತೋಡಿಕೊಳ್ಳುವುದು? ಇಲ್ಲಿ ಪೊರಕೆ ಖರೀದಿ ಒಂದು ಉದಾಹರಣೆ ಅಷ್ಟೆ.

ADVERTISEMENT

ಅಶ್ವತ್ಥ ಕಲ್ಲೇದೇವರಹಳ್ಳಿ, ಕುಂಕಾನಾಡು, ಕಡೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.