ADVERTISEMENT

ಶಸ್ತ್ರಚಿಕಿತ್ಸೆಗೆ ಅನುಮತಿ: ಕೆಸರೆರಚಾಟ ನಿಲ್ಲಲಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 20:25 IST
Last Updated 26 ನವೆಂಬರ್ 2020, 20:25 IST

ಆಯುರ್ವೇದ ಸ್ನಾತಕೋತ್ತರ ಪದವೀಧರರಿಗೆ ಶಸ್ತ್ರಚಿಕಿತ್ಸೆ ನಡೆಸಲು ಅನುಮತಿ ಕೊಡುವುದರ ಬಗ್ಗೆ ಡಾ. ಕೆ.ಎಸ್.ಗಂಗಾಧರ ಅವರ ಆತಂಕ ಸಕಾರಣವಾದುದು (ವಾ.ವಾ., ನ. 24). ಆದರೆ, ಆಯುರ್ವೇದ ಮತ್ತು ಆಧುನಿಕ ವೈದ್ಯ ವಿಜ್ಞಾನ ಎರಡೂ ವಿಭಾಗಗಳು ಪರಸ್ಪರ ಕೆಸರೆರಚಾಡುವುದನ್ನು ಸಾಮಾಜಿಕ ಮಾಧ್ಯಮದಲ್ಲಿ ಕಂಡಾಗ, ಇದಕ್ಕೆ ನೇರ ಹೊಣೆಯಾಗಿರುವ ಕೇಂದ್ರ ಸರ್ಕಾರಕ್ಕೆ ನಾವು ಏಕೆ ಪ್ರಶ್ನೆಗಳನ್ನು ಕೇಳುತ್ತಿಲ್ಲ ಎನಿಸುತ್ತದೆ.

ಪುರಾತನವಾದದ್ದೆಲ್ಲವೂ ಒಳಿತು ಎಂದು ಅದರ ತುತ್ತೂರಿ ಊದುತ್ತಲೇ, ಅದನ್ನು ಆಧುನಿಕ ವೈದ್ಯ ವಿಜ್ಞಾನದೊಂದಿಗೆ ಕಲಸುಮೇಲೋಗರ ಮಾಡಲು ಹೊರಟಿರುವ ಸರ್ಕಾರದ ಈ ನಡೆಯ ಹಿಂದೆ ಏನಿದೆ ಎಂದು ವಿಶ್ಲೇಷಿಸುವುದು ಬೇಡವೇ?

ಸೂಕ್ತ ಮೂಲ ಸೌಕರ್ಯಗಳನ್ನು ಒದಗಿಸದೆ, ಗ್ರಾಮಗಳಿಗೆ ಶಸ್ತ್ರಚಿಕಿತ್ಸಾ ತಜ್ಞರು ಹೋಗುವುದಿಲ್ಲ, ಅದಕ್ಕೇ ಆಯುರ್ವೇದ ವೈದ್ಯರನ್ನು ಸಜ್ಜುಗೊಳಿಸುತ್ತೇವೆ ಎನ್ನುವುದು ಒಪ್ಪತಕ್ಕ ಮಾತೇ? ಅವರಾದರೂ ಅಲ್ಲಿ ಹೇಗೆ ನಿಭಾಯಿಸಬೇಕು? ಅಲ್ಲಿಯ ರೋಗಿಗಳ ಗತಿ ಏನಾಗಬೇಕು? ಅಥವಾ ಇದರ ಹಿಂದೆ, ಆಯುರ್ವೇದ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ಹೊಸ ವಿಭಾಗಗಳು, ಹೊಸ ಕಾಲೇಜುಗಳನ್ನು ತೆರೆಯಲು ಯಾರಿಗಾದರೂ ಅನುವು ಮಾಡಿಕೊಡುವ ಹುನ್ನಾರವಿದೆಯೇ? ಈ ಕುರಿತು ಎರಡೂ ವಿಭಾಗದವರು ಪರಸ್ಪರರನ್ನು ವೈರಿಗಳಂತೆ ಪರಿಗಣಿಸದೆ, ತಮ್ಮ ಧ್ಯೇಯವು ರೋಗಿಗಳ ಸೇವೆಯೇ ಎಂಬುದನ್ನು ಮನಗಂಡು, ಈ ವಿಷಯವನ್ನು ಸೌಹಾರ್ದದಿಂದ ಬಗೆಹರಿಸಿಕೊಳ್ಳುವುದು ಒಳಿತು.
-ಡಾ. ಸುಧಾ ಕೆ.,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.