ADVERTISEMENT

ಪ್ಲಾಸ್ಟಿಕ್ ಹಾರ: ಮಣ್ಣಿನ ಉಸಿರಾಟಕ್ಕೆ ಭಾರ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 18:19 IST
Last Updated 14 ಸೆಪ್ಟೆಂಬರ್ 2021, 18:19 IST

ಕರ್ನಾಟಕ ಸಾಹಿತ್ಯ ಅಕಾಡೆಮಿಯು ಬೆಂಗಳೂರಿನಲ್ಲಿ ಇತ್ತೀಚೆಗೆ ನಾಡಿನ ಸಾಹಿತಿ, ಲೇಖಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿತು. ಲಾಕ್‍ಡೌನ್ ಕಾರಣದಿಂದ 2018, 2019 ಮತ್ತು 2020 ಸೇರಿದಂತೆ ಮೂರು ವರ್ಷದ ಪ್ರಶಸ್ತಿಗಳನ್ನು ಒಟ್ಟಿಗೆ ವಿತರಿಸಿದ್ದರಿಂದ ಸುಮಾರು 80 ಲೇಖಕರು ಆಹ್ವಾನಿತರಾಗಿದ್ದರು. ಅದ್ಧೂರಿಯಿಂದ ನಡೆದ ಸಮಾರಂಭದಲ್ಲಿ ಆದ ಒಂದು ಲೋಪವೆಂದರೆ ಸಚಿವ, ಸಂಸದ, ಮುಖ್ಯ ಅತಿಥಿ, ಸಾಹಿತಿಗಳೂ ಸೇರಿದಂತೆ ಸುಮಾರು 80 ಮಂದಿಗೆ ಪ್ಲಾಸ್ಟಿಕ್ ಹಾರಗಳನ್ನು ಹಾಕಿ ಸನ್ಮಾನಿಸಿದ್ದು. ಪ್ಲಾಸ್ಟಿಕ್ ಹಾರವೊಂದಕ್ಕೆ ಕನಿಷ್ಠ 250 ಗ್ರಾಂನಂತೆ ನೂರಕ್ಕೆ 25 ಕೆ.ಜಿ ಮತ್ತು ನೂರು ಪ್ಲಾಸ್ಟಿಕ್ ತಟ್ಟೆಗಳಿಗೆ ಸರಾಸರಿ ಕನಿಷ್ಠ 1 ತಟ್ಟೆಗೆ 250 ಗ್ರಾಂನಂತೆ ನೂರಕ್ಕೆ 25 ಕೆ.ಜಿ. ಸೇರಿ ಒಟ್ಟು 50 ಕೆ.ಜಿ.ಯಷ್ಟು ಪ್ಲಾಸ್ಟಿಕ್ ಕಸ ಕಡೆಗೆ ಮಣ್ಣು ಸೇರುತ್ತದೆ. ಇದು, ಪ್ಲಾಸ್ಟಿಕ್‌ಮುಕ್ತ ಭೂಮಿ ಮಾಡಬೇಕೆಂಬ ಪರಿಸರಸ್ನೇಹಿ ನಡೆಗೆ ತದ್ವಿರುದ್ಧ.

ವಿಪರ್ಯಾಸವೆಂದರೆ ಇಲ್ಲಿ ಸನ್ಮಾನಿತರಾದ ಕೆಲವು ಸಾಹಿತಿ, ಲೇಖಕರು ಕಟ್ಟಾ ಪ್ಲಾಸ್ಟಿಕ್ ವಿರೋಧಿಗಳು. ‘ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ’ ಎಂದು ಮುಂಚೂಣಿಯಲ್ಲಿ ದನಿ ಎತ್ತಿದವರು. ಇಂಥವರೂ ಪ್ಲಾಸ್ಟಿಕ್ ಹಾರಕ್ಕೆ ಕೊರಳೊಡ್ಡಿದ್ದು ನೋಡಿದರೆ, ನಮ್ಮ ನುಡಿಗೂ ನಡೆಗೂ ಸಂಬಂಧವೇ ಇಲ್ಲವೆನಿಸುತ್ತದೆ. ನಾನೂ ಒಬ್ಬ ಸನ್ಮಾನಿತನಾದರೂ ಈ ಹಾರವನ್ನು ಸ್ವೀಕರಿಸದೆ ನಯವಾಗಿ ನಿರಾಕರಿಸಿದೆ. ಎಲ್ಲರೂ ಹಾಗೇ ಮಾಡಬಹುದಿತ್ತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಂಬಂಧಪಟ್ಟಂತೆ ಹತ್ತಾರು ಅಕಾಡೆಮಿಗಳಿವೆ. ಆ ಕಾರ್ಯಕ್ರಮಗಳಲ್ಲೂ ಪ್ಲಾಸ್ಟಿಕ್‍ ಹಾರ, ಪ್ಲಾಸ್ಟಿಕ್ ತಟ್ಟೆ ಬುಟ್ಟಿ ಬಳಕೆ ಇದ್ದದ್ದೆ. ಇನ್ನು ರಾಜ್ಯೋತ್ಸವ, ಬೇರೆ ಬೇರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಇಡೀ ವರ್ಷ ಜರುಗುತ್ತಿರುತ್ತವೆ. ಹೇಗಿದ್ದರೂ, ಎಂದಾದರೂ ನಾವು ಒಮ್ಮೆ ಬಳಸಿದ ಪ್ಲಾಸ್ಟಿಕ್ ಒಂದು ದಿನ ಮಣ್ಣಿಗೆ ಸೇರಿ ಅದರ ಉಸಿರು ಕಟ್ಟುತ್ತದೆ. ಮುಂಬರುವ ರಾಜ್ಯೋತ್ಸವ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಹಾರ, ತಟ್ಟೆ ಬುಟ್ಟಿಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಿ, ಪರಿಸರಸ್ನೇಹಿ ಹೂವಿನಹಾರಗಳನ್ನು ಬಳಸುವುದು ಕ್ಷೇಮ.

ADVERTISEMENT

– ಪ್ರೊ. ಶಿವರಾಮಯ್ಯ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.