ADVERTISEMENT

ನಿತ್ಯೋತ್ಸವದ ಕವಿಗೆ ಹೀಗೊಂದು ನಮನ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2022, 19:45 IST
Last Updated 6 ಫೆಬ್ರುವರಿ 2022, 19:45 IST

1974-75ರ ಆಸುಪಾಸು. ಆಗ ಬೆಂಗಳೂರು ಆಕಾಶವಾಣಿ ಕೇಂದ್ರದಲ್ಲಿ ‘ನವಸುಮ’ ಎಂಬ ಕನ್ನಡ ಭಾವಗೀತೆ ಗಳನ್ನು ಒಳಗೊಂಡ ಹೊಸ ಕಾರ್ಯಕ್ರಮ ಪ್ರತಿವಾರ ಪ್ರಸಾರವಾಗುತ್ತಿತ್ತು. ಕವಿ ನಿಸಾರ್ ಅಹಮದ್ ಅವರನ್ನು ಆಕಾಶ ವಾಣಿ ಕೇಂದ್ರದವರು ಅದರಲ್ಲಿ ಪ್ರಸಾರ ಮಾಡಲು ಒಂದು ಭಾವಗೀತೆಯನ್ನು ಬರೆದು ಕಳುಹಿಸುವಂತೆ ಕೋರಿದರು. ಆದರೆ, ಆ ಸಮಯದಲ್ಲಿ ಶಿವಮೊಗ್ಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಿಸಾರ್ ಅಹಮದ್ ಅವರು ರಜೆ ಸಮಯದಲ್ಲಿ ಬೆಂಗಳೂರಿಗೆ ಬಂದುಬಿಟ್ಟಿದ್ದರು. ಹಾಗಾಗಿ, ಆಕಾಶವಾಣಿಯವರು ಬರೆದ ಪತ್ರ ಅವರಿಗೆ ತಲುಪಿರಲಿಲ್ಲ. ನಂತರ ಅವರನ್ನು ಸಂಪರ್ಕಿಸಿ ಬೇಗ ಬರೆದುಕೊಡುವಂತೆ ಕೇಳಿಕೊಳ್ಳಲಾಯಿತಂತೆ.

ನಿಸಾರ್ ಅವರಿಗೆ ಆತಂಕ ಶುರು. ಯಾವುದರ ಬಗ್ಗೆ ಬರೆಯುವುದು? ಹೇಗಿದ್ದರೂ ನವೆಂಬರ್ ತಿಂಗಳು ಸಮೀಪಿ ಸುತ್ತಿದೆ. ರಾಜ್ಯೋತ್ಸವವನ್ನೇ ನಿಮಿತ್ತವಾಗಿಟ್ಟುಕೊಂಡು ಏಕೆ ಬರೆಯಬಾರದು ಎಂಬ ಜಿಜ್ಞಾಸೆಯ ಫಲವಾಗಿಯೇ ಮೂಡಿಬಂದ ಕವಿತೆ ‘ನಿತ್ಯೋತ್ಸವ’. ಮನೆಯ ಮಹಡಿಯ ಮೇಲೆ ಓಡಾಡುತ್ತಾ ತಾವು ಶಿವಮೊಗ್ಗದ ಸುತ್ತಲೂ ನೋಡಿ ಆನಂದಿಸಿದ ಮಲೆನಾಡಿನ ಸೌಂದರ್ಯ ಮನನಕ್ಕಿಂತ ಬೇರೆ ಬೇಕೆ ಭಾವಗೀತೆಯ ಸಾಂಗತ್ಯಕ್ಕೆ? ಕನ್ನಡ ನಾಡಿನಲ್ಲಿ ಹುದುಗಿರುವ ಭವ್ಯತೆಯೆಲ್ಲಾ ಎರಕ ಹೊಯ್ದಂತೆ ಭಾಸವಾಗುವ ಈ ಕವಿತೆ ಪ್ರತಿಯೊಬ್ಬ ಕನ್ನಡಿಗನ ಭಾವ ಸ್ವರೂಪ ಎಂದು ವರ್ಣಿಸಲಾಗಿದೆ. ನಿಸಾರ್ ಅವರ ನಾಡು, ನುಡಿಯ ಪ್ರೇಮ ಹಲವು ರೀತಿಯಲ್ಲಿ ಅಭಿವ್ಯಕ್ತಗೊಂಡಿದೆ. ‘ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ’ ಎಂದು ಕನ್ನಡದ ಶಕ್ತಿಯನ್ನು ಭೇದಿಸಿ ನೋಡಿದವರು. ‘ಕನ್ನಡ ಬರಿ ಕರ್ನಾಟಕಲ್ಲ, ಅಸೀಮ, ಅದು ಅದಿಗಂತ’ ಎಂದು ಪರಿಭಾವಿಸುವಂತೆ ಕರೆ ನೀಡಿದರು. ಎಲ್ಲಕ್ಕಿಂತ ಹೆಚ್ಚಾಗಿ, ‘ಕನ್ನಡವೆಂದರೆ ಜೀವನಶೈಲಿ, ವಿಧಾನ’ ಎಂದು ಭಾವ ದುಂದುಭಿಯನ್ನು ಕನ್ನಡಿಗರ ಮನದಲ್ಲಿ ತೇಲಿಬಿಟ್ಟರು. ಫೆ. 5 ನಿಸಾರ್ ಅವರ ಜನ್ಮದಿನ. ಅವರ ಕುಟುಂಬವರ್ಗ ಹಾಗೂ ಸನ್ಮಿತ್ರರು ಚಿಕ್ಕಬಳ್ಳಾಪುರದಲ್ಲಿ ನಿಸಾರ್ ಅಹಮದ್ ಎಜುಕೇಷನ್ ಟ್ರಸ್ಟ್‌ನ ಉದ್ಘಾಟನೆ ಹಾಗೂ ನಿಸಾರ್ ಅವರ ಪುತ್ಥಳಿ ಅನಾವರಣಕ್ಕೆ ಆಸ್ಥೆ ವಹಿಸಿದ್ದು ಒಂದು ಉತ್ತಮ ಬೆಳವಣಿಗೆಯೇ ಸರಿ.

-ಪ್ರೊ. ಎಂ.ಎಸ್.ರಘುನಾಥ್,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.