ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 23:30 IST
Last Updated 22 ಜುಲೈ 2025, 23:30 IST
<div class="paragraphs"><p>ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು</p></div>

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

   

ತನಿಖಾ ಸಂಸ್ಥೆಗಳು ದಾಳಗಳಲ್ಲ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣದ ತನಿಖೆಯಲ್ಲಿ ‘ಜಾರಿ ನಿರ್ದೇಶನಾಲಯ’ ನಿಷ್ಪಕ್ಷಪಾತವಾಗಿ ನಡೆದುಕೊಂಡಿಲ್ಲ ಎನ್ನುವ ಸುಪ್ರೀಂ ಕೋರ್ಟ್‌ ಅಭಿಪ್ರಾಯ ಸರಿ ಇದೆ.

ADVERTISEMENT

ತನಿಖಾ ಸಂಸ್ಥೆಗಳು ರಾಜಕೀಯ ಉದ್ದೇಶಗಳಿಗಾಗಿ ಬಳಕೆಯಾದರೆ, ಅವುಗಳ ಮೇಲೆ ಸಾರ್ವಜನಿಕರಿಗೆ ನಂಬಿಕೆ ಉಳಿಯಲು ಹೇಗೆ ಸಾಧ್ಯ? ಕೇಂದ್ರ- ರಾಜ್ಯ ಸರ್ಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ತನಿಖಾ ಸಂಸ್ಥೆಗಳು, ಯಾವುದೇ ಪ್ರಭಾವಕ್ಕೆ ಒಳಗಾಗದೆ ಕಾರ್ಯ ನಿರ್ವಹಿಸಿದಾಗಷ್ಟೇ ಅವುಗಳಿಗೆ ಸಾರ್ವಜನಿಕರಿಂದ ಗೌರವ ಸಿಗುವುದು ಸಾಧ್ಯ.

-ವಿ.ಜಿ. ಇನಾಮದಾರ, ಸಾರವಾಡ

ರಾಜಕಾರಣಿಗಳಿಂದಾಗಿ ಜನರೂ ಸರಕು!

ಇಂದಿನ ರಾಜಕಾರಣಿಗಳು ಎಲ್ಲವನ್ನೂ ಖಾಸಗೀಕರಣ ಮಾಡಿ ಉದ್ಯಮಿಗಳಿಗೆ ಹಣ ಸಂಗ್ರಹಿಸಲು ಅವಕಾಶ ಮಾಡಿಕೊಡುತ್ತಿದ್ದಾರೆ. ಯಾವುದೇ, ಜಿಲ್ಲಾ ಕೇಂದ್ರದಿಂದ ಹೊರಗೆ ಹೋಗಬೇಕೆಂದರೆ ಶುಲ್ಕ ಕಟ್ಟಬೇಕು. ಸರಕುಗಳಿಗೆ ಸುಂಕವಿದ್ದ ಹಾಗೆ ಟೋಲ್‌ಗಳಲ್ಲಿ ಜನರನ್ನೂ ಸರಕನ್ನಾಗಿ ನೋಡಲಾಗುತ್ತಿದೆ; ಹಣ ಕಟ್ಟಿದರೆ ಮಾತ್ರ ಮುಂದೆ ಹೋಗಲು ಅವಕಾಶ ನೀಡಲಾಗುತ್ತಿದೆ.

ಖಾಸಗಿಯವರ ಬಳಿ ರಸ್ತೆ ಮಾಡಿಸಿ ಬಳಕೆದಾರರ ಶುಲ್ಕ ಸಂಗ್ರಹಿಸಲು ಅವಕಾಶ ಕಲ್ಪಿಸುವ ಸರ್ಕಾರದ ಮನಃಸ್ಥಿತಿ ಬ್ರಿಟಿಷರ ಕಾಲದ ಲ್ಯಾಂಡ್ ಲಾರ್ಡ್‌ಗಳನ್ನು ನೆನಪಿಸುವಂತಹದ್ದು. ನಗರ ಪ್ರದೇಶಗಳಲ್ಲಿದ್ದುಕೊಂಡೇ ರೈತರಿಂದ ಗೇಣಿಯ ದುಡ್ಡು ಪಡೆಯುತ್ತಿದ್ದ ಭೂಮಾಲೀಕರ ಮನಃಸ್ಥಿತಿ ಈಗ ಬೇರೆ ರೀತಿಯಲ್ಲಿ ಮುಂದುವರಿದಿದೆ. ಇಂದಿನ ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಷ್ಟೇ ಜನರ ಬಳಿಗೆ ಬರುತ್ತಾರೆ. ಉಳಿದ ಎಲ್ಲ ವ್ಯವಹಾರ ರಾಜಧಾನಿಯಲ್ಲಿ, ಉದ್ಯಮಿಗಳ ಜೊತೆ.

-ಪ್ರಶಾಂತ್ ಕೆ.ಸಿ., ಚಾಮರಾಜನಗರ

ಕತ್ತಿ– ಕುಡಗೋಲು: ಅವಘಡ ತಪ್ಪಿಸಿ

ಕೆಪಿಟಿಸಿಎಲ್ ಮತ್ತು ಎಸ್ಕಾಂ ಸಿಬ್ಬಂದಿ, ರಸ್ತೆಬದಿಯ ಮರಗಳ ಟೊಂಗೆಗಳನ್ನು ವಿದ್ಯುತ್ ತಂತಿಗಳಿಗೆ ತಾಗದಂತೆ ಕತ್ತರಿಸುವುದು ವಾಡಿಕೆ. ಇದು ಮಳೆಗಾಲದಲ್ಲಿ ಸಂಭವನೀಯ ಅಪಾಯ ತಪ್ಪಿಸಲು ನಡೆಯುವ ವಾರ್ಷಿಕ ಪ್ರಕ್ರಿಯೆ. ಸಿಬ್ಬಂದಿಯು ಉದ್ದದ ಕೋಲಿಗೆ ಕತ್ತಿ ಅಥವಾ ಕುಡಗೋಲು ಕಟ್ಟಿಕೊಂಡು ದ್ವಿಚಕ್ರ ವಾಹನಗಳಲ್ಲಿ ಧಾವಿಸುತ್ತಿರುತ್ತಾರೆ. ಹಾಗೆ ಸಾಗುವಾಗ ಹರಿತವಾದ ಕುಡಗೋಲು ರಸ್ತೆಯಲ್ಲಿ ಸಂಚರಿಸುತ್ತಿರುವ ಅಮಾಯಕರಿಗೆ ತಾಗಿ ಅವಘಡ ಸಂಭವಿಸುವ ಸಾಧ್ಯತೆಯಿದೆ. ಇಂಧನ ಸಚಿವರು, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಿದೆ.

-ಡಾ. ಜ್ಞಾನೇಶ್ವರ ಕೆ.ಬಿ., ಮೈಸೂರು 

ರಾಜಕೀಯ ಗೊಡವೆ ಸ್ವಾಮಿಗಳಿಗೇಕೆ?

ಇತ್ತೀಚೆಗೆ ಚಿಕ್ಕ ಮಠದ ಸ್ವಾಮೀಜಿಗಳಿಂದ ಹಿಡಿದು ‘ಜಗದ್ಗುರು’ ಎಂದು
ಕರೆಸಿಕೊಳ್ಳುವವರೂ ಇಂಥವರೇ ಮುಖ್ಯಮಂತ್ರಿ ಆಗಬೇಕೆಂದು ಫರ್ಮಾನು ಹೊರಡಿಸುತ್ತಿದ್ದಾರೆ. ಕೆಲವರದ್ದು ಜಾತಿ ವ್ಯಾಮೋಹ; ಹಲವರದ್ದು ಫಲಾಪೇಕ್ಷೆ. ಅವರು ಮಾತನಾಡುವ ಶೈಲಿ ಆಶೀರ್ವಾದದಂತಿರದೆ ಆಜ್ಞೆಯೇನೋ ಎಂಬಂತೆ ಭಾಸವಾಗುತ್ತದೆ.

ಮುಖ್ಯಮಂತ್ರಿಯ ಆಯ್ಕೆ ಮಾಡುವುದು ಶಾಸಕರು ಇಲ್ಲವೇ ಪಕ್ಷದ ಹೈಕಮಾಂಡ್ ಎನ್ನುವುದು ಸಾಮಾನ್ಯ ಜ್ಞಾನ. ಯಾವುದೇ ಸರ್ಕಾರ ಬಂದರೂ ಮಠಗಳಿಗೆ ಕೊಡುವ ಅನುದಾನಕ್ಕಂತೂ ಕೊರತೆಯಾಗುವುದಿಲ್ಲ. ಹೀಗಿರುವಾಗ ನಮ್ಮ ಕುಲದವರೇ ಸಿ.ಎಂ ಆಗಬೇಕೆಂಬ ಹುಕಿಗೆ ಬಿದ್ದರೆ ಜಗದ್ಗುರುಗಳೆಲ್ಲ ಜಾತಿ ಗುರುವಾಗಿ ಬಿಡುತ್ತಾರಷ್ಟೇ. ಕರ್ನಾಟಕದಲ್ಲಂತೂ ಎಲ್ಲರೂ ಜಾತಿ ಗುರುಗಳಂತೆ ಕಾಣಿಸುತ್ತಿದ್ದಾರೆ. ಇರುವ ಮಠಗಳೆಲ್ಲ ಜಾತಿ ಮಠಗಳೆಂಬ ಸತ್ಯ ಜನಸಾಮಾನ್ಯರಿಗೆ ಅರ್ಥವಾಗಿದೆ.  ಇತ್ತೀಚೆಗೆ ಕೆಲವು ಸ್ವಾಮೀಜಿಗಳು ಸಲ್ಲದ ಕಾರಣಗಳಿಗಾಗಿ ಸುದ್ದಿಯಾಗುತ್ತಿದ್ದಾರೆ. ಅಂತಹವರನ್ನು ನೋಡಿದಾಗ– ರಾಜಕೀಯ ಗೊಡವೆ ಅವರಿಗೇಕೆ, ಕಾವಿ ಬಿಸಾಕಿ ಚುನಾವಣೆಗೆ ಸ್ಪರ್ಧಿಸುವುದು ಉತ್ತಮವಲ್ಲವೇ ಅನ್ನಿಸುತ್ತದೆ.

-ಬಿ.ಎಲ್. ವೇಣು, ಚಿತ್ರದುರ್ಗ

ಎಲ್ಲಾ ಶಾಲೆಗೂ ಸಿ.ಸಿ.ಟಿ.ವಿ ಅಳವಡಿಸಿ

ಸಿಬಿಎಸ್‌ಸಿ ಶಾಲೆಗಳಲ್ಲಿ ಧ್ವನಿಸಹಿತ ದೃಶ್ಯ ದಾಖಲಿಸುವ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆಗೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಸೂಚಿಸಿರುವುದು ಸ್ವಾಗತಾರ್ಹ (ಪ್ರ.ವಾ., ಜುಲೈ 22). ಮಕ್ಕಳೆಂದರೆ ಎಲ್ಲರೂ ಒಂದೇ; ದೇವರ ಸಮಾನ ಎಂಬ ಮಾತಿದೆ. ಮಕ್ಕಳ ರಕ್ಷಣೆಯ ದೃಷ್ಟಿಯಿಂದ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲೂ ಈ ನಿಯಮ ರೂಪಿಸಬೇಕಿದೆ.

-ಗೂಗಿ ಸತ್ಯಮೂರ್ತಿ, ಬೆಂಗಳೂರು

ಸಮಾವೇಶದ ಬದಲು ಗ್ರಾಮಾಭಿವೃದ್ಧಿ

ರಾಜಕೀಯ ಸಮಾವೇಶಗಳಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತದೆ. ಹಣವನ್ನು ಆಡಂಬರಕ್ಕೆ ಪೋಲು ಮಾಡುವ ಬದಲು, ಅರ್ಥಪೂರ್ಣವಾಗಿ ಬಳಸಬಹುದು. ಸಮಾವೇಶಕ್ಕೆ ಬಳಸುವ ಸಂಪನ್ಮೂಲಗಳನ್ನು ಕುಗ್ರಾಮಗಳ ಅಭಿವೃದ್ಧಿಗೆ ವಿನಿಯೋಗ ಮಾಡಬಹುದು.

ಎಷ್ಟೋ ಹಳ್ಳಿಗಳಿಗೆ ಇಂದಿಗೂ ಸಾರಿಗೆ ಸಂಪರ್ಕವಿಲ್ಲ. ಸ್ಮಶಾನಗಳಿಲ್ಲದ ಊರುಗಳು ಸಾಕಷ್ಟಿವೆ. ಇಂಥ ಹಳ್ಳಿಗಳಿಗೆ ಮೂಲ ಸೌಕರ್ಯ ಒದಗಿಸಲು ರಾಜಕೀಯ ಪಕ್ಷಗಳು ಮುಂದಾಗಬೇಕು. ಆಗ, ಅಭಿವೃದ್ಧಿ ಹೊಂದಿದ ಊರಿನ ಫಲಾನುಭವಿಗಳ ಅಭಿಮಾನ ಮತ್ತು ಪ್ರೀತಿ ದೊರೆಯುತ್ತದೆ. ಸಂಪರ್ಕ ಕ್ರಾಂತಿಯ ದಿನಗಳಲ್ಲಿ ‘ಸಾಧನೆ’ಯನ್ನು ಸಮಾವೇಶದ ಮೂಲಕ ತೋರಿಸುವ ಅಗತ್ಯವಿಲ್ಲ. ಯಾವುದಾದರೂ ಗ್ರಾಮವನ್ನು ಅಭಿವೃದ್ಧಿ ಪಡಿಸುವ ಮೂಲಕ ತಮ್ಮ ಪಕ್ಷ– ಸರ್ಕಾರದ ಯಶೋಗಾಥೆಯನ್ನು ಜನರಿಗೆ ಪರಿಣಾಮಕಾರಿಯಾಗಿ ಮುಟ್ಟಿಸಬಹುದಾಗಿದೆ.

 -ಸುರೇಶ್ ಎಸ್., ವಡಗಲಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.