ADVERTISEMENT

ನಿಷ್ಠುರ ಮಾತಿನ ಕುಲುಮೆಯಲ್ಲಿ ಪರೀಕ್ಷೆಗೆ ಒಡ್ಡಲಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 20:00 IST
Last Updated 18 ಫೆಬ್ರುವರಿ 2020, 20:00 IST

ವಿಶ್ವವಿದ್ಯಾಲಯಗಳಿಗೆ ಇತ್ತೀಚೆಗೆ ನೇಮಕಗೊಳ್ಳುತ್ತಿರುವ ಬಲಪಂಥೀಯರಲ್ಲಿ ಹೆಚ್ಚಿನವರಿಗೆ ಯಾವ ವಿದ್ವತ್ತೂ ಇಲ್ಲವೆಂದೂ ಇವರಲ್ಲಿ ಕೆಲವರು ಗೂಂಡಾಗಳೆಂದೂ ಲೇಖಕ ಪುರುಷೋತ್ತಮ ಬಿಳಿಮಲೆ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ (ಪ್ರ.ವಾ., ಫೆ. 15). ನಮ್ಮ ಲೇಖಕರು, ಚಿಂತಕರು ಸತ್ಯವನ್ನು ನುಡಿಯಲು ತಮ್ಮದೇ ರಹಸ್ಯ ಕಾರ್ಯಸೂಚಿಗಳಿಂದಾಗಿ ಹಿಂದೇಟು ಹಾಕುತ್ತಿರುವ ಕಾಲದಲ್ಲಿ ಬಿಳಿಮಲೆಯವರು ಅರ್ಧಸತ್ಯವನ್ನಾದರೂ ಹೇಳುವ ಧೈರ್ಯ ತೋರಿದ್ದಾರೆ. ಆದರೆ, ಅವರು ಸತ್ಯದ ಇನ್ನೊಂದು ಮುಖವನ್ನು ತಮ್ಮ ‘ಎಡಪಂಥೀಯ ಆ್ಯಕ್ಟಿವಿಸಂ’ನ ಕಾರಣಕ್ಕೆ ಬೇಕೆಂದೇ ಮುಚ್ಚಿಡುವ ಬುದ್ಧಿವಂತಿಕೆಯನ್ನು ಪ್ರದರ್ಶಿಸಿದ್ದಾರೆ.

ಹಾಗಿದ್ದರೆ ಅವರ ಈ ಹೇಳಿಕೆಯ ಪ್ರಕಾರ, ವಿಶ್ವವಿದ್ಯಾಲಯಗಳಲ್ಲಿರುವ ಎಡಪಂಥೀಯರೆಲ್ಲರೂ ಪ್ರಕಾಂಡ ಪಂಡಿತರು ಎಂದಾಯಿತಲ್ಲವೇ? ಆದರೆ, ನಮ್ಮ ವಿಶ್ವವಿದ್ಯಾಲಯಗಳು ಪಾತಾಳಕ್ಕಿಳಿಯಲು ಆರಂಭವಾಗಿ ಮೂರು ದಶಕಗಳೇ ಆಗುತ್ತಾ ಬಂದಿದೆ. ಅಲ್ಲಿ ವಿದ್ವತ್ತಿನ ಸೃಷ್ಟಿಕಾರ್ಯ ನಿಂತುಹೋಗಿದೆ. ನಡೆಯುತ್ತಿದ್ದ ಅರ್ಥಪೂರ್ಣ ಚರ್ಚೆ, ವಿಚಾರಗೋಷ್ಠಿ, ವಿಚಾರ ಸಂಕಿರಣಗಳೆಲ್ಲ ಈಗ ಗತವೈಭವದ ಸಂಗತಿಗಳಾಗಿವೆಯಷ್ಟೆ.

ಈಗ ಯಾವುದಾದರೂ ವಿಶ್ವವಿದ್ಯಾಲಯದಲ್ಲಿ ನೈಜ ವಿದ್ವಾಂಸರಿದ್ದಾರೆಯೇ ಎನ್ನುವುದನ್ನು ಭೂತಗನ್ನಡಿ ಹಾಕಿ ಹುಡುಕಬೇಕಾಗಿದೆ. ಹೆಚ್ಚಿನವರು (ಅದರಲ್ಲೂ ಮಾನವಿಕ ವಿಭಾಗದಲ್ಲಿ) ಸಂಶೋಧನೆಗೆ ಆರಿಸಿಕೊಳ್ಳುತ್ತಿರುವ ವಿಷಯಗಳನ್ನು ನೋಡಿದರೆ ನಗು ಬರುತ್ತದೆ. ಲೇಖಕ, ದಿವಂಗತ ಡಿ.ಆರ್. ನಾಗರಾಜ್ ಸುಮಾರು 25 ವರ್ಷಗಳ ಹಿಂದೆಯೇ ಈ ಬಗ್ಗೆ ಆತಂಕ ವ್ಯಕ್ತಪಡಿಸಿ, ‘ಕನ್ನಡ ಸಂಶೋಧನೆಯ ದುಃಸ್ಥಿತಿ’ ಎನ್ನುವ ಲೇಖನವನ್ನೇ ಬರೆದಿದ್ದರು. ಬಲಪಂಥೀಯರನ್ನು ಮಾತ್ರ ವಿಮರ್ಶೆಯ ನಿಕಷಕ್ಕೆ ಒಡ್ಡಿರುವ ಬಿಳಿಮಲೆಯವರು, ತಮ್ಮ ಎಡಪಂಥೀಯ ಸಂಗಾತಿಗಳನ್ನೂ ಹೀಗೆಯೇ ನಿಷ್ಠುರ ಮಾತುಗಳ ಕುಲುಮೆಯಲ್ಲಿ ಪರೀಕ್ಷಿಸಬೇಕಿತ್ತು.

ADVERTISEMENT

ಇವರೆಲ್ಲ ಹೀಗೆ ಎಡ-ಬಲ ಎಂಬ ಹಣೆಪಟ್ಟಿ ಹಚ್ಚುತ್ತಿರುವುದರಿಂದಲೇ, ನಮ್ಮ ನಾಡು ಕಂಡ ನೈಜ ಮತ್ತು ಅಪ್ರತಿಮ ವಿದ್ವಾಂಸರ (ಉದಾಹರಣೆಗೆ, ಸಾ.ಕೃ.ರಾಮಚಂದ್ರರಾವ್, ಶ್ರೀಕಂಠ ಶಾಸ್ತ್ರಿ, ಎಸ್.ಆರ್. ರಾಮಸ್ವಾಮಿ ಮುಂತಾದವರು) ಸಾಹಿತ್ಯ ಮತ್ತು ಸಾಧನೆಗಳ ಬಗ್ಗೆ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಒಂದು ಸಣ್ಣ ಚರ್ಚೆಯೂ ನಡೆದಿಲ್ಲ.

-ಬಿ.ಎಸ್.ಜಯಪ್ರಕಾಶ ನಾರಾಯಣ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.