ADVERTISEMENT

ವಾಚಕರ ವಾಣಿ: 21 ಫೆಬ್ರುವರಿ 2025

ವಾಚಕರ ವಾಣಿ
Published 20 ಫೆಬ್ರುವರಿ 2025, 23:30 IST
Last Updated 20 ಫೆಬ್ರುವರಿ 2025, 23:30 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಇಂಥ ಸ್ವಹಿಂಸೆ ಬೇಕೆ?

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಬಾಲಕಿಯೊಬ್ಬಳು ಕೂರ್ಮಾಸನದಲ್ಲಿ 200 ಕೆ.ಜಿ. ಭಾರದ ಮೂಟೆಗಳನ್ನು ಹೊತ್ತ ಚಿತ್ರವನ್ನು (ಪ್ರ.ವಾ., ಫೆ. 18) ನೋಡಿ ಮೆಚ್ಚುಗೆಯಾಗುವ ಬದಲಿಗೆ ಗಾಬರಿಯಾಯಿತು. ಪ್ರಕೃತಿದತ್ತ ಶರೀರವನ್ನು ಹೀಗೆ ದಂಡಿಸಿ ಸ್ವಹಿಂಸೆಗೆ ಒಳಗಾಗುವುದು ಸಾಹಸ ಅಥವಾ ಪ್ರತಿಭೆ ಎನ್ನಿಸೀತೆ? ಇದರಿಂದ ಯಾರಿಗೇನು ಲಾಭ? ಇದರ ಬದಲಿಗೆ ಇಂತಿಷ್ಟು ಸಮಯದಲ್ಲಿ ಪುಸ್ತಕಗಳಿಗೆ ಬೈಂಡ್‌ ಹಾಕುವುದು, ಚಪಾತಿ ಅಥವಾ ಹೋಳಿಗೆ ಲಟ್ಟಿಸುವುದು, ಧಾನ್ಯ ಒಕ್ಕುವುದು, ದಿರಿಸು ಹೊಲಿಯುವುದು... ಹೀಗೆ ಪೈಪೋಟಿಯಲ್ಲಿ ಮಾಡಬಹುದಾದ ಜನೋಪಯೋಗಿ ಕಾರ್ಯಗಳು ನೂರಾರು ಉಂಟಲ್ಲ.

– ಯೋಗಾನಂದ, ಬೆಂಗಳೂರು

ADVERTISEMENT

ಅನುಕರಣೀಯ ಭೂ ಕಾನೂನು

ಕಠಿಣ ಭೂ ಕಾನೂನಿಗೆ ಉತ್ತರಾಖಂಡ ಸಚಿವ ಸಂಪುಟ ಒಪ್ಪಿಗೆ ನೀಡಿರುವ ಸುದ್ದಿಯನ್ನು (ಪ್ರ.ವಾ., ಫೆ. 20) ಓದಿದ ನಂತರ, ಕರ್ನಾಟಕದಲ್ಲೂ ಇಂತಹ ಕಠಿಣ ಕಾನೂನು ಜಾರಿಗೆ ಬಂದರೆ ಒಳಿತು ಎನಿಸಿತು. ಕರ್ನಾಟಕವು ಬಹು ಉದಾರಿ ರಾಜ್ಯ ಎಂದು ಮೊದಲಿನಿಂದಲೂ ಹೆಸರುವಾಸಿಯಾಗಿದೆ. ಬಹುಶಃ ಈ ಖ್ಯಾತಿಯನ್ನು ಉಳಿಸಲೋ ಎಂಬಂತೆ ಹೊರ ರಾಜ್ಯಗಳ ಸಿರಿವಂತರು (ಇವರಲ್ಲಿ ಹೆಚ್ಚಿನವರು ರಾಜಕೀಯ ಪಕ್ಷಗಳ ಬೆಂಬಲಿಗರು ಎಂಬುದರಲ್ಲಿ ಸಂಶಯವಿಲ್ಲ) ಉದ್ದಿಮೆ ಹಾಗೂ ಅಭಿವೃದ್ಧಿ ಕಾರ್ಯಗಳ ನೆಪದಲ್ಲಿ ರಾಜ್ಯದ ಭೂಮಿಯನ್ನು ಸುಲಭದ ದರದಲ್ಲಿ ಕೊಳ್ಳಲು ರಾಜ್ಯದ ವಿವಿಧ ಪಕ್ಷಗಳ ನೇತೃತ್ವದ ಸರ್ಕಾರಗಳು ಅನುಕೂಲ ಮಾಡಿಕೊಡುತ್ತವೆ. ಆ ಭೂಮಿ ಪಡೆದ ನಂತರ ಉದ್ದೇಶಿತ ಕೆಲಸಗಳು ಕಾರ್ಯರೂಪಕ್ಕೆ ಬರುತ್ತವೋ ಇಲ್ಲವೋ ಎನ್ನುವುದು ಬೇರೆ ವಿಚಾರ. ಆದರೆ ಅಲ್ಲಿನ ಮಂದಿ ಇಲ್ಲಿ ಬಂದು, ಇಲ್ಲಿನವರನ್ನು ಒಕ್ಕಲೆಬ್ಬಿಸಿ, ತಮ್ಮದೇ ವಲಯ ಸ್ಥಾಪಿಸಿ ಪ್ರಭಾವಿಗಳಾಗಿಬಿಡುತ್ತಾರೆ.

ಈಗೀಗ ನಮ್ಮ ಮಂತ್ರಿಗಳು ದಿನಬೆಳಗಾದರೆ ಗ್ರೇಟರ್ ಬೆಂಗಳೂರು, ಬೆಂಗಳೂರು ಉಪನಗರಗಳ ಸೃಷ್ಟಿಯ ಬಗ್ಗೆ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಇದರಿಂದ ಉತ್ತೇಜಿತರಾಗಿ ಹೊರರಾಜ್ಯಗಳ ಸಿರಿವಂತರು ಇಲ್ಲಿನ ಭೂಮಿ ಖರೀದಿಗೆ ಮುಂದಾಗುತ್ತಾರೆ. ಇಲ್ಲಿನ ರೈತರು ಹಣದಾಸೆಗಾಗಿ ತಮ್ಮನ್ನು ತಾವೇ ಮಾರಿಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ. ಇಂತಹುದೇ ಪರಿಸ್ಥಿತಿ ಉತ್ತರಾಖಂಡದಲ್ಲಿ ಇದ್ದುದರಿಂದಲೇ ಅಲ್ಲಿನ ಸರ್ಕಾರ ಕಠಿಣ ಭೂ ಕಾನೂನು ಜಾರಿಗೆ ತರಲು ಸಿದ್ಧವಾಗಿರುವುದು.

– ರಮೇಶ್, ಬೆಂಗಳೂರು

ಮೃತದೇಹ ಎಳೆದೊಯ್ದವರಿಗೆ ಕಠಿಣ ಶಿಕ್ಷೆಯಾಗಲಿ

ಕಲಬುರಗಿಯ ಖಾಸಗಿ ಸಿಮೆಂಟ್ ಕಂಪನಿಯೊಂದರಲ್ಲಿ, ಹೃದಯಾಘಾತದಿಂದ ಮೃತಪಟ್ಟ ಕಾರ್ಮಿಕನ ಮೃತದೇಹವನ್ನು ಇತರ ಕಾರ್ಮಿಕರು ಪ್ರಾಣಿಯಂತೆ ಅಮಾನವೀಯವಾಗಿ ರಸ್ತೆಯಲ್ಲಿ ಎಳೆದೊಯ್ದಿರುವ ಪ್ರಕರಣ ತೀವ್ರ ಆಘಾತ ಉಂಟು ಮಾಡುವಂತಹದ್ದು. ಮೃತದೇಹವನ್ನು ಎಳೆದೊಯ್ಯುತ್ತಿರುವ ವಿಡಿಯೊ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ನಾಗರಿಕ ಸಮಾಜ ತಲೆ ತಗ್ಗಿಸುವಂತಿದೆ. ಬಿಹಾರ ಮೂಲದ ಈ ಕಾರ್ಮಿಕನ ಮೃತದೇಹದ ವಿಲೇವಾರಿಯನ್ನು ಜಿಲ್ಲಾಡಳಿತವು ಹೊಣೆಗಾರಿಕೆಯಿಂದ ನಿಭಾಯಿಸಬೇಕಾಗಿತ್ತು. ಕಾರ್ಖಾನೆಯ ಆಡಳಿತ ಮಂಡಳಿ ಸದಸ್ಯರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ತೋರಿದಂತೆ ಕಾಣುತ್ತದೆ.

ಬಡವರು ಎಂಬ ಕಾರಣಕ್ಕೆ ಯಾವುದೇ ಕಂಪನಿ ಅಥವಾ ಆಡಳಿತ ಮಂಡಳಿಯು ಯಾರನ್ನೂ ಕನಿಷ್ಠವಾಗಿ ನೋಡಬಾರದು. ಪ್ರತಿ ವ್ಯಕ್ತಿಗೂ ಗೌರವ ಕೊಡುವುದು ನಾಗರಿಕ ಸಮಾಜದ ಕರ್ತವ್ಯ. ಕಾರ್ಮಿಕ ಸಚಿವರು ಈಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಸರ್ಕಾರಿ ಸಂಸ್ಥೆ ಅಥವಾ ಖಾಸಗಿ ಕಂಪನಿಗಳಲ್ಲಿ ಇಂತಹ ಪ್ರಕರಣ ಮರುಕಳಿಸದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು. ಮೃತದೇಹ ಎಳೆದೊಯ್ದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಮಾನವೀಯತೆ ಇಲ್ಲದ ಈ ವ್ಯಕ್ತಿಗಳಿಗೆ ದಯೆ ತೋರಬಾರದು.

– ಭೀಮಾಶಂಕರ ದಾದೆಲಿ ಹಳಿಸಗರ, ಶಹಾಪುರ

ಭಿನ್ನ ಅಭಿಪ್ರಾಯಕ್ಕೆ ಈ ಪರಿ ಅಸಹನೆಯೇಕೆ?

ಮಹಾ ಕುಂಭಮೇಳದಲ್ಲಿ ಭಾಗವಹಿಸಿದ್ದ ಭಕ್ತರ ಸಂಖ್ಯೆ ಮತ್ತು ಅಲ್ಲಿಗೆ ಸಂಬಂಧಿಸಿದ ಇತರ ವಿಷಯಗಳ ಕುರಿತು ವಿದ್ವಾಂಸರೊಬ್ಬರು ಬರೆದುಕೊಂಡಿದ್ದ ಅಭಿಪ್ರಾಯವನ್ನು ನಮ್ಮ ಬಡಾವಣೆಯ ಜಾಲತಾಣದ ಗುಂಪಿನಲ್ಲಿ ಹಂಚಿಕೊಂಡಿದ್ದೆ. ಆ ವಿದ್ವಾಂಸರು ಪ್ರಯಾಗರಾಜ್‌ಗೆ ಖುದ್ದಾಗಿ ಹೋಗಿ ಬಂದ ಅನುಭವ ಮತ್ತು ಸಮರ್ಥ ಕಾರಣಗಳನ್ನು ನೀಡಿ, ಕೆಲವು ಪ್ರಶ್ನೆಗಳನ್ನು ಎತ್ತಿದ್ದರು. ಅಲ್ಲಿಗೆ ತಲುಪಲು ಇರುವ ವೈಮಾನಿಕ, ರೈಲು, ರಸ್ತೆ ಸಂಪರ್ಕ, ಸ್ನಾನಘಟ್ಟದಂತಹವುಗಳ ವಿವರ ನೀಡಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತರ ಬಗ್ಗೆ ಅಲ್ಲಿನ ಸರ್ಕಾರ ಸರಿಯಾದ ಮಾಹಿತಿ ನೀಡುತ್ತಿಲ್ಲ ಮತ್ತು ಶುಚಿಗೆ ಮಹತ್ವ ಕೊಡುತ್ತಿಲ್ಲ ಎಂಬಂತಹ ವಿಚಾರಗಳನ್ನು ಹಂಚಿಕೊಂಡಿದ್ದರು. ಈ ಬರಹವನ್ನು ನೋಡಿದ್ದೇ ತಡ ಕೆಲವರು ಅತಿಯಾದ ಪ್ರತಿಕ್ರಿಯೆ ನೀಡಿ, ‘ಇವೆಲ್ಲ ಎಡಪಂಥೀಯರು, ಸೋಗಲಾಡಿಗಳು ಮಾಡುವ ಆರೋಪಗಳು. ನೀವೇಕೆ ಈ ವಿಚಾರಗಳನ್ನು ಹಂಚಿಕೊಂಡಿರಿ. ನಿಮ್ಮೊಳಗೇ ಇಟ್ಟುಕೊಳ್ಳಿ. ಪ್ರಯಾಗರಾಜ್‌ನ ಕುಂಭಮೇಳ ಭಾರತದ ಧರ್ಮ, ಸಂಸ್ಕೃತಿಯ ಪ್ರತೀಕ. ಅದನ್ನು ಪ್ರಶ್ನಿಸುವ ನೀವೆಲ್ಲ ಅದರ ವಿರೋಧಿಗಳು’ ಎಂದೆಲ್ಲ ಬಹಳ ಕಟುವಾಗಿ ಪ್ರತಿಕ್ರಿಯೆ ನೀಡಿದರು.

ಒಂದು ಸಕಾರಣವಾದ ಅಭಿಪ್ರಾಯವನ್ನು ಓದಿ, ಅದರ ಬಗ್ಗೆ ಆಕ್ಷೇಪ ಇದ್ದರೆ ಪರಸ್ಪರ ಹಂಚಿಕೊಳ್ಳದೆ ಅಕಾರಣ ವಾಗಿ ನಿಂದಿಸುವಷ್ಟು ನಮ್ಮ ಸಮಾಜ ಅಸಹನೀಯ ಆಗುತ್ತಿದೆಯೇ ಎಂದು ಆಶ್ಚರ್ಯವಾಯಿತು. ಗಂಗೆ, ಯಮುನೆಯ ಸಂಗಮದ ಭರಾಟೆಯಲ್ಲಿ ನಮ್ಮ ರಾಜ್ಯದ ನದಿಗಳ ಸಂಗಮದ ಹಬ್ಬ ಕಣ್ಣಿಗೆ ಕಾಣಲೇ ಇಲ್ಲ. ‘ಗಂಗೆ ಮಾತ್ರ ಪವಿತ್ರವೆ, ನಮ್ಮ ತುಂಗೆ ಪವಿತ್ರ ಅಲ್ಲವೇ’ ಎಂದು ಕುವೆಂಪು ಉತ್ತರ– ದಕ್ಷಿಣದ ಬಗೆಗಿನ ತಾರತಮ್ಯವನ್ನು ಪ್ರಶ್ನೆ ಮಾಡಿದ್ದರು. ನದಿಗಳು ಎಲ್ಲವೂ ಪವಿತ್ರವೆ. ಅರ್ಥ ಮಾಡಿಕೊಂಡರೆ ಮಾತ್ರ ಜ್ಞಾನತೀರ್ಥಗಳು. ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿನ ನೀರು ಪ್ರಸ್ತುತ ಸ್ನಾನಕ್ಕೆ ಸುರಕ್ಷಿತವಲ್ಲ ಎಂದು ಕೇಂದ್ರ ಸರ್ಕಾರದ ದತ್ತಾಂಶವೇ ಹೇಳಿದೆ. ಆದರೆ ಸ್ನಾನ ಮಾತ್ರವಲ್ಲ ಕುಡಿಯಲು ಸಹ ಯೋಗ್ಯ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಹೇಳುತ್ತಿದ್ದಾರೆ. ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಸ್ವಾಸ್ಥ್ಯ ಹೆಚ್ಚು ಮುಖ್ಯವಾಗಬೇಕು. ಈ ದಿಸೆಯಲ್ಲಿ ಸಂಯಮದಿಂದ ಯೋಚಿಸುವಂತೆ ಆಗಬೇಕು.

– ಎಚ್.ಟಿ.ಕೃಷ್ಣಮೂರ್ತಿ, ಶಿವಮೊಗ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.