ADVERTISEMENT

ವಾಚಕರ ವಾಣಿ: 26 ನವೆಂಬರ್ 2024

ವಾಚಕರ ವಾಣಿ
Published 25 ನವೆಂಬರ್ 2024, 23:38 IST
Last Updated 25 ನವೆಂಬರ್ 2024, 23:38 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಸರ್ಕಾರಿ ಶಾಲೆ: ಆದ್ಯತೆಯ ಕೆಲಸ ಬೇರೆ ಇದೆ

ಮಕ್ಕಳನ್ನು ವಿಮಾನದ ಮೂಲಕ ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯ್ಯುವ ವಿದ್ಯಮಾನ ರಾಜ್ಯದ ಒಂದೆರಡು ಸರ್ಕಾರಿ ಶಾಲೆಗಳಲ್ಲಿ ಇತ್ತೀಚೆಗೆ ನಡೆದಿದೆ. ಹೆಚ್ಚಿನ ಸರ್ಕಾರಿ ಶಾಲೆಗಳು ಕಟ್ಟಡ, ಶೌಚಾಲಯ, ನೀರಿನ ಸೌಲಭ್ಯ, ಪಾಠೋಪಕರಣ, ಪೀಠೋಪಕರಣ, ಕ್ರೀಡಾ ಸಾಮಗ್ರಿ, ಕಂಪ್ಯೂಟರ್‌, ಸಭಾಭವನದಂತಹ ಸೌಲಭ್ಯಗಳನ್ನು ಹೊಂದಿರುವುದಿಲ್ಲ. ಅಲ್ಲಿ ‘ಇಲ್ಲ’ಗಳ ಒಂದು ದೊಡ್ಡ ಪಟ್ಟಿಯೇ ಇರುತ್ತದೆ. ಎಲ್ಲದಕ್ಕೂ ಸರ್ಕಾರವನ್ನೇ ಅವಲಂಬಿಸದೆ, ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಇಂತಹ ಕೊರತೆಗಳನ್ನು ಪೂರೈಸಿಕೊಳ್ಳುವುದರ ಕಡೆ ಹೆಚ್ಚು ಗಮನ ನೀಡುವುದು ಸೂಕ್ತವೆನಿಸುತ್ತದೆ. ಹಾಗೆಯೇ ಒಬ್ಬ ನುರಿತ ಇಂಗ್ಲಿಷ್ ಶಿಕ್ಷಕನನ್ನು ಖಾಸಗಿಯಾಗಿ ನೇಮಿಸಿಕೊಂಡು ಮಕ್ಕಳಿಗೆ ಉತ್ತಮ ಇಂಗ್ಲಿಷ್ ಕಲಿಸಿದರೆ, ಜೊತೆಗೆ ಒಬ್ಬ ಕಂಪ್ಯೂಟರ್ ಆಪರೇಟರನ್ನು ಖಾಸಗಿಯಾಗಿ ನೇಮಕ ಮಾಡಿಕೊಂಡು ಕಂಪ್ಯೂಟರ್ ತರಬೇತಿ ನೀಡಿದರೆ, ಈ ಮಕ್ಕಳೂ ಖಾಸಗಿ ಶಾಲೆಯ ಮಕ್ಕಳಿಗೆ ಸರಿಸಮನಾಗಿ ನಿಲ್ಲುತ್ತಾರೆ. ಶಿಕ್ಷಕರು ಈ ದಿಸೆಯಲ್ಲಿ ಕಾರ್ಯೋನ್ಮುಖರಾಗಬೇಕಿದೆ.

– ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ADVERTISEMENT

ಚಿಂತನೆಗೆ ಹಚ್ಚಿದ ‘ಹೊಸ ಶಿಕ್ಷಣ’

‘ಗಾಂಧೀಜಿ ಮತ್ತು ಸುಸಂಗತ ಶಿಕ್ಷಣ’ ಎಂಬ ನಿರಂಜನಾರಾಧ್ಯ ಅವರ ಲೇಖನವು (ಪ್ರ‌.ವಾ., ನ. 25) ಪ್ರಸ್ತುತ ಸಂದರ್ಭಕ್ಕೆ ಹೆಚ್ಚು ಸಕಾಲಿಕ ಹಾಗೂ ಔಚಿತ್ಯಪೂರ್ಣ. ಇಂದು ನೀಡುತ್ತಿರುವ ಶಿಕ್ಷಣದಲ್ಲಿ ಸ್ವಂತಿಕೆಯೂ ಇಲ್ಲ, ಸಹಜತೆಯೂ ಇಲ್ಲ ಎಂಬ ಗಾಂಧೀಜಿಯ ತಾತ್ವಿಕ ಚಿಂತನೆಯ ವಿಶ್ಲೇಷಣೆಯು ಓದುಗರ ಮನಮುಟ್ಟು

ವಂತಿದೆ. ಗಾಂಧೀಜಿಯು ಹೃದಯಶಿಕ್ಷಣ ಅಥವಾ ಚಾರಿತ್ರ್ಯದ ವಿಕಾಸಕ್ಕೆ ಆದ್ಯತೆ ಕೊಟ್ಟಿದ್ದರು. ಪುಸ್ತಕಜ್ಞಾನದ ಶಿಕ್ಷಣದ ಜೊತೆಜೊತೆಗೆ ಶಾರೀರಿಕ ಶಿಕ್ಷಣ ಹಾಗೂ ಔದ್ಯೋಗಿಕ ಶಿಕ್ಷಣಕ್ಕೂ ಹೆಚ್ಚು ಒತ್ತು ನೀಡಿದ್ದರು. ಕಲಿಯುವ ಹಂತದಲ್ಲಿಯೇ ಪ್ರತಿ ವಿದ್ಯಾರ್ಥಿಯೂ ಯಾವುದಾದರೂ ಉಪಯುಕ್ತವಾದ ಒಂದು ದೈಹಿಕ ಶ್ರಮದ ಕಸುಬನ್ನು ಕಲಿಯಬೇಕೆಂಬುದು ಅವರ ಉದ್ದೇಶವಾಗಿತ್ತು‌. ಶಿಕ್ಷಣವು ಆತ್ಮಗೌರವದಿಂದ, ಸ್ವಾವಲಂಬನೆಯಿಂದ ಬದುಕುವುದನ್ನು ಕಲಿಸಬೇಕು. ಯುವಜನ ಶಿಕ್ಷಣ ಮುಗಿಸಿದ ನಂತರ ಉದ್ಯೋಗಕ್ಕಾಗಿ ಅಲೆಯದೆ, ಸ್ವಯಂ ಉದ್ಯೋಗಗಳನ್ನು ಸೃಷ್ಟಿಸಿಕೊಂಡು ಸ್ವಾವಲಂಬನೆಯ ಬದುಕು ನಡೆಸಲು ಶಿಕ್ಷಣ ಸಹಾಯಕವಾಗಬೇಕು. ಈ ದಿಸೆಯಲ್ಲಿ ಲೇಖನದಲ್ಲಿ ಪ್ರಸ್ತಾಪಿಸಿರುವ ಗಾಂಧೀಜಿಯ ‘ಹೊಸ ಶಿಕ್ಷಣ’ದ ವಿಚಾರಗಳು ಚಿಂತನೆಗೆ ಹಚ್ಚುತ್ತವೆ.

– ಲೋಕೇಶ ಬೆಕ್ಕಳಲೆ, ಬಸರಾಳು, ಮಂಡ್ಯ

ಆತಂಕ ನೀಗಲು ಅಭಿವೃದ್ಧಿ ಮಂತ್ರ

ಡೊನಾಲ್ಡ್‌ ಟ್ರಂಪ್‌ ಅವರು ಎರಡನೆಯ ಬಾರಿಗೆ ಅಮೆರಿಕದ ಅಧ್ಯಕ್ಷರಾದ ಬಳಿಕ ಭಾರತದ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿಗೆ ಅನುಕೂಲವಾಗುವುದೋ ಇಲ್ಲವೋ, ನಮ್ಮ ಯುವಜನರ ಎಚ್‌1ಬಿ ವೀಸಾಗೆ ಸಂಬಂಧಿಸಿದಂತೆ ಅವರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡುಬಿಡಬಹುದು ಎಂಬಂತಹ ಆತಂಕಗಳು ಸೃಷ್ಟಿಯಾಗಿರಬಹುದು. ನಾವು ಹೇಗೆ ಆತ್ಮನಿರ್ಭರ, ಮೇಕ್‌ ಇನ್‌ ಇಂಡಿಯಾ ಎಂದೆಲ್ಲ ನಮ್ಮ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುತ್ತೇವೆಯೋ ಪ್ರತಿ ದೇಶವೂ ತನ್ನ ಸಂಸ್ಥೆಗಳ, ನಾಗರಿಕರ ಪರವಾಗಿ ಇರುವುದು ಸಹಜವಲ್ಲವೇ?

ಆದರೆ ಅದರಿಂದ ನಮಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಉಪಾಯವೆಂದರೆ, ನಮ್ಮಲ್ಲಿ ಶುದ್ಧ ನೀರು, ಗಾಳಿ, ಸಮತಟ್ಟಾದ ರಸ್ತೆ, ಹಸಿರು ಕವಚ, ಸುಸಜ್ಜಿತ ಆಸ್ಪತ್ರೆಯಂತಹ ಮೂಲ ಸೌಕರ್ಯಗಳನ್ನು ಇನ್ನಷ್ಟು ಅಭಿವೃದ್ಧಿ ಗೊಳಿಸುವುದು, ದೇಶಿ ತಾಂತ್ರಿಕ ನೈಪುಣ್ಯಗಳನ್ನು ಉತ್ತಮಗೊಳಿಸಲು ಸಂಶೋಧನೆಗಳಲ್ಲಿ ತೊಡಗುವುದು, ನಮ್ಮ ಎಲ್ಲ ಸಾರ್ವಜನಿಕ ವ್ಯವಸ್ಥೆಗಳನ್ನು ಸುಧಾರಿಸುವುದು, ಉದ್ಯೋಗ ಅವಕಾಶಗಳನ್ನು ಹೆಚ್ಚಿಸುವುದು ಅವಶ್ಯ. ನಮ್ಮಲ್ಲಿ ಮಾನವ ಸಂಪನ್ಮೂಲಕ್ಕೆ, ಪ್ರತಿಭೆಗಳಿಗೆ ಯಾವುದೇ ಕೊರತೆ ಇರದ ಕಾರಣ, ಹೊಸ ಹೊಸ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಯಾವುದೇ ತೊಡಕು ಉಂಟಾಗದು. ಆಗ ನಮ್ಮ ದೇಶವು ಅಭಿವೃದ್ಧಿ ಪಥದಲ್ಲಿ ಇನ್ನಷ್ಟು ಮುಂದೆ ಸಾಗೀತು. ಪ್ರತಿಭಾ ಪಲಾಯನದಂತಹ ಬೆಳವಣಿಗೆ ತಗ್ಗೀತು.

– ಬಿ.ಎನ್‌.ಭರತ್, ಬೆಂಗಳೂರು

ಸದನದ ಸಮಯ ವ್ಯರ್ಥವಾಗದಿರಲಿ

ಸಂಸತ್ತಿನ ಚಳಿಗಾಲದ ಅಧಿವೇಶನ ಸೋಮವಾರದಿಂದ ಆರಂಭವಾಗಿದೆ. ಈ ಅಧಿವೇಶನದಲ್ಲಿ ಹಲವಾರು ವಿಚಾರಗಳು ಚರ್ಚೆಯಾಗಿ ಹದಿನೈದಕ್ಕೂ ಹೆಚ್ಚು ಮಸೂದೆಗಳು ಮಂಡನೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸಂಸತ್ತಿನ ಅಧಿವೇಶನ ಎಂದರೆ ಆಡಳಿತ ಹಾಗೂ ಪ್ರತಿಪಕ್ಷಗಳ‌ ನಡುವಿನ ಜಟಾಪಟಿ, ಜಂಗಿಕುಸ್ತಿಗೆ ವೇದಿಕೆ ಎಂದೇ ಬಿಂಬಿತವಾಗುತ್ತಿದೆ. ಬರೀ ಸದ್ದುಗದ್ದಲ, ಪ್ರತಿಪಕ್ಷಗಳ ಸಭಾತ್ಯಾಗಗಳಿಗಷ್ಟೇ ಸದನದ ಸಮಯ ವ್ಯರ್ಥವಾಗದಿರಲಿ.

ಈ ಬಾರಿಯ ಅಧಿವೇಶನವು ಹಲವು ರೀತಿಯಲ್ಲಿ ಮಹತ್ವದ್ದು. ಜಂಟಿ ಸದನ ಸಮಿತಿಯ ಪರಾಮರ್ಶೆಗೆ ಒಳಗಾಗಿರುವ ವಕ್ಫ್ ಮಸೂದೆಯ ಸಾಧಕ– ಬಾಧಕಗಳ ಬಗ್ಗೆ ಚರ್ಚೆ ನಡೆಸಿ, ಅದಕ್ಕೊಂದು ಮುಕ್ತಿ ಕಾಣಿಸಬೇಕಿದೆ. ಉದ್ಯಮಿ ಗೌತಮ್ ಅದಾನಿ ವಿರುದ್ಧದ ಆರೋಪ, ಮಣಿಪುರ ಜನಾಂಗೀಯ ಸಂಘರ್ಷ, ದೆಹಲಿಯ ವಿಷಗಾಳಿ ಬಿಕ್ಕಟ್ಟು ಸೇರಿದಂತೆ ಹಲವು ವಿಷಯಗಳು ಅಧಿವೇಶನದಲ್ಲಿ ಪ್ರಮುಖವಾಗಿ ಚರ್ಚೆಗೆ ಒಳಪಡುವ ಸಾಧ್ಯತೆ ಇದೆ. ಈ ದಿಸೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯನ್ನು ಒಳಗೊಂಡ ಹತ್ತಾರು ವಿಷಯಗಳ ವಿಸ್ತೃತವಾದ ಚರ್ಚೆಗೆ ಸದನದಲ್ಲಿ ಸಮಯ ಮತ್ತು ಅವಕಾಶ ದೊರೆತರೆ ಒಳ್ಳೆಯದು. ಆಡಳಿತ ಮತ್ತು ವಿರೋಧಿ ಪಾಳಯದ ಎರಡೂ ಕಡೆಯ ಸದಸ್ಯರು ಪರಸ್ಪರ ಆರೋಪ, ಪ್ರತ್ಯಾರೋಪ, ಏರುದನಿ, ನಿಂದನೆಯ ಮಾತುಗಳಿಗೆ ಸೀಮಿತರಾಗದೇ ದಾಖಲೆಗಳನ್ನು ಆಧರಿಸಿ ತಮ್ಮ ವಾದ ಮಂಡಿಸಲಿ. ಸರ್ಕಾರ ಕೂಡ ಸೂಕ್ತ ದಾಖಲೆಗಳೊಂದಿಗೆ ಉತ್ತರಿಸಿದರೆ ಸದನದ ಸಮಯ ಸದ್ವಿನಿಯೋಗವಾದಂತೆಯೇ ಸರಿ.

– ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.